ದೊಡ್ಡಬಳ್ಳಾಪುರ: ಜವಳಿ ಇಲಾಖೆಯಿಂದ ನಗರದಲ್ಲಿನ ವಿದ್ಯುತ್ ಮಗ್ಗಗಳ ಗಣತಿ ನಡೆದ ಸಂದರ್ಭದಲ್ಲಿ ಸೂಕ್ತ ಮಾಹಿತಿ ನೀಡದ ಹಾಗೂ ಕೆಲವು ತಾಂತ್ರಿಕ ತೊಂದರೆಯಿಂದ ವಿದ್ಯುತ್ ಸಬ್ಸಿಡಿ ರದ್ದಾಗಿದ್ದ 1,274 ವಿದ್ಯುತ್ ಮಗ್ಗ ಘಟಕಗಳಿಗೆ ಶೀಘ್ರವೇ ಸಬ್ಸಿಡಿ ಹಣ ಬಿಡುಗಡೆ ಮಾಡಲಾಗುವುದು ಎಂದು ಬೆಸ್ಕಾಂನ ಜಂಟಿ ಪ್ರಧಾನ ವ್ಯವಸ್ಥಾಪಕ ಪ್ರಕಾಶ್ ಭರವಸೆ ನೀಡಿದ್ದಾರೆ.
ಸಬ್ಸಿಡಿ ಹಣ ಬಿಡುಗಡೆ ಸಂಬಂಧ ಕರ್ನಾಟಕ ರಾಜ್ಯ ನೇಕಾರರ ಹಿತರಕ್ಷಣಾ ಸಮಿತಿಯಿಂದ ಜಂಟಿ ಪ್ರಧಾನ ವ್ಯವಸ್ಥಾಪಕರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಗಿದ್ದು, ನೆರವಿನ ಭರವಸೆ ಸಿಕ್ಕಿದೆ.
‘ನೇಕಾರರ ವಿಶೇಷ ಪ್ಯಾಕೇಜ್ ಯೋಜನೆಯಡಿ 20 ಎಚ್.ಪಿವರೆಗೆ ವಿದ್ಯುತ್ ಸಂಪರ್ಕ ಹೊಂದಿರುವ ಜಿಲ್ಲೆಯ 3,226 ವಿದ್ಯುತ್ ಮಗ್ಗ ಘಟಕಗಳ ನೇಕಾರರು ಗಣತಿ ಸಮೀಕ್ಷೆಯಲ್ಲಿ ಪಾಲ್ಗೊಂಡಿಲ್ಲ ಎಂಬ ಕಾರಣ ನೀಡಿ ಸರ್ಕಾರದ ವಿದ್ಯುತ್ ಸಬ್ಸಿಡಿ ರದ್ದುಪಡಿಸಿತ್ತು. 1,274 ವಿದ್ಯುತ್ ಮಗ್ಗ ಘಟಕ, ಮಗ್ಗಗಳ ಪೂರ್ವ ಘಟಕಗಳ ವಿದ್ಯುತ್ ಸಬ್ಸಿಡಿ ರದ್ದಾಗಿತ್ತು. ಈ ದಿನಾಂಕದಿಂದಲೇ ಮತ್ತೆ ಸಬ್ಸಿಡಿ ನೀಡಲು ಒಪ್ಪಿಗೆ ದೊರೆತಿದೆ’ ಸಮಿತಿಯ ತಾಲ್ಲೂಕು ಅಧ್ಯಕ್ಷ ಪಿ.ಎ. ವೆಂಕಟೇಶ್
ತಿಳಿಸಿದ್ದಾರೆ.
ಜವಳಿ ಇಲಾಖೆಯ ಗಣತಿಯಲ್ಲಿ ಭಾಗವಹಿಸಿ ಅಗತ್ಯ ಮಾಹಿತಿ ನೀಡಲಾಗಿತ್ತು. ಆದರೆ, ತಾಂತ್ರಿಕ ಕಾರಣದ ಹಿನ್ನೆಲೆಯಲ್ಲಿ ಹಲವಾರು ವಿದ್ಯುತ್ ಮಗ್ಗ ಘಟಕಗಳಿಗೆ ಸಬ್ಸಿಡಿ ರದ್ದಾಗಿತ್ತು. ಮರು ಸಮೀಕ್ಷೆ ನಡೆಸುವ ಮೂಲಕ ಸಬ್ಸಿಡಿ ಹಣ ಬರುವಂತೆ ನೇಕಾರರ ಹಿತರಕ್ಷಣಾ ಸಮಿತಿಯಿಂದ ಹೋರಾಟ ನಡೆಸಲಾಗಿತ್ತು. ಇದರ ಫಲವಾಗಿ ಮತ್ತೆ ನೇಕಾರರಿಗೆ ಸಬ್ಸಿಡಿ ದೊರೆಯುವಂತಾಗಿದೆ ಎಂದು ತಿಳಿಸಿದ್ದಾರೆ.
ಸಮಿತಿಯ ಕಾರ್ಯದರ್ಶಿ ಅಶೋಕ್, ಖಜಾಂಚಿ ಕೆ. ಮಲ್ಲೇಶ್ ಹಾಜರಿದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.