ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಶ ನಿರ್ಮಾಣಕ್ಕೆ ಶಿಕ್ಷಣ ಅಗತ್ಯ

Last Updated 7 ಸೆಪ್ಟೆಂಬರ್ 2020, 16:17 IST
ಅಕ್ಷರ ಗಾತ್ರ

ವಿಜಯಪುರ: ‘ಸುಸಂಸ್ಕೃತ ಸಮಾಜ ಮತ್ತು ಸದೃಢ ದೇಶ ನಿರ್ಮಾಣ ಮಾಡಬೇಕಿದ್ದರೆ ಶಿಕ್ಷಣಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡಬೇಕು’ ಎಂದು ಕನ್ನಡ ಸಾಹಿತ್ಯ ಪರಿಷತ್‌ ಸದಸ್ಯ ಎಂ.ಸತೀಶ್ ಕುಮಾರ್ ಹೇಳಿದರು.

ಇಲ್ಲಿನ ಗಾಂಧಿಚೌಕದಲ್ಲಿರುವ ಮಹಂತಿನಮಠದಲ್ಲಿ ಕನ್ನಡ ಸಾಹಿತ್ಯ ಪರಿಷತ್‌ ವತಿಯಿಂದ ಆಯೋಜಿಸಿದ್ದ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ವಿಜೇತರಿಗೆ ಅಭಿನಂದನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಸಮಾಜದ ಬೆಳವಣಿಗೆಯಲ್ಲಿ ಶಿಕ್ಷಕರ ಸೇವೆ ಅನನ್ಯ. ಸಮಾಜದ ಒಳಿತಿಗೆ ನಾವೆಲ್ಲರೂ ಕೈ ಜೋಡಿಸಬೇಕು. ಪ್ರಶಸ್ತಿ ಪಡೆದುಕೊಂಡ ಶಿಕ್ಷಕರ ಜವಾಬ್ದಾರಿ ಮತ್ತಷ್ಟು ಹೆಚ್ಚಾಗಿದೆ. ವಿವಿಧ ಕ್ಷೇತ್ರದಲ್ಲಿ ಗಣನೀಯವಾಗಿ ಸಾಧನೆಗೆ ಮಕ್ಕಳಿಗೆ ಉತ್ತಮ ಬೋಧನೆ ಮಾಡುವುದು ಶಿಕ್ಷಕರ ಕರ್ತವ್ಯ’ ಎಂದರು.

ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ವಿಜೇತ ಶಿಕ್ಷಕ ಚಂದ್ರಶೇಖರ ಹಡಪದ್ ಮಾತನಾಡಿ, ‘ಕೋವಿಡ್–19 ತುರ್ತು ಸಂದರ್ಭದಲ್ಲಿಯೂ ಶಿಕ್ಷಕರು ತಮ್ಮ ಸೇವೆ ಮುಂದುವರಿಸಿರುವುದರಿಂದ ಸರ್ಕಾರ ಕೊರೊನಾ ವಾರಿಯರ್ಸ್ ಎಂದು ಪರಿಗಣಿಸಬೇಕು. ಅಜ್ಞಾನವೆಂಬ ಅಂಧಕಾರದಲ್ಲಿ ಮುಳುಗಿರುವವನ ಬಾಳಿನಲ್ಲಿ ಕತ್ತಲು ತೊಡೆದು, ವಿದ್ಯೆಯೆಂಬ ಸುಜ್ಞಾನದ ಬೆಳಕನ್ನು ತರುವ ಶ್ರೇಷ್ಠ ವ್ಯಕ್ತಿಯೇ ಗುರು. ನಮ್ಮನ್ನು ಗುರುತಿಸಿ ಪುರಸ್ಕಾರ ನೀಡಿರುವುದರಿಂದ ನಮ್ಮ ಹೊಣೆಗಾರಿಕೆ ಮತ್ತಷ್ಟು ಹೆಚ್ಚಾಗಿದೆ. ಗುರುವಿನ ಸ್ಥಾನದಲ್ಲಿ ತಂದೆ-ತಾಯಿಗಳು, ಶಿಕ್ಷಕರು, ಹಿರಿಯರು, ಹಿತೈಷಿಗಳು, ಸ್ನೇಹಿತರು ನಿಲ್ಲುತ್ತಾರೆ. ಸಾಧನೆ ಮಾಡಲು ನಿಶ್ಚಯಿಸಿರುವವನಿಗೆ ಹಿಂದೆ ಗುರು ಮುಂದೆ ಗುರಿ ಇರಬೇಕು. ಗುರುವಿನ ಮಾರ್ಗದರ್ಶನವಿಲ್ಲದೆ ಏನನ್ನೂ ಸಾಧಿಸಲು ಸಾಧ್ಯವಿಲ್ಲ ಎಂದರು.

ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳಾದ ಶಿವಕುಮಾರ್, ಪರಮೇಶಯ್ಯ, ವಿ.ಎನ್.ರಮೇಶ್, ನಗರ ಘಟಕದ ಅಧ್ಯಕ್ಷ ಜೆ.ಆರ್.ಮುನಿವೀರಣ್ಣ, ಮುನಿವೆಂಕಟರಮಣಪ್ಪ, ಮೂರ್ತಿಶ್ವರಯ್ಯ, ಮುನಿರಾಜು, ವಿಶ್ವನಾಥ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT