ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೀವನ ಸಾರ್ಥಕಕ್ಕೆ ಗುರುವಿನ ಸಾಕ್ಷಾತ್ಕಾರವಾಗಬೇಕು

Last Updated 10 ಜೂನ್ 2019, 12:43 IST
ಅಕ್ಷರ ಗಾತ್ರ

ವಿಜಯಪುರ: ‘ಮಾನವ ಜೀವನ ಸಾರ್ಥಕವಾಗಬೇಕಾದರೆ ಗುರುವಿನ ಸಾಕ್ಷಾತ್ಕಾರವಾಗಬೇಕಾಗುತ್ತದೆ. ಇಂತಹ ಗುರುಗಳನ್ನು ನೆನೆಯುವಂತಹ ಕಾರ್ಯ ನಡೆಯಬೇಕು’ ಎಂದು ನಿವೃತ್ತ ಶಿಕ್ಷಕ ಶಿವಣ್ಣ ಹೇಳಿದರು.

ಚನ್ನರಾಯಪಟ್ಟಣ ಹೋಬಳಿ ಬೂದಿಗೆರೆ ಗ್ರಾಮದ ಸಿದ್ದಗಂಗಾ ಗ್ರಾಮಾಂತರ ಪ್ರೌಢಶಾಲೆಯ ಆವರಣದಲ್ಲಿ ಹಳೇ ವಿದ್ಯಾರ್ಥಿಗಳಿಂದ ಆಯೋಜಿಸಿದ್ದ ಗುರುವಂದನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ದೇಶಕ್ಕೆ ಉತ್ತಮ ನಾಗರಿಕರನ್ನು ರೂಪಿಸಿಕೊಡುವಲ್ಲಿ ಗುರುವಿನ ಪಾತ್ರ ಮಹತ್ವ ಅನನ್ಯವಾಗಿದೆ. ನಮ್ಮಲ್ಲಿರುವ ಅಜ್ಞಾನವನ್ನು ಹೊರಗೆ ಹಾಕಲು ಶಿಕ್ಷಕರು ಮಾರ್ಗದರ್ಶಿಯಾಗುತ್ತಾರೆ. ಗುರು ಎಂಬ ಶಬ್ದದ ಅರ್ಥವೂ ಇದನ್ನೇ ಹೇಳುತ್ತದೆ. ಅಂಧಕಾರವನ್ನು ದೂರವಾಗಿಸುವವನು. ಪ್ರತಿಯೊಬ್ಬರ ಜೀವನದ ಏಳು-ಬೀಳಿಗೆ ಗುರು ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಕಾರಣನಾಗುತ್ತಾನೆ’ ಎಂದರು.

ನಿವೃತ್ತ ಶಿಕ್ಷಕ ವಿಷಕಂಠ ಮಾತನಾಡಿ, ‘ವೇಗದ ಯುಗದ ವ್ಯವಸ್ಥೆಯಿಂದ ಗುರುಗಳ ಮಹತ್ವ ಕಡಿಮೆಯಾಗುತ್ತಿದೆ. ಶಿಕ್ಷಕರನ್ನೇ ನೋಡದೆ ಆನ್ಲೈನ್ ಶಿಕ್ಷಣ, ವರ್ಚ್ಯುಯಲ್ ಶಿಕ್ಷಣ ವ್ಯವಸ್ಥೆ ಪ್ರಚಲಿತವಾಗುತ್ತಿದೆ. ಎಲ್ಲಾ ಕ್ಷೇತ್ರದಲ್ಲೂ ಹೊಸ ಹೊಸ ಆವಿಷ್ಕಾರಗಳಾಗುತ್ತಿವೆ. ವಿದ್ಯಾರ್ಥಿಗಳು ತಮ್ಮ ಹೊಸ ಸಂಶೋಧನೆಗಳನ್ನು ರಚನಾತ್ಮಕ ಕೆಲಸಗಳಿಗೆ ಉಪಯೋಗಿಸದೆ ವಿಧ್ವಂಸಕ ಕೃತ್ಯಗಳಿಗೆ ಪ್ರಯೋಗಿಸುತ್ತಿರುವುದು ಆತಂಕಕಾರಿ’ ಎಂದರು.

‘ಉಗ್ರರು, ನಕ್ಸಲರ ಹಿಂದೆ ಪ್ರಜ್ಞಾವಂತರಾದ ಎಷ್ಟೊ ವಿದ್ಯಾರ್ಥಿಗಳು ಇದ್ದಾರೆಂಬುದು ವಿಷಾದದ ಸಂಗತಿ. ಈ ರೀತಿಯ ದಾರಿ ತಪ್ಪಿದ ಮಕ್ಕಳಿಗೆ ಯೋಗ್ಯ ಗುರುವಿನಿಂದ ಸರಿಯಾದ ಮಾರ್ಗದರ್ಶನ ದೊರೆಯದೆ ಇರುವುದೇ ಕಾರಣವೆನಿಸುತ್ತಿದೆ’ ಎಂದರು.

ಬೂದಿಗೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ.ಶ್ರೀನಿವಾಸ್‌ಗೌಡ ಮಾತನಾಡಿ, ಶಿಕ್ಷಕರ ಕೊರತೆಯಿಂದ ಕೂಡಿದ ಗ್ರಾಮೀಣ ಶಾಲೆಗಳು, ಮೂಲಸೌಲಭ್ಯವನ್ನು ಕಾಣದ ಅನೇಕ ಶಾಲೆಗಳು ನಮ್ಮ ಕಣ್ಣ ಮುಂದೆ ಇವೆ. ಈಗ ಶಾಲೆಗಳ ಉದ್ಧಾರಕ್ಕಾಗಿ ಅನೇಕ ಸರ್ಕಾರೇತರ ಸಂಸ್ಥೆಗಳು ಟೊಂಕಕಟ್ಟಿ ನಿಂತಿವೆ. ಐಟಿ ಕಂಪನಿಗಳು ನೋಟ್‌ಬುಕ್ ವಿತರಣೆ, ಅಗತ್ಯ ವಸ್ತುಗಳ ಕಿಟ್ ವಿತರಣೆ ಕಾರ್ಯಕ್ರಮ ನಡೆಸುತ್ತಲೇ ಬಂದಿವೆ. ಆದರೆ, ಸರ್ಕಾರ ಇಂಥ ಎನ್‌ಜಿಒಗಳಿಗೆ ಸೂಕ್ತ ಪ್ರೋತ್ಸಾಹ ನೀಡಬೇಕು.

‘ಗುರುಗಳಲ್ಲಿ ಹೇಗೆ ಅರ್ಪಣಾ ಮನೋಭಾವ ಅಗತ್ಯವೋ ಹಾಗೆ ಶಿಷ್ಯರಲ್ಲಿ ಗುರುವನ್ನು ಸತ್ಕರಿಸುವ ಮನಸ್ಸಿರಬೇಕು. ವರ್ಷಕ್ಕೊಂದು ದಿನವಾದರೂ (ಗುರುವಿನ ಹುಟ್ಟುಹಬ್ಬದ ದಿನವಾದರೆ ಇನ್ನು ಚೆನ್ನ) ಗುರುವಿಗೆ ನಮ್ಮ ನಮನ ಸಲ್ಲಿಸುವ ಕಾಯಕವನ್ನು ಇಟ್ಟುಕೊಂಡರೆ ಉತ್ತಮ. ಸಾವಿರಾರು ಶಿಷ್ಯರಿದ್ದರೂ ಗುರು ಮಾತ್ರ ಒಬ್ಬರೇ’ ಎಂದರು.

ನಿವೃತ್ತ ಶಿಕ್ಷಕರನ್ನು ಹಳೆವಿದ್ಯಾರ್ಥಿಗಳು ಸನ್ಮಾನಿಸಿದರು. ಶಿಕ್ಷಣ ಇಲಾಖೆಯ ಸಿ.ಆರ್.ಪಿ.ಅಶ್ವಥ್, ನಿವೃತ್ತ ಶಿಕ್ಷಕ ಎಸ್.ಎಸ್.ಅರವಿಸಿದ್ದಯ್ಯ, ಎಸ್.ಆರ್.ರೇಣುಕಾರಾಧ್ಯ, ಎನ್.ವಿ.ವಿಶ್ವನಾಥ್, ಜೆ.ಪಿ.ಪ್ರಭ, ಕೆ.ಪಿ.ಗಂಗಧಾರಯ್ಯ, ಟಿ.ವಿಶಕಂಠಯ್ಯ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT