ಮಳೆಗಾಗಿ ಆಕಾಶದ ಕಡೆಗೆ ಮುಖಮಾಡಿ ಕುಳಿತ ರೈತ

ಶುಕ್ರವಾರ, ಜೂಲೈ 19, 2019
26 °C
ದಾಸ್ತಾನು ಕೊಠಡಿಗಳಲ್ಲೆ ಇರುವ ಬಿತ್ತನೆ ಬೀಜ, ಮೇವಿಗೂ ತೀವ್ರ ಕೊರತೆ

ಮಳೆಗಾಗಿ ಆಕಾಶದ ಕಡೆಗೆ ಮುಖಮಾಡಿ ಕುಳಿತ ರೈತ

Published:
Updated:
Prajavani

ವಿಜಯಪುರ : ಸತತವಾಗಿ ಆರು ವರ್ಷಗಳಿಂದ ತೀವ್ರ ಮಳೆಯ ಕೊರತೆಯನ್ನು ಅನುಭವಿಸುತ್ತಿರುವ ಬಯಲುಸೀಮೆ ಭಾಗದ ರೈತರು, ಮುಂಗಾರು ಆರಂಭಗೊಂಡು ತಿಂಗಳಾಗುತ್ತಿದ್ದರೂ ಇದುವರೆಗೂ ಮಳೆ ಬಾರದೆ ಇರುವ ಕಾರಣದಿಂದಾಗಿ ಈ ಬಾರಿಯೂ ಸಂಕಷ್ಟಕ್ಕೆ ಸಿಲುಕುವಂತಹ ಭೀತಿ ಎದುರಿಸುವಂತಾಗಿದೆ.

ಈಗಾಗಲೇ ಕೃಷಿ ಇಲಾಖೆಯಿಂದ ಕೃಷಿ ಅಭಿಯಾನದ ಮೂಲಕ ಮಣ್ಣು ಪರೀಕ್ಷೆ, ಬಿತ್ತನೆ ಬೀಜಗಳ ಮಾಹಿತಿ, ಯಾವ ತಿಂಗಳಲ್ಲಿ ಯಾವ ಯಾವ ಬೆಳೆಗಳನ್ನು ನಾಟಿ ಮಾಡಬಹುದು ಎನ್ನುವ ಬಗ್ಗೆ ರೈತರಿಗೆ ಅಗತ್ಯ ಮಾಹಿತಿಗಳನ್ನು ಒದಗಿಸಲಾಗಿದೆ ಎಂದು ರೈತ ಮುಖಂಡ ನಾರಾಯಣಸ್ವಾಮಪ್ಪ ಹೇಳುತ್ತಾರೆ.

ಈಗಾಗಲೇ ರಸಗೊಬ್ಬರಗಳನ್ನು ವಿತರಣೆ ಮಾಡಲಿಕ್ಕಾಗಿ ದಾಸ್ತಾನು ಮಾಡಿಕೊಂಡಿದ್ದರೂ ಅವುಗಳನ್ನು ತೆಗೆದುಕೊಂಡು ಬಂದು ಮಳೆಗಾಗಿ ಕಾಯುವಂತಹ ದುಸ್ಥಿತಿ ರೈತರಿಗೆ ಒದಗಿ ಬಂದಿದೆ ಎಂದು ಅವರು ತಿಳಿಸುತ್ತಾರೆ.

ರೈತರು ಭೂಮಿ ಹದಗೊಳಿಸಿ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಲಿಕ್ಕೆ ಕಾಯುತ್ತಿದ್ದರೂ ವರುಣನ ಸುಳಿವು ಸಿಗದೆ ರೈತರು ಕಂಗಾಲಾಗಿದ್ದಾರೆ ಎಂದಿದ್ದಾರೆ.

ವರ್ಷದ ಆರಂಭದಲ್ಲಿ ರೈತರ ಮುಖದಲ್ಲಿ ಕೊಂಚ ಮಟ್ಟಿಗೆ ಮಂದಹಾಸ ಮೂಡಿಸಿದ್ದ ಮುಂಗಾರು ಈಗ ತಿಂಗಳು ಕಳೆದರೂ ಸುಳಿವಿಲ್ಲದಂತಾಗಿರುವುದರಿಂದ ರೈತರಲ್ಲಿ ಆತಂಕ ಹೆಚ್ಚಾಗಿದೆ. ಈ ಭಾಗದಲ್ಲಿ ಕೃಷಿಗಾಗಿ ಕೊಳವೆಬಾವಿ ಕೊರೆಯಿಸಲು ಹೋದರೆ ಅಂತರ್ಜಲದ ಮಟ್ಟ 1,800 ಅಡಿಗಳಿಗೆ ಕುಸಿದಿದ್ದು, ಕೊಳವೆಬಾವಿ ಕೊರೆಸುವ ವೆಚ್ಚವೂ ಹೆಚ್ಚಾಗುತ್ತಿದೆ.

 ಕೃಷಿ ಇಲಾಖೆ ಮೂಲಗಳ ಪ್ರಕಾರ,  ಜೂನ್ ತಿಂಗಳಿನಲ್ಲಿ ವಾಡಿಕೆ ಮಳೆಗಿಂತ ಹೆಚ್ಚಾಗಿಯೇ ಮಳೆ ಬಿದ್ದರೂ ರೈತರಿಗೆ ಪ್ರಯೋಜನವಿಲ್ಲದಂತಾಗಿದೆ.

ಇದುವರೆಗೂ ಕೇವಲ 72 ಎಂ.ಎಂ. ಮಳೆಯಾಗಿದೆ. ಅಲ್ಪ ಸ್ವಲ್ಪ ನೀರಿರುವ ರೈತರು ತರಕಾರಿ ಬೆಳೆಗಳನ್ನು ಬೆಳೆದು ಜೀವನ ಸಾಗಿಸುತ್ತಿದ್ದಾರೆ. ಹೋಬಳಿಯಲ್ಲಿ ರಾಗಿ ಬೆಳೆ ಬೆಳೆಯುವ ಕೃಷಿ ಭೂಮಿ 2,100 ಎಕರೆ ಇದ್ದು ತೊಗರಿ ಬೆಳೆ 100 ಎಕರೆ, ಮುಸುಕಿನ ಜೋಳ 150 ಎಕರೆ, ಕಡಲೆಕಾಯಿ 10 ಎಕರೆ, ತೊಗರಿ 10 ಎಕರೆ, ಮೇವಿಗಾಗಿ ಬೆಳೆಯುವ ಜೋಳ 10ಎಕರೆ ಇದ್ದು ಉಳಿದ ಜಮೀನಿನಲ್ಲಿ ಹಿಪ್ಪುನೇರಳೆ ಹಾಗೂ ದ್ರಾಕ್ಷಿ ಬೆಳೆಯುತ್ತಿದ್ದಾರೆ.

ಸರ್ಕಾರದಿಂದ ಈಗಾಗಲೇ ರೈತ ಸಂಪರ್ಕ ಕೇಂದ್ರಕ್ಕೆ ಸಾಕಷ್ಟು ಬಿತ್ತನೆ ಬೀಜಗಳ ದಾಸ್ತಾನು ಪೂರೈಕೆಯಾಗಿದ್ದರೂ  ಮಳೆಯ ಅಭಾವದಿಂದ ರೈತರಿಗೆ ವಿತರಣೆಯಾಗದೆ ದಾಸ್ತಾನು ಕೇಂದ್ರಗಳಲ್ಲಿಯೇ ಉಳಿದಿದೆ ಎಂದು ರೈತ ಸಂಪರ್ಕ ಕೇಂದ್ರದ ಅಧಿಕಾರಿ ಲಕ್ಷ್ಮಣ ಬೇವಿನಕಟ್ಟೆ ಮಾಹಿತಿ ನೀಡಿದ್ದಾರೆ.

ರಾಗಿ 9 ಕ್ವಿಂಟಲ್ ಪೈಕಿ 140 ಕೆ.ಜಿ ಮಾರಾಟವಾಗಿದೆ. ಎಂ.ಆರ್ 1 ತಳಿಯ ರಾಗಿ 9 ಕ್ವಿಂಟಲ್‌ಗೆ 120 ಕೆ.ಜಿ ಮಾರಾಟವಾಗಿದೆ. ತೊಗರಿ 1.8 ಕ್ವಿಂಟಲ್‌ಗೆ 87 ಕೆ.ಜಿ, ತೊಗರಿ 1.20 ಕ್ವಿಂಟಲ್‌ಗೆ 37 ಕೆ.ಜಿ ಮಾರಾಟವಾಗಿದೆ ಎಂದು ಅವರು ತಿಳಿಸಿದರು.

ಅಲಸಂದಿ 1.80 ಕ್ವಿಂಟಲ್‌ಗೆ 42 ಕೆ.ಜಿ, ಜೋಳ 1.5 ಕ್ವಿಂಟಲ್‌ ಪೈಕಿ ಒಂದು ಕೆ.ಜಿ ಕೂಡ ಮಾರಾಟವಾಗಿಲ್ಲ. ಮೆಕ್ಕೆಜೋಳ 40 ಕೆ.ಜಿಗೆ ಕೇವಲ 5 ಕೆ.ಜಿ ಮಾತ್ರ ಮಾರಾಟವಾಗಿದೆ. ಮೇವಿನ ಜೋಳ 40 ಕೆ.ಜಿಗೆ 10 ಕೆ.ಜಿ, ನೆಲಗಡಲೆ 510 ಕೆ.ಜಿ, 30 ಕೆ.ಜಿ ಮಾತ್ರ ರಾಗಿ ಮಾರಾಟವಾಗುತ್ತಿದೆ ಎಂದು ತಿಳಿಸಲಾಗಿದೆ.

ದುಬಾರಿಯಾದ ಹಸಿ ಮೇವು : ಹಸು, ಎಮ್ಮೆ, ಕರುಗಳಿಗೆ ಮೇವನ್ನು ಒದಗಿಸಲು ಅದಕ್ಕಿಂತ ಹೆಚ್ಚು ಹಣ ಖರ್ಚು ಮಾಡಬೇಕಾದಂತಹ ಪರಿಸ್ಥಿತಿ ಉಂಟಾಗಿದೆ. ಹೋಬಳಿಯಲ್ಲಿ ಸಾಕಷ್ಟು ಹೈನುಗಾರಿಕೆಯನ್ನೇ ಅವಲಂಬಿಸಿ ಜೀವನ ನಡೆಸುತ್ತಿರುವ ರೈತರು, ಈ ಬಾರಿ ಸರಿಯಾದ ಸಮಯಕ್ಕೆ ಮಳೆ ಬಾರದಿರುವ ಕಾರಣ ತಮ್ಮ ರಾಸುಗಳ ಉಳಿವಿಗಾಗಿ ಪಕ್ಕದ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು, ಬಾಗೇಪಲ್ಲಿ, ಚಿಂತಾಮಣಿ ತಾಲ್ಲೂಕುಗಳಿಂದ ಹಸಿ ಮೇವನ್ನು ಒಂದು ಕಡ್ಡಿಗೆ ಐದು ರೂಪಾಯಿಯಂತೆ ಖರೀದಿಸುತ್ತಿದ್ದಾರೆ.

ಆದರೆ, ಸರ್ಕಾರ ಕೆಲ ಪಂಚಾಯಿತಿ ವ್ಯಾಪ್ತಿಯಲ್ಲಿ ಮಾತ್ರ ಒಣಮೇವು ದಾಸ್ತಾನು ಮಾಡಿದ್ದಾರೆ. ಇದರಿಂದ ಕೆಲವೊಂದು ರೈತರಿಗೆ ಮಾತ್ರ ಅನುಕೂಲವಾಗುತ್ತಿದೆ ಎಂದು ರೈತ ಹರೀಶ್ ಹೇಳಿದರು. ರಾಗಿ ಬಿತ್ತನೆಗೆ ಜುಲೈ, ಆಗಸ್ಟ್ ತಿಂಗಳವರೆಗೂ ಕಾಲಾವಕಾಶವಿರುವುದರಿಂದ ಅಷ್ಟರೊಳಗೆ ಮಳೆಯಾದರೆ ಬಿತ್ತನೆಗೆ ಅನುಕೂಲವಾಗಲಿದೆ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !