ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೋಂಕು ತಡೆಗೆ ಮಾರ್ಗಸೂಚಿ ಪಾಲಿಸಿ

ಕೈಗಾರಿಕಾ ಮಾಲೀಕರ ಸಭೆ; ವಿಶೇಷ ಜಿಲ್ಲಾಧಿಕಾರಿ ಸೂಚನೆ
Last Updated 8 ಆಗಸ್ಟ್ 2020, 4:11 IST
ಅಕ್ಷರ ಗಾತ್ರ

ಆನೇಕಲ್: ‘ತಾಲ್ಲೂಕಿನಲ್ಲಿ ಸುಮಾರು 1,900ಕ್ಕೂ ಹೆಚ್ಚು ಕೊರೊನಾ ಪಾಸಿಟಿವ್‌ ಪ್ರಕರಣಗಳು ದೃಢಪಟ್ಟಿವೆ. ಹಾಗಾಗಿ ಸೋಂಕು ಹರಡದಂತೆ ತಡೆಯುವ ಸಲುವಾಗಿ ಸರ್ಕಾರ ಸೂಚಿಸಿರುವ ಮಾರ್ಗಸೂಚಿಗಳನ್ನು ಕೈಗಾರಿಕೆಗಳು ಕಡ್ಡಾಯವಾಗಿ ಪಾಲಿಸಿ ಸಹಕರಿಸಬೇಕು’ ಎಂದು ವಿಶೇಷ ಜಿಲ್ಲಾಧಿಕಾರಿ ಬಸವರಾಜು ತಿಳಿಸಿದರು.

ಅವರು ತಾಲ್ಲೂಕಿನ ಹೆಬ್ಬಗೋಡಿಯಲ್ಲಿ ಕೈಗಾರಿಕಾ ಮಾಲೀಕರ ಸಭೆಯಲ್ಲಿ ಮಾತನಾಡಿದರು.

‘ಕೈಗಾರಿಕಾ ಪ್ರದೇಶಗಳಲ್ಲಿಯೇ ಸೋಂಕಿನ ಪ್ರಕರಣಗಳು ಹೆಚ್ಚಾಗಿವೆ. ಹಾಗಾಗಿ ಕೈಗಾರಿಕೆಗಳಲ್ಲಿ ಸ್ಯಾನಿಟೈಸರ್ ವ್ಯವಸ್ಥೆ, ಮಾಸ್ಕ್‌ ಧರಿಸುವುದು ಮತ್ತು ಶೇ 50ರಷ್ಟು ಸಿಬ್ಬಂದಿ ಮಾತ್ರ ಕಾರ್ಯನಿರ್ವಹಿಸುವಂತೆ ಕ್ರಮ ಕೈಗೊಳ್ಳಬೇಕು. ಕಾರ್ಯನಿರ್ವಹಿಸುವ ಸ್ಥಳಗಳಲ್ಲಿ ಅಂತರ ಕಾಪಾಡಿಕೊಳ್ಳಬೇಕು. ಕೈಗಾರಿಕ ಮಾಲೀಕರ ಸಂಘವು ತಾಲ್ಲೂಕು ಆಡಳಿತದೊಂದಿಗೆ ಕೈಜೋಡಿಸಿ ಕೊರೊನಾ ತಡೆಯಲು ಕೈಗೊಂಡಿರುವ ಜಾಗೃತಿ ಕಾರ್ಯಕ್ರಮಗಳಿಗೆ ಸಹಕಾರ ನೀಡಬೇಕು’ ಎಂದರು.

ತಹಶೀಲ್ದಾರ್‌ ಸಿ.ಮಹಾದೇವಯ್ಯ ಮಾತನಾಡಿ, ‘ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಒಂದೇ ಸೂರಿನಡಿ ಕೊರೊನಾಗೆ ಸಂಬಂಧಿಸಿದ ಎಲ್ಲಾ ಮಾಹಿತಿಗಳು ಲಭ್ಯವಾಗುವಂತೆ 24X7 ಕಾರ್ಯನಿರ್ವಹಿಸುವ ವಾರ್‌ರೂಮ್‌ನ್ನು ಆನೇಕಲ್‌ ತಾಲ್ಲೂಕು ಪಂಚಾಯಿತಿ ಕಚೇರಿಯಲ್ಲಿ ತೆರೆಯಲಾಗಿದೆ’ ಎಂದರು.

‘ಬೆಡ್‌ಗಳ ಲಭ್ಯತೆ, ಕಂಟೈನ್ಮೆಂಟ್‌ ಝೋನ್‌ಗಳ ಮಾಹಿತಿ ಸೇರಿದಂತೆ ಎಲ್ಲಾ ಮಾಹಿತಿಗಳು ಕೇಂದ್ರದ ಮೂಲಕ ದೊರೆಯುವ ವ್ಯವಸ್ಥೆ ಮಾಡಲಾಗಿದೆ. ಆನೇಕಲ್‌ ತಾಲ್ಲೂಕಿನಲ್ಲಿ ಐದು ಕೈಗಾರಿಕಾ ಪ್ರದೇಶಗಳಿಗೆ ನೂರಾರು ಕಂಪನಿಗಳಿವೆ. ಈ ಸಂದರ್ಭದಲ್ಲಿ ಕೈಗಾರಿಕ ಮಾಲೀಕರ ಸಂಘವು ಸರ್ಕಾರದ ಜೊತೆಗೂಡಿ ಸೋಂಕು ತಡೆಯಲು ಜೊತೆಗೂಡಬೇಕು’ ಎಂದರು.

‘ಕೊರೊನಾ ಪಾಸಿಟಿವ್‌ ಬಂದವರು ಮತ್ತು ಕ್ವಾರಂಟೈನ್‌ಗೆ ಒಳಪಟ್ಟವರಿಗೆ ಕಂಪನಿಗಳು ವೇತನ ಕಡಿತ ಮಾಡಬಾರದು’ ಎಂದರು.

ಆನೇಕಲ್‌ ವಿಧಾನಸಭಾ ಕ್ಷೇತ್ರದ ನೋಡೆಲ್‌ ಅಧಿಕಾರಿ ಡಾ.ವೈಷ್ಣವಿ ಮಾತನಾಡಿ, ‘ಆನೇಕಲ್‌ ತಾಲ್ಲೂಕಿನ 13 ಪ್ರಾಥಮಿಕ ಆರೋಗ್ಯ ಕೇಂದ್ರಗಳ ವ್ಯಾಪ್ತಿಯಲ್ಲಿ ಕೊರೊನಾ ತಪಾಸಣೆಯನ್ನು ಹೆಚ್ಚಿಸಲು ಮತ್ತು ಮನೆ ಮನೆ ಸಮೀಕ್ಷೆ ಮಾಡಲು ತಂಡಗಳನ್ನು ರಚಿಸಲಾಗಿದೆ. ಪ್ರತಿ ಮನೆಯಲ್ಲೂ ಜಾಗೃತಿ ಮೂಡಿಸಲು ಎಲ್ಲಾ ಇಲಾಖೆಗಳ ನೆರವು ಪಡೆಯಲಾಗಿದೆ’ ಎಂದರು.

‘ಕಾರ್ಖಾನೆಗಳಲ್ಲಿ ಕೊರೊನಾ ಸೋಂಕು ದೃಢಪಟ್ಟಲ್ಲಿ 48 ಗಂಟೆಗಳ ಲಾಕ್‌ಡೌನ್‌ ಮಾಡಬೇಕು. ಸ್ಯಾನಿಟೈಸ್‌‌ ಮಾಡಿ ನಂತರ ಕಾರ್ಯಾರಂಭ ಮಾಡಬೇಕು. ಕಾರ್ಮಿಕರಿಗೆ ಕೊರೊನಾ ವಿಮೆ ಮಾಡಿಸಲು ಪ್ರೋತ್ಸಾಹಿಸಬೇಕು’ ಎಂದರು.

ತಾಲ್ಲೂಕು ವೈದ್ಯಾಧಿಕಾರಿ ಡಾ.ವಿನಯ್‌, ಹೆಬ್ಬಗೋಡಿ ನಗರಸಭೆಯ ಆಯುಕ್ತ ಚನ್ನರಾಯಪ್ಪ, ಬೊಮ್ಮಸಂದ್ರ ಕೈಗಾರಿಕ ಮಾಲೀಕರ ಸಂಘದ ಅಧ್ಯಕ್ಷ ಎ.ಪ್ರಸಾದ್‌ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT