ಗುರುವಾರ, 30 ನವೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀಗದ ಯೂರಿಯಾ ರಸಗೊಬ್ಬರ ಬೇಡಿಕೆ: ಖರೀದಿಗೆ ಸಾಲುಗಟ್ಟಿ ನಿಂತ ರೈತರು

ಯೂರಿಯಾ ರಸಗೊಬ್ಬರ ದಾಸ್ತಾನು ಖಾಲಿ
Published 27 ಸೆಪ್ಟೆಂಬರ್ 2023, 14:07 IST
Last Updated 27 ಸೆಪ್ಟೆಂಬರ್ 2023, 14:07 IST
ಅಕ್ಷರ ಗಾತ್ರ

ದೊಡ್ಡಬಳ್ಳಾಪುರ: ಒಂದು ವಾರದಿಂದ ತಾಲ್ಲೂಕಿನಲ್ಲಿ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ರಾಗಿ, ಮುಸುಕಿನಜೋಳ ಸೇರಿದಂತೆ ಇತರೆ ಬೆಳೆಗೆ ಹಾಕುವ ಸಲುವಾಗಿ ಯೂರಿಯಾ ರಸಗೊಬ್ಬರಕ್ಕೆ ಬೇಡಿಕೆ ಹೆಚ್ಚಾಗಿದೆ.

ತಾಲ್ಲೂಕಿನ ಎಲ್ಲ ರಸಗೊಬ್ಬರ ಮಾರಾಟದ ಅಂಗಡಿಗಳಲ್ಲೂ ಯೂರಿಯಾ ರಸಗೊಬ್ಬರ ದಾಸ್ತಾನು ಖಾಲಿಯಾಗಿದೆ. ನಗರದ ಟಿಎಪಿಎಂಸಿಎಸ್ ಮಾರಾಟ ಮಳಿಗೆಯಲ್ಲಿ ಮಾತ್ರ ಬುಧವಾರ 29 ಟನ್ ದಾಸ್ತಾನು ಇದ್ದು, ಬೆಳಿಗ್ಗೆಯಿಂದಲೇ ನೂರಾರು ಜನ ರೈತರು ಯೂರಿಯಾ ಖರೀದಿಸಲು ಸಾಲುಗಟ್ಟಿ ನಿಂತಿದ್ದರು. ಒಬ್ಬ ರೈತರಿಗೆ ಒಂದು ಚೀಲ ಮಾತ್ರ ನೀಡಿದರೂ ಸಾಲಿನಲ್ಲಿ ನಿಂತಿದ್ದ ನೂರಾರು ರೈತರು ಯೂರಿಯಾ ಸಿಗದೆ ಬರಿಗೈಯಲ್ಲಿ ವಾಪಸ್‌ ಹೋದರು.

ನಗರದ ತಾಲ್ಲೂಕು ಪಂಚಾಯಿತಿಯಲ್ಲಿ ಬುಧವಾರ ನಡೆದ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನ ಸಭೆಯಲ್ಲಿ ಮಾಹಿತಿ ನೀಡಿದ ಕೃಷಿ ಇಲಾಖೆ ತಾಂತ್ರಿಕ ವಿಭಾಗದ ಅಧಿಕಾರಿ ರೂಪಾ, ತಾಲ್ಲೂಕಿಗೆ ಈ ವರ್ಷದ ಮಳೆಗಾಲಕ್ಕೆ 569 ಟನ್‌ ಯೂರಿಯಾ ಬೇಕಾಗಬಹುದು ಎನ್ನುವ ಗುರಿ ಅಂದಾಜಿಸಲಾಗಿತ್ತು. ಆದರೆ, ಇದುವರೆಗೆ 900 ಟನ್‌ ಯೂರಿಯಾ ಸರಬರಾಜು ಆಗಿದೆ.

ಆದರೂ, ರೈತರಿಂದ ಬೇಡಿಕೆ ಇದೆ. ಮಂಗಳೂರಿನಿಂದ ಯೂರಿಯಾ ತುಂಬಿದ ಗೂಡ್ಸ್ ರೈಲು ಬರುವುದು ವಿಳಂಬವಾಗಿರುವುದರಿಂದ ಮೂರು ದಿನಗಳ ಒಳಗೆ 150ಟನ್ ಯೂರಿಯಾ ಬರಲಿದೆ. ಯೂರಿಯಾ ದಾಸ್ತಾನು ಕೊರತೆ ಇರುವ ಈ ಬಗ್ಗೆ ಹಿರಿಯ ಅಧಿಕಾರಿಗಳ ಗಮನಕ್ಕೂ ತರಲಾಗಿದೆ ಎಂದರು.

ಈ ಬಾರಿ ತಾಲ್ಲೂಕನ್ನು ರಾಜ್ಯ ಸರ್ಕಾರ ಮೊದಲ ಪಟ್ಟಿಯಲ್ಲೇ ಬರಪೀಡಿತ ಪ್ರದೇಶ ಎಂದು ಘೋಷಣೆ ಮಾಡಿದೆ. ಶೇ85ರಷ್ಟು ರಾಗಿ ಬೆಳೆ ವಿಫಲವಾಗಿದೆ. ತಾಲ್ಲೂಕಿನಲ್ಲಿ ಈ ಬಾರಿ ಮುಂಗಾರಿನಲ್ಲಿ ಫಸಲ್‌ ಬಿಮಾ ಬೆಳೆ ವಿಮಾ ಯೋಜನೆಯಡಿ ರಾಗಿ, ಮುಸುಕಿನ ಜೋಳದ ಬೆಳೆಗೆ 16,755 ಜನ ರೈತರು ವಿಮೆ ಹಣ ಪಾವತಿಸಿ ನೋಂದಣಿ ಮಾಡಿಕೊಂಡಿದ್ದಾರೆ. ಬೆಳೆ ಸಮೀಕ್ಷೆ ನಂತರ ನಷ್ಟದ ಅಂದಾಜು ಸಿಗಲಿದೆ. ಸಮೀಕ್ಷೆ ಆಧಾರ ಮೇಲೆ ಬೆಳೆ ವಿಮೆ ಮಾಡಿಸಿರುವ ಎಲ್ಲ ರೈತರಿಗೂ ಫೆಬ್ರುವರಿ ವೇಳೆಗೆ ಖಾತೆಗಳಿಗೆ ಹಣ ಜಮೆಯಾಗಲಿದೆ ಎಂದರು.

ಸರ್ಕಾರ ಬರ ಘೋಷಣೆ ಮಾಡಿದ ನಂತರ ಕುಡಿಯುವ ನೀರು, ಜಾನುವಾರುಗಳಿಗೆ ಮೇವು ಸೇರಿದಂತೆ ಬರ ನಿರ್ವಹಣೆ ಇತರೆ ತುರ್ತು ಕೆಲಸಗಳಿಗೆ ತಾಲ್ಲೂಕಿಗೆ ₹1.25ಕೋಟಿ ಮಂಜೂರು ಮಾಡಿದೆ ಎಂದು ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಟಿ.ಕೆ.ರಮೇಶ್ ಪ್ರಗತಿ ಪರಿಶೀಲನ ಸಭೆ ಅಧ್ಯಕ್ಷತೆ ವಹಿಸಿದ್ದ ಶಾಸಕ ಧೀರಜ್‌ ಮುನಿರಾಜು ಅವರ ಗಮನಕ್ಕೆ ತಂದರು.

ಅಂಕಿ ಅಂಶಗಳು

* ಮೂರು ದಿನಗಳಲ್ಲಿ 150 ಟನ್‌ ಯೂರಿಯಾ ಬರಲಿದೆ * ಈ ಮುಂಗಾರಿಗೆ 569 ಟನ್‌ ಯೂರಿಯಾ ಅಗತ್ಯ ಅಂದಾಜು * ಸರಬರಾಜು ಆಗಿರುವ ಯೂರಿಯಾ 900 ಟನ್‌ * 16,755 ಬೆಳೆ ವಿಮೆಗೆ ನೋಂದಣಿ ಮಾಡಿಕೊಂಡ ರೈತರು * ಶೇ 85ರಷ್ಟು ರಾಗಿ ಬೆಳೆ ವಿಫಲ * ಬರ ನಿರ್ವಹಣೆಗೆ ₹1.25 ಕೋಟಿ ಮಂಜೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT