ಸೋಮವಾರ, ಆಗಸ್ಟ್ 15, 2022
26 °C
ಕಾಳೇನಅಗ್ರಹಾರ: ಆಶಾ ಕಾರ್ಯಕರ್ತೆಯರಿಗೆ ಆಹಾರ ಕಿಟ್‌ ವಿತರಣೆ

ಕೇಂದ್ರ ಸರ್ಕಾರದ ವಿರುದ್ಧ ವಾಕ್ಸಮರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಆನೇಕಲ್: ‘ಕೊರೊನಾ ನಿರ್ವಹಣೆಯಲ್ಲಿ ತಜ್ಞರ ಅಭಿಪ್ರಾಯಕ್ಕೆ ಮನ್ನಣೆ ನೀಡದೇ ಮನಸೋಇಚ್ಛೆ ತೀರ್ಮಾನ ಕೈಗೊಂಡಿದ್ದರಿಂದ ಲಕ್ಷಾಂತರ ಮಂದಿ ತೀವ್ರ ಸಂಕಷ್ಟಕ್ಕೆ ಸಿಲುಕಿ ಪ್ರಾಣ ಕಳೆದುಕೊಳ್ಳುವಂತಹ ಪರಿಸ್ಥಿತಿ ನಿರ್ಮಾಣವಾಯಿತು. ಇದು ಕೇಂದ್ರ ಮತ್ತು ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಸರ್ಕಾರಗಳ ಸ್ವಯಂಕೃತ ಅಪರಾಧ’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ಟೀಕಿಸಿದರು.

ತಾಲ್ಲೂಕಿನ ಬನ್ನೇರುಘಟ್ಟ ಸಮೀಪದ ಕಾಳೇನಅಗ್ರಹಾರದ ಬಳಿ ಮಂಗಳವಾರ ಸಂಜೆ ಯುವ ಕಾಂಗ್ರೆಸ್‌ ರಾಜ್ಯ ಪ್ರಧಾನ ಕಾರ್ಯದರ್ಶಿ ಎಚ್‌.ಆರ್‌. ದೀಪಿಕಾ ರೆಡ್ಡಿ ನೇತೃತ್ವದಲ್ಲಿ ಆಯೋಜಿಸಿದ್ದ ಆಶಾ ಕಾರ್ಯಕರ್ತೆಯರು ಮತ್ತು ಆರೋಗ್ಯ ಕಾರ್ಯಕರ್ತರಿಗೆ ಸನ್ಮಾನ, ಆಹಾರ ಕಿಟ್‌ ವಿತರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ನವೆಂಬರ್‌ನಲ್ಲಿಯೇ ತಜ್ಞರು ಎರಡನೇ ಅಲೆ ಬಗ್ಗೆ ಸೂಚನೆ ನೀಡಿ ಸಲಹೆ ನೀಡಿದ್ದರು. ಆದರೆ, ಕ್ರಮಕೈಗೊಳ್ಳದೇ ದಿವ್ಯ ನಿರ್ಲಕ್ಷ್ಯವಹಿಸಿದ್ದರಿಂದ ಜನರು ಹಾದಿಬೀದಿಗಳಲ್ಲಿ ಚಿಕಿತ್ಸೆಯಿಲ್ಲದೇ, ಬೆಡ್‌ಯಿಲ್ಲದೇ, ಆಮ್ಲಜನಕವಿಲ್ಲದೇ ಸಾಯುವ ಪರಿಸ್ಥಿತಿ ನಿರ್ಮಾಣವಾಯಿತು. ನ್ಯಾಯಾಲಯ ಮಧ್ಯಪ್ರವೇಶ ಮಾಡಿ ಕೇಂದ್ರ ಸರ್ಕಾರವನ್ನು ಎಚ್ಚರಿಸುವ ಪರಿಸ್ಥಿತಿ ನಿರ್ಮಾಣವಾಯಿತು ಎಂದರು.

ಅಖಿಲ ಭಾರತ ವೈದ್ಯಕೀಯ ಪರಿಷತ್‌ ಆರೋಗ್ಯ ಮಂತ್ರಿಗಳೇ ನಿದ್ರೆಯಿಂದ ಎದ್ದೇಳಿ ಎಂದು ಪತ್ರ ಬರೆಯುವ ಹಂತಕ್ಕೆ ತಲುಪಿದ್ದು ದುರದೃಷ್ಟಕರ. ಪ್ರಧಾನಿ ನರೇಂದ್ರ ಮೋದಿ ಅವರು ಮೂರು ತಿಂಗಳು ಸಂಪೂರ್ಣ ಮೌನವಾಗಿದ್ದರು, ಮಾತೇ ಆಡಲಿಲ್ಲ ಎಂದು ಟೀಕಿಸಿದರು.

ಸಂಸದ ಡಿ.ಕೆ. ಸುರೇಶ್‌ ಮಾತನಾಡಿ, ಅಧಿಕಾರ ಮತ್ತು ಹಣ ಬಿಜೆಪಿಯ ಗುರಿ. ಆದರೆ, ಜೀವ ಉಳಿಸಿ ಮತ್ತು ಜೀವನ ಕೊಡಿ ಎಂಬುದು ಕಾಂಗ್ರೆಸ್‌ನ ಒತ್ತಾಯ. ಅಧಿಕಾರಕ್ಕಾಗಿ ಮೇಲಾಟ ನಡೆಯುತ್ತಿದೆ. ಆದರೆ, ಅದು ಬಿಜೆಪಿಯವರ ಆಂತರಿಕ ವಿಚಾರ ಎಂದರು.

ಕೊರೊನಾದಿಂದ ಮೃತಪಟ್ಟವರಿಗೆ ರಾಜ್ಯ ಸರ್ಕಾರ ಒಂದು ಲಕ್ಷ ರೂಪಾಯಿ ಪರಿಹಾರ ಘೋಷಿಸಿರುವುದು ಸ್ವಾಗತಾರ್ಹ. ಆದರೆ, ಆಸ್ಪತ್ರೆಗಳಲ್ಲಿ ಸತ್ತವರನ್ನು ಮಾತ್ರ ಗಣನೆಗೆ ತೆಗೆದುಕೊಳ್ಳದೇ ಮನೆಗಳಲ್ಲಿ, ರಸ್ತೆಗಳಲ್ಲಿ ಕೊರೊನಾದಿಂದ ಮೃತಪಟ್ಟವರನ್ನು ಗುರುತಿಸಿ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.

ಕಾಂಗ್ರೆಸ್‌ ಮುಖಂಡ ಎಚ್‌.ಪಿ. ರಾಜಗೋಪಾಲರೆಡ್ಡಿ ಮಾತನಾಡಿ, ಪ್ರಾಣದ ಹಂಗು ತೊರೆದು ಕೆಲಸ ಮಾಡುತ್ತಿರುವ ಆಶಾ ಕಾರ್ಯಕರ್ತೆಯರನ್ನು ಗೌರವಿಸುವುದು ನಮ್ಮ ಜವಾಬ್ದಾರಿ. ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಕೊರೊನಾದಿಂದಾಗಿ ಆಶಾ ಕಾರ್ಯಕರ್ತೆಯರು ಮೃತಪಟ್ಟರೆ ಅವರ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ₹ 25 ಸಾವಿರ ನೀಡಲಾಗುವುದು ಎಂದು
ತಿಳಿಸಿದರು.

ಬಿಡಿಸಿಸಿ ಬ್ಯಾಂಕ್‌ ನಿರ್ದೇಶಕ ಆರ್.ಕೆ. ರಮೇಶ್‌, ಯುವ ಕಾಂಗ್ರೆಸ್‌ ರಾಷ್ಟ್ರೀಯ ಅಧ್ಯಕ್ಷ ಶ್ರೀನಿವಾಸ್, ರಾಜ್ಯ ಘಟಕದ ಅಧ್ಯಕ್ಷ ರಕ್ಷಾ ರಾಮಯ್ಯ, ಪ್ರಧಾನ ಕಾರ್ಯದರ್ಶಿ ಎಚ್‌.ಆರ್‌. ದೀಪಿಕಾರೆಡ್ಡಿ, ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಕೃಷ್ಣಪ್ಪ, ಮಹಿಳಾ ಕಾಂಗ್ರೆಸ್‌ ಅಧ್ಯಕ್ಷೆ ಜಯಶ್ರೀಗೌಡ, ಮುಖಂಡರಾದ ಬೇಗೂರು ಆಂಜಿನಪ್ಪ, ಅಚ್ಯುತರಾಜು, ಶೋಭಾಗೌಡ, ಶ್ರೀಧರ್‌, ಕಿರಣ್‌, ಕಮ್ಮನಹಳ್ಳಿ ಮಂಜುನಾಥ್‌ ಹಾಜರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.