ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ದೇವನಹಳ್ಳಿ | ದೀಪೋತ್ಸವ: ಹೂವಿನ ಬುಟ್ಟಿಗಳಿಗೆ ಬೇಡಿಕೆ

Published 28 ಮೇ 2024, 6:39 IST
Last Updated 28 ಮೇ 2024, 6:39 IST
ಅಕ್ಷರ ಗಾತ್ರ

ವಿಜಯಪುರ(ದೇವನಹಳ್ಳಿ): ಪಟ್ಟಣದಲ್ಲಿ ಮೇ 28ರಂದು ನಡೆಯಲಿರುವ ಗ್ರಾಮದೇವತೆ ಗಂಗಾತಾಯಿ ಜಾತ್ರಾ ಮಹೋತ್ಸವದ ಅಂಗವಾಗಿ ತಂಬಿಟ್ಟಿನ ದೀಪ ಇರಿಸುವ ಹೂವಿನ ಬುಟ್ಟಿಗಳಿಗೆ ಬೇಡಿಕೆ ಹೆಚ್ಚಾಗಿದ್ದು, ಅವುಗಳ ಬೆಲೆಯೂ ಏರಿಕೆಯಾಗಿದೆ.

ದೀಪೋತ್ಸವದ ಮೆರವಣಿಗೆಯಲ್ಲಿ ತೆರಳುವಾಗ ತಮ್ಮ ಮನೆಯ ದೀಪ ಆಕರ್ಷಣೀಯವಾಗಿರಬೇಕೆಂದು ವಿಶಿಷ್ಟ ಶೈಲಿನ ಹೂವಿನ ಬುಟ್ಟಿ ತಯಾರಿಸಲು ಹೂವಿನ ವ್ಯಾಪಾರಿಗಳಿಗೆ ಮುಂಗಣ ಹಣ ನೀಡಿದ್ದಾರೆ. ಒಂದೊಂದು ದೀಪದ ಬುಟ್ಟಿಗೆ ₹25 ರಿಂದ ₹50 ಸಾವಿರ ವರೆಗೂ ಖರ್ಚು ಮಾಡುತ್ತಿದ್ದಾರೆ.

ಬಡವರು, ಮಧ್ಯಮ ವರ್ಗದವರು, ತಮ್ಮ ಶಕ್ತಿಗೆ ಅನುಸಾರವಾಗಿ ₹5 ಸಾವಿರ ವರೆಗೂ ಖರ್ಚುಮಾಡುತ್ತಾರೆ.

ಸುಂಗಧರಾಜ, ಸೇವಂತಿಗೆ, ಗುಲಾಬಿಯೊಂದಿಗೆ ತುಳಸಿ ಸೇರಿ ಬುಟ್ಟಿಯನ್ನು ಹೆಣೆದು, ಅಲಂಕಾರ ಮಾಡಲಾಗುತ್ತದೆ. ಲಕ್ಷ್ಮಿ, ಗಣೇಶ, ವೆಂಕಟೇಶ್ವರ ಸೇರಿದಂತೆ ವಿವಿಧ ದೇವತೆಗಳ ಮುಖವಾಡಗಳನ್ನು ಹೂಗಳೊಂದಿಗೆ ಹೆಣೆದು, ಬಣ್ಣ, ಬಣ್ಣದ ಮಣಿಗಳಿಂದ ಬುಟ್ಟಿಯನ್ನು ಅಲಂಕಾರ ಮಾಡುತ್ತಾರೆ.

ಮಲ್ಲಿಗೆ ಹೂನಿಂದ ಹೆಣದ ಬುಟ್ಟಿಗೆ ₹5 ಸಾವಿರಕ್ಕೆ ಮಾರಾಟ ಮಾ‌ಡುತ್ತೇವೆ. ಒಂದು ಹೂವಿನ ಬುಟ್ಟಿ ಹೆಣೆಯಲು 25 ಬಿದಿರಿನ ದಬ್ಬೆ ಉಪಯೋಗಿಸಲಾಗುತ್ತದೆ. ಒಂದು ದಬ್ಬೆಗೆ(ಕಡ್ಡಿ) ಹೂ ಸುತ್ತಲೂ ₹30 ಖರ್ಚು ಬೀಳುತ್ತದೆ. ಹೂವ ಖರೀದಿ ಎಲ್ಲಾ ಸೇರಿ ನಮಗೆ ₹1,500 ಖರ್ಚಾಗುತ್ತದೆ. ಒಂದು ಬುಟ್ಟಿ ಹೆಣೆಯಲು ಸುಮಾರು ₹3 ಗಂಟೆ ಹಿಡಿಯುತ್ತದೆ. ಹೂವಿನ ಬುಟ್ಟಿ ಹೆಣೆಯುವುದು ಸಹ ಒಂದು ಕಲೆ ಎನ್ನುತ್ತಾರೆ  ಹೂವಿನ ವ್ಯಾಪಾರಿ ನಾಗರಾಜ್.

ಬೆಂಗಳೂರು, ಚಿಕ್ಕಬಳ್ಳಾಪುರ ಮಾರುಕಟ್ಟೆಗಳಿಂದ ಹೂಗಳು ಖರೀದಿಸಿ, ಹೂವಿನ ಬುಟ್ಟಿ ತಯಾರಿಸುತ್ತೇವೆ. ಇಡೀ ಕುಟುಂಬದವರು ಬುಟ್ಟಿ ಅಲಂಕರಿಸುವ ಕೆಲಸದಲ್ಲಿ ತೊಡಗಿಸಿಕೊಂಡಿದ್ದೇವೆ. ₹2,500ರಿಂದ‌ ಆರಂಭವಾಗುವ ಹೂವಿನ ಬುಟ್ಟಿ ₹25 ಸಾವಿರ ವರೆಗೂ ಮಾರಾಟ ಆಗುತ್ತದೆ ಎನ್ನುತ್ತಾರೆ ಹೂವಿನ ವ್ಯಾಪಾರಿ ವೆಂಕಟೇಶ್.

ಜಾತ್ರೆ ಮುನಿದ್ಯಾವರ ಬಂಡಿದ್ಯಾವರ ಬಂದಾಗ ಮಾತ್ರ ಬೇಡಿಕೆ ಇರುತ್ತದೆ. ಆ ಸಮಯದಲ್ಲಿ ಮನೆಯವರೆಲ್ಲರಿಗೂ ಕೆಲಸವಿರುತ್ತದೆ. ಹೂವಿನ ಬುಟ್ಟಿಗಳನ್ನು ಮೊದಲೇ ತಯಾರು ಮಾಡಿ ಇಡುವುದಕ್ಕೆ ಆಗುವುದಿಲ್ಲ. ಆ ದಿನದಲ್ಲೇ ತಯಾರಿಸಿ ಅದೇ ದಿನ ಮಾರಾಟ ಮಾಡುತ್ತೇವೆ.
ಶ್ರೀನಿವಾಸ್ ಹೂವಿನ ವ್ಯಾಪಾರಿ
ಪ್ರತಿಷ್ಠೆಗಾಗಿ ಖರ್ಚು
ಬೆಂಗಳೂರು ಗ್ರಾಮಾಂತರ ಭಾಗದಲ್ಲಿ ಮುನಿದ್ಯಾವರ ಬಂಡಿದ್ಯಾವರ ಮಾರಿ ಹಬ್ಬ ಕರಗ ಮಹೋತ್ಸವ ಸೇರಿದಂತೆ ಜಾತ್ರೆಯಲ್ಲಿ ತಂಬಿಟ್ಟಿನ ದೀಪದ ಮೆರವಣಿಗೆ ಪ್ರಮುಖ ಆಕರ್ಷಣೆಯಾಗಿರುತ್ತದೆ. ತಂಬಿಟ್ಟಿನ ದೀಪವನ್ನು ಹೂವಿನ ಬುಟ್ಟಿ ಇರಿಸಿಕೊಂಡು ಮಹಿಳೆಯರು ತಲೆ ಮೇಲೆ ಹೊತ್ತು ಸಾಗುವುದನ್ನು ನೋಡುವುದೇ ಒಂದು ಸೊಗಸು. ಮೆರವಣಿ‌ಗೆಯಲ್ಲಿ ಆಕರ್ಷಕವಾದ ಹೂವಿನ ಬುಟ್ಟಿ ಹೊತ್ತು ಸಾಗುವುದನ್ನು ಈ ಭಾಗದಲ್ಲಿ ಪ್ರತಿಷ್ಠೆಯಾಗಿ ಪರಿಗಣಿಸುತ್ತಾರೆ. ಹೀಗಾಗಿ ಹೂವಿನ ಬುಟ್ಟಿಗಾಗಿ ₹50000ದ ವರೆಗೂ ಖರ್ಚು ಮಾಡುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT