ಕಲಾವಿದರ ರಕ್ಷಣೆಗೆ ಸರ್ಕಾರ ಮುಂದಾಗಬೇಕು

ವಿಜಯಪುರ: ಕಲಾವಿದರ ರಕ್ಷಣೆ ಹಾಗೂ ಅವರ ಭವಿಷ್ಯದ ಏಳಿಗೆಗಾಗಿ ರಾಜ್ಯ ಸರ್ಕಾರ ಮುಂದಾಗಬೇಕು ಎಂದು ಕನ್ನಡ ಕಲಾವಿದರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಎನ್.ರಾಜಗೋಪಾಲ್ ಹೇಳಿದರು.
ಹೋಬಳಿಯ ಹಾರೋಹಳ್ಳಿ ಗ್ರಾಮದಲ್ಲಿ ಶುಕ್ರವಾರ ಆಯೋಜಿಸಿದ್ದ ‘50ನೇ ಮಾಸದ ಕನ್ನಡ ದೀಪ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕಲೆಗೆ ಸಾವಿಲ್ಲ, ಕಲಾವಿದನಿಗೆ ನೆಲೆಯಿಲ್ಲ ಎನ್ನುವಂತಾಗಿದೆ ರಂಗಭೂಮಿ ಕಲಾವಿದರ ಪರಿಸ್ಥಿತಿ. ಜನರನ್ನು ಸಂತೋಷ ಪಡಿಸುವ ಕಲಾವಿದರ ನಿಜ ಬದುಕಿನಲ್ಲಿ ಸಂತೋಷ ಇಲ್ಲದಂತಾಗುತ್ತಿದೆ. ಈ ಕುರಿತು ಸರ್ಕಾರಕ್ಕೆ ಅನೇಕ ಬಾರಿಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ ಎಂದರು.
ಸಾಹಿತಿ ಡಾ.ವಿ.ಎನ್. ರಮೇಶ್ ಮಾತನಾಡಿ, ಸದಾ ಕ್ರಿಯಾಶೀಲರಾಗಿರುವ ಕಲಾವಿದರು ಇಂದು ಮೂಲೆಗುಂಪಾಗುತ್ತಿರುವ ಕಾರಣ ಯುವ ಪೀಳಿಗೆಗೆ ರಂಗಭೂಮಿ ಕಲೆಯು ಮರೀಚಿಕೆಯಾಗುತ್ತಿದೆ. ಆದ್ದರಿಂದ ಸರ್ಕಾರ ಹಾಗೂ ಸಮಾಜ ಎರಡೂ ಕಲಾವಿದರ ನೆರವಿಗೆ ನಿಲ್ಲಬೇಕು. ವೈದ್ಯಕೀಯ ಚಿಕಿತ್ಸೆಗೂ ಹಣಕಾಸಿನ ವ್ಯವಸ್ಥೆಯಿಲ್ಲದೆ ಪರದಾಡುವಂತಹ ಪರಿಸ್ಥಿತಿಗಳು ನಿರ್ಮಾಣವಾಗಿವೆ ಎಂದರು.
ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಚಂದ್ರಶೇಖರ ಹಡಪದ್ ಮಾತನಾಡಿ, ಜನಪದ ಹಾಡುಗಾರರು, ಸೋಬಾನೆ ಪದಗಳ ಹಾಡುಗಾರರು, ಪೌರಾಣಿಕ ನಾಟಕಗಳಲ್ಲಿ ಅಭಿನಯ ಮಾಡುವ ಕಲಾವಿದರಿಗೆ ಸೂಕ್ತವಾದ ವೇದಿಕೆಗಳು ಸಿಗುತ್ತಿಲ್ಲ. ಕೆಲವೊಂದು ಸ್ವಯಂ ಸೇವಾ ಸಂಘ ಸಂಸ್ಥೆಗಳು ಬೇರೆ ಕಡೆಯಿಂದ ಕಲಾವಿದರನ್ನು ಕರೆಯಿಸಿಕೊಂಡು ಪೌರಾಣಿಕ ನಾಟಕಗಳನ್ನು ಆಯೋಜನೆ ಮಾಡಿ, ಸರ್ಕಾರದಿಂದ ಸಿಗುವ ಸೌಲಭ್ಯ ಪಡೆದುಕೊಳ್ಳುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಬಿಜೆಪಿ ಮುಖಂಡ ಛಲವಾದಿ ನಾರಾಯಣಸ್ವಾಮಿ ಮಾತನಾಡಿದರು. ಮುಖಂಡರಾದ ಕನಕರಾಜು, ಸಂಪತ್ ಕುಮಾರ್, ವೆಲ್ಡರ್ ಮುನಿಮಾರಪ್ಪ, ವಿ.ಗೋವಿಂದರಾಜು, ಜನಾರ್ಧನಸ್ವಾಮಿ, ದೇವರಾಜಪ್ಪ, ಭೈರೇಗೌಡ, ಸುಬ್ರಮಣಿ, ಗ್ರಾಮದ ಯುವಕರು ಇದ್ದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.