ಶುಕ್ರವಾರ, 24 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಂಪು ಘರ್ಷಣೆ | ಬಿಜೆಪಿ ಕಾರ್ಯಕರ್ತನಿಗೆ ಗಾಯ: ದೂರು, ಪ್ರತಿದೂರು ದಾಖಲು

Published 28 ಏಪ್ರಿಲ್ 2024, 5:56 IST
Last Updated 28 ಏಪ್ರಿಲ್ 2024, 5:56 IST
ಅಕ್ಷರ ಗಾತ್ರ

ಆನೇಕಲ್ : ತಾಲ್ಲೂಕಿನ ಸರ್ಜಾಪುರದಲ್ಲಿ ಶುಕ್ರವಾರ ನಡೆದ ಮತದಾನ ವೇಳೆ ಸರ್ಜಾಪುರ ಮತಗಟ್ಟೆಯ ಬಳಿ ಕಾಂಗ್ರೆಸ್‌ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆದಿದ್ದು, ಎರಡು ಗುಂಪುಗಳ ನಡುವೆ ವಾಗ್ವಾದ ನಡೆದು ಕೈ ಕೈ ಮಿಲಾಯಿಸಿಕೊಂಡಿದ್ದಾರೆ.

ಘಟನೆಯಲ್ಲಿ ಬಿಜೆಪಿಯ ಕಾರ್ಯಕರ್ತ ಎಸ್‌.ವಿ.ಜಯಪ್ರಕಾಶ್‌ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಈ ಸಂಬಂಧ ಎರಡೂ ಗುಂಪುಗಳಿಂದ ದೂರು, ಪ್ರತಿದೂರು ನೀಡಲಾಗಿದೆ.

ಗಾಯಗೊಂಡಿರುವ ಜಯಪ್ರಕಾಶ್‌ ಅವರು ಸರ್ಜಾಪುರ ಪೊಲೀಸ್‌ ಠಾಣೆಯಲ್ಲಿ ಹಲ್ಲೆ ಪ್ರಕರಣ ದಾಖಲಿಸಿದ್ದು, ಕಾಂಗ್ರೆಸ್‌ ಸ್ಥಳೀಯ ಕಾರ್ಯಕರ್ತರಾದ ಆಂಜಿನಪ್ಪ, ಶ್ರೀನಿವಾಸ್‌, ಮಂಜು, ಓಂಶಕ್ತಿ ಮಂಜು, ಮಧುಸೂದನ್‌, ರಾಜು ಎಂಬುವವರ ವಿರುದ್ಧ ಪ್ರಕರಣ ದಾಖಲಾಗಿದೆ.

ಮತಗಟ್ಟೆ ಬಳಿ ನಡೆದ ಗಲಾಟೆ‌ ಬಿಡಿಸಲು ಹೋದಾಗ ತಳ್ಳಾಟ ನೂಕಾಟವಾಯಿತು. ಬಿಜೆಪಿಯ ಕಾರ್ಯಕರ್ತ ಎಸ್‌.ವಿ.ಜಯಪ್ರಕಾಶ್‌ ಅವರು ಮತ್ತು ಪುತ್ರರಾದ ಬ್ರಿಜೇಶ್‌ ವೆಂಕಟದಾಸ್‌, ನಿಶ್ಚಿತಾ ಕಲ್ಯಾಣದಾಸ್‌ ಮತ್ತು ಪಾರ್ಥಸಾರಥಿ ಅವರು ಜಾತಿ ನಿಂದನೆ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ನನಗೆ ಮತ್ತು ನನ್ನ ಸಮುದಾಯಕ್ಕೆ ಧಕ್ಕೆ ಉಂಟಾಗಿದೆ ಮತ್ತು ಪ್ರಾಣ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ಸರ್ಜಾಪುರದ ಕಾಂಗ್ರೆಸ್‌ ಮುಖಂಡ ಎಸ್‌.ವಿ.ಶ್ರೀನಿವಾಸ್‌ ಅದೇ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಪೊಲೀಸರ ಎದುರಿನಲ್ಲೇ ಹಲ್ಲೆ:

ಸರ್ಜಾಪುರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬಿಜೆಪಿ ಕಾರ್ಯಕರ್ತವಿ.ಜಯಪ್ರಕಾಶ್ ಅವರನ್ನು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಮತ್ತು ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು. ವಿರೋಧ ಪಕ್ಷದ ನಾಯಕ ಆರ್‌.ಅಶೋಕ್‌ ಮಾತನಾಡಿ ಬಿಜೆಪಿ ಕಾರ್ಯಕರ್ತನ ಮೇಲೆ ಕಾಂಗ್ರೆಸ್‌ನ ಕೆಲವು ಗೂಂಡಾಗಳು ಹಲ್ಲೆ ನಡೆಸಿರುವುದು ಖಂಡನೀಯ. ಪೊಲೀಸರ ಎದುರಿನಲ್ಲಿಯೇ ಹಲ್ಲೆ ನಡೆದರೂ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ.  ಪೊಲೀಸರು ಮೂಕಪ್ರೇಕ್ಷಕರಂತೆ ವರ್ತಿಸಿದ್ದಾರೆ ಎಂದು ದೂರಿದರು. ಹಲ್ಲೆಯಿಂದಾಗಿ ತಲೆಗೆ ಪೆಟ್ಟು ಬಿದ್ದಿದೆ. ಆದರೆ ಪೊಲೀಸರು ಆರೋಪಿಗಳ ವಿರುದ್ಧ ಪೆಟ್ಟಿಕೇಸ್‌ ಹಾಕಿದ್ದಾರೆ. ಆದರೆ ಹಲ್ಲೆಯಾದ ಜಯಪ್ರಕಾಶ್‌ ವಿರುದ್ಧ ಜಾತಿನಿಂದನೆ ಪ್ರಕರಣ ದಾಖಲಿಸಿದ್ದಾರೆ. ವಿದ್ಯಾವಂತ ಮತದಾರರು ಹೆಚ್ಚಾಗಿದ್ದರಿಂದ ಮತದಾನವನ್ನು ತಡೆಯುವ ಉದ್ದೇಶದಿಂದ ಈ ಕೃತ್ಯ ಎಸಗಿದ್ದಾರೆ ಎಂದು ಆರೋಪಿಸಿದರು. ಪೊಲೀಸ್‌ ಠಾಣೆಯಲ್ಲ ಕಾಂಗ್ರೆಸ್‌ ಕಚೇರಿ! ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಮಾತನಾಡಿ ಬಿಜೆಪಿ ಕಾರ್ಯಕರ್ತನ ಮೇಲೆ ಹಲ್ಲೆ ನಡೆಸಿರುವುದು ಖಂಡನೀಯ. ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಪೊಲೀಸ್‌ ಠಾಣೆಗಳು ಕಾಂಗ್ರೆಸ್‌ ಕಚೇರಿಗಳಾಗಿವೆ. ಪೊಲೀಸರು ಕಾಂಗ್ರೆಸ್‌ ಏಜೆಂಟ್‌ರಂತೆ ವರ್ತಿಸುತ್ತಿದ್ದಾರೆ. ಈ ದಬ್ಬಾಳಿಕೆಯನ್ನು ಸಹಿಸುವುದಿಲ್ಲ. ಕಾರ್ಯಕರ್ತರಿಗೆ ತೊಂದರೆಯಾದರೆ ಯಾವುದೇ ಹೋರಾಟಕ್ಕೂ ಸಿದ್ದರಾಗಿದ್ದೇವೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT