ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸಕೋಟೆ: ಮರೆಯಾಗುತ್ತಿವೆ ಮಣ್ಣಿನ ಮಡಿಕೆಗಳು!

ಚಿನ್ನಂಡಹಳ್ಳಿ, ಬಾಣಮಾಕನಹಳ್ಳಿಯಲ್ಲಿ ಮಾರಾಟ
Last Updated 4 ಏಪ್ರಿಲ್ 2023, 12:54 IST
ಅಕ್ಷರ ಗಾತ್ರ

ಹೊಸಕೋಟೆ: ಬೇಸಿಗೆಯಲ್ಲಿ ಜನತೆಯ ದಾಹ ತಣಿಸಲು ತಂಪಾದ ನೀರನ್ನು ಒದಗಿಸುತ್ತಿದ್ದ ಬಡವರ ಅಕ್ಷಯ ಪಾತ್ರೆ ಎಂದೇ ಪ್ರಸಿದ್ಧಿ ಹೊಂದಿದ್ದ, ಮಣ್ಣಿನ ಮಡಕೆಗಳು ಕಾಣೆಯಾಗುತ್ತಿವೆ. ಬೇಸಿಗೆ ಕಾಲದಲ್ಲಿ ಸೂರ್ಯನ ಕಾವು ಹೆಚ್ಚಾದಂತೆ ಹಳ್ಳಿ ಪಟ್ಟಣಗಳಲ್ಲಿ ಕೆಂಪು ಮಡಿಕೆಗೆ ಬೇಡಿಕೆ ಹೆಚ್ಚಾಗುವುದು ಸಾಮಾನ್ಯವಾಗಿದೆ.

ತಾಲ್ಲೂಕಿನ ತಾವರೆಕೆರೆ ಪಕ್ಕದ ಬಾಣಮಾಕನಹಳ್ಳಿ, ಚಿನ್ನಂಡಹಳ್ಳಿ ಗ್ರಾಮದ ಕುಂಬಾರರು ಬೇಸಿಗೆಗೆಂದೇ ವಿಶೇಷವಾಗಿ ಕೆಂಪು ಮಡಿಕೆಯ ಜತೆಯಲ್ಲಿ, ಕಪ್ಪು ಮಡಿಕೆಗಳನ್ನು ತಯಾರಿಸಿ ಮಾರಾಟ ಮಾಡಲು ತಯಾರಿ ನಡೆಸಿದ್ದಾರೆ.

ನೆಲದ ಸಂಪ್ರದಾಯದಂತೆ ಮಡಿಕೆಯಲ್ಲಿಯೇ ಅಡುಗೆ ಮಾಡುತ್ತಿದ್ದನ್ನು ಇತಿಹಾಸ ತಿಳಿಸುತ್ತದೆ. ಆದರೆ, ದಿನದಿಂದ ದಿನಕ್ಕೆ ನಗರ ಜೀವನ ಶೈಲಿಯೂ ಗ್ರಾಮೀಣ ಭಾಗದಲ್ಲಿ ಹೆಚ್ಚಾಗಿ ಎಲ್ಲವೂ ಪ್ಲಾಸ್ಟಿಕ್‌ ಪಾತ್ರಗಳಾಗಿ ಮಾರ್ಪಾಡು ಹೊಂದುತ್ತಿದೆ.

ಕೆ.ಸಿ ವ್ಯಾಲಿಯ ನೀರು ತಾಲ್ಲೂಕಿನ ಕೆರೆಗಳಿಗೆ ಹರಿಸಿದ ಕಾರಣ ಎಲ್ಲ ಕೆರೆಗಳು ಭರ್ತಿಯಾಗಿದೆ. ಅಲ್ಲಿಂದ ಮಣ್ಣು ತೆಗೆಯಲು ಸಾಧ್ಯವಾಗಿಲ್ಲ. ಬೇಸಿಗೆಯಲ್ಲಿ ಮಡಿಕೆಗಳು, ಕುಂಬಾರಿಕೆ ವಸ್ತುಗಳಿಗೆ ಹೆಚ್ಚಿನ ಬೇಡಿಕೆ ಬರುವ ದೃಷ್ಟಿಯಿಂದ ತಾಲ್ಲೂಕಿನ ಹೊರಗಿನಿಂದ ಅಧಿಕ ಬೆಲೆ ಕೊಟ್ಟು ಮಣ್ಣು ತಂದು ತಯಾರಿಸಿದ ಮಡಿಕೆಗಳ ಬೆಲೆಯೂ
ಹೆಚ್ಚಿದೆ.

ಆದರೆ, ಬೇಡಿಕೆಯೂ ಕಡಿಮೆ ಇರುವುದರಿಂದ ವಂಶ ಪಾರಂಪರ್ಯವಾಗಿ ಮಾಡಿಕೊಂಡು ಬಂದ ಕಸಬನ್ನು ಬಿಟ್ಟು, ನಗರದತ್ತ ಕುಂಬಾರರು ವಲಸೆ ಹೋಗುತ್ತಿದ್ದಾರೆ. ಹಳ್ಳಿಗಳಲ್ಲಿ ಮಡಿಕೆ ತಯಾರಿಕೆ ಕೆಲಸವೂ ಸ್ಥಗಿತಗೊಂಡ ಮೇಲೆ ಕಸುಬುದಾರಿಕೆಯನ್ನು ಸಾಕಷ್ಟು ಜನರು ಮರೆತು ಹೋಗಿದ್ದಾರೆ. ಇಂತಹ ಸ್ಥಿತಿಯಲ್ಲಿಯೂ ಚಿನ್ನಂಡಹಳ್ಳಿ ಮತ್ತು ಬಾಣಮಾಕನಹಳ್ಳಿ ಕುಂಬಾರರು ಪೂರ್ವಿಕರ ಕಸಬನ್ನು ಮುಂದುವರೆಸಿಕೊಂಡು ಬಂದಿದ್ದಾರೆ.

ನಿಸರ್ಗದತ್ತವಾಗಿ ನೀರಿನಲ್ಲಿರುವ ಬ್ಯಾಕ್ಟೀರಿಯಾಗಳನ್ನು ನಾಶ ಮಾಡುವ ಶಕ್ತಿಯೂ ಮಡಿಕೆಗಳಿಗೆ ಇರುತ್ತದೆ. ಮಣ್ಣಿನ ಮಡಿಕೆಯಲ್ಲಿ ಸಂಗ್ರಹಿಸಿದ್ದ ನೀರು ತಂಪಾಗಿದ್ದು, ದಾಹ ತಣಿಸುತ್ತದೆ. ಅಂದಾಜು 5 ಲೀಟರ್‌ ನೀರು ಶೇಖರಣೆ ಮಾಡುವ ಮಡಿಕೆಗಳಿಗೆ ಮಾರುಕಟ್ಟೆಯಲ್ಲಿ ₹100 ರಿಂದ ₹130 ಬೆಲೆ ಇದೆ.

ಮಡಿಕೆಗಳ ಸಂಪ್ರದಾಯದ ಪ್ರತೀಕ: ಬೆಂಗಳೂರು ಮಾರ್ಗವಾಗಿ ಹೋಗುವ ಸಾವಿರಾರು ಪ್ರಯಾಣಿಕರು ಹೊಸಕೋಟೆಯಲ್ಲಿ ಮಡಿಕೆ ಖರೀದಿ ಮಾಡುತ್ತಾರೆ. ಕುಟುಂಬಸ್ಥರೆಲ್ಲಾ ಕುಂಬಾರಿಕೆ ವಸ್ತುಗಳ ಮಾರಾಟದಲ್ಲಿ ಮಗ್ನರಾಗಿದ್ದೇವೆ. ಗ್ರಾಮೀಣ ಭಾಗಕ್ಕೂ ತಳ್ಳುವ ಗಾಡಿಯಲ್ಲಿ ಊರುರು ಸುತ್ತಿ ಮಾರಾಟ ಮಾಡುತ್ತೇವೆ ಎನ್ನುತ್ತಾರೆ ಬಾಣಮಾಕನಹಳ್ಳಿಯ ಕುಂಬಾರ ಗಂಗಾಲಪ್ಪ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT