ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುನ್ನೆಚ್ಚರಿಕೆಯಿಂದ ಹೃದಯಾಘಾತ ತಡೆಯಬಹುದು: ಡಾ.ಬಿ.ಜಿ.ಮುರಳೀಧರ್

ಟ್ರಿನಿಟಿ ಹಾರ್ಟ್ ಫೌಂಡೇಷನ್‌ನಿಂದ ತಪಾಸಣಾ ಶಿಬಿರ
Last Updated 19 ಜನವರಿ 2020, 14:11 IST
ಅಕ್ಷರ ಗಾತ್ರ

ದೊಡ್ಡಬಳ್ಳಾಪುರ: ನಮ್ಮಲ್ಲಿ ಶೇ 50ರಷ್ಟು ಮಂದಿ ಹೃದ್ರೋಗದ ಸಮಸ್ಯೆಗಳಿಗೆ ಒಳಗಾಗುತ್ತಿದ್ದಾರೆ. ಹೃದಯ ಸಂಬಂಧಿತ ರೋಗಗಳನ್ನು ಒಂದು ನಿಮಿಷವೂ ಸಹ ನಿರ್ಲಕ್ಷ್ಯ ಮಾಡದೇ ತಕ್ಷಣ ಚಿಕಿತ್ಸೆ ಪಡೆದರೆ ಸಾವಿನಿಂದ ಪಾರಾಗಬಹುದು ಎಂದು ಖ್ಯಾತ ಹೃದ್ರೋಗ ತಜ್ಞ ಡಾ.ಬಿ.ಜಿ.ಮುರಳೀಧರ್ ಹೇಳಿದರು.

ನಗರದ ಮಾರುಕಟ್ಟೆ ಚೌಕ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಟ್ರಿನಿಟಿ ಹಾರ್ಟ್ ಫೌಂಡೇಷನ್ ವತಿಯಿಂದ ನಗರದ ವಾಣಿಜ್ಯೋದ್ಯಮಿಗಳಾದ ಜಿ.ಡಿ.ಲಕ್ಷ್ಮೀನಾರಾಯಣ್, ಜಿ.ಡಿ.ಜಯಶಂಕರ್ ಅವರ ತಾಯಿ ಗುಜ್ಜಿ ಶಾರದಮ್ಮ ಸ್ಮರಣಾರ್ಥ ನಡೆದ ಉಚಿತ ಹೃದಯ ಆರೋಗ್ಯ ತಪಾಸಣೆ ಶಿಬಿರ ಉದ್ಘಾಟಿಸಿ ಮಾತನಾಡಿದರು.

‘ಗ್ರಾಮೀಣ ಜನರಿಗೂ ಸಹ ಸೂಕ್ತ ಸಮಯದಲ್ಲಿ ತಪಾಸಣೆ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಹೊಸ ಯೋಜನೆ ರೂಪಿಸುತ್ತಿದೆ. ಹೃದ್ರೋಗಕ್ಕೆ ರಕ್ತದೊತ್ತಡ, ಮಧುಮೇಹ, ಕೊಬ್ಬು, ಧೂಮಪಾನ, ಮದ್ಯಪಾನ ಮೊದಲಾದವುಗಳು ಪ್ರಮುಖ ಕಾರಣವಾಗಿವೆ. ಇದಲ್ಲದೇ ಸೋಮಾರಿತನ ಕೂಡ ಹೃದ್ರೋಗಕ್ಕೆ ಕಾರಣ. ಇತ್ತೀಚೆಗೆ ಮಕ್ಕಳು, ಮಹಿಳೆಯರು ಸೇರಿದಂತೆ ಹಲವಾರು ಮಂದಿ ದೈಹಿಕ ಚಟುವಟಿಕೆಗಳಿಗೆ ಆದ್ಯತೆ ನೀಡದೇ ಹಲವಾರು ರೋಗಗಳಿಗೆ ತುತ್ತಾಗುತ್ತಿದ್ದಾರೆ. ನಿತ್ಯ ನಡಿಗೆ, ವ್ಯಾಯಾಮ ಹಾಗೂ ಸಮತೋಲನ ಆಹಾರಗಳು ಹೃದ್ರೋಗ ಮೊದಲಾದ ಹಲವಾರು ರೋಗಗಳಿಂದ ನಮ್ಮನ್ನು ದೂರ ಮಾಡುತ್ತವೆ. ನಮ್ಮ ಜೀವನ ಶೈಲಿಯನ್ನು ನಾವು ಬದಲಿಸಿಕೊಳ್ಳಬೇಕು’ ಎಂದರು.

‘ಬಹಳಷ್ಟು ಮಂದಿ ಹೃದಯಾಘಾತಗಳಾದಾಗ ನಾಳೆ ಆಸ್ಪತ್ರೆಗೆ ಹೋಗೋಣ ಎಂದು ನಿರ್ಲಕ್ಷ್ಯ ಮಾಡುತ್ತಾರೆ. ಒಂದು ನಿಮಿಷ ತಡವಾದರೂ ಹೃದಯ ಸ್ನಾಯು ಜೀವಕೋಶಗಳು ನಿಷ್ಕ್ರಿಯವಾಗುತ್ತಾ, ತೀವ್ರ ಹೃದಯಾಘಾತ ಸಂಭವಿಸುವ ಸಾಧ್ಯತೆಯಿದೆ. ಹೃದಯಾಘಾತವಾದಾಗ ತಕ್ಷಣ ಚಿಕಿತ್ಸೆ ನೀಡಿದರೆ ಶೇ 90ರಷ್ಟು ಸಾವನ್ನು ತಡೆಗಟ್ಟಬಹುದು’ ಎಂದರು.

ಹಿರಿಯ ಕನ್ನಡ ಪರ ಹೋರಾಟಗಾರ ಟಿ.ಎನ್.ಪ್ರಭುದೇವ್ ಮಾತನಾಡಿ, ‘ಹೃದ್ರೋಗದ ಚಿಕಿತ್ಸೆಗಾಗಿ ಇಂದು ಲಕ್ಷಾಂತರ ರೂಪಾಯಿ ಖರ್ಚು ಮಾಡುವ ಪರಿಸ್ಥಿತಿ ಇದೆ. ಸೂಕ್ತ ಸಮಯದಲ್ಲಿ ತಪಾಸಣೆ ಮಾಡಿಸಿಕೊಂಡರೆ ಮುಂದಾಗುವ ಅನಾಹುತ ತಪ್ಪಿಸಬಹುದು. ಈ ನಿಟ್ಟಿನಲ್ಲಿ ಇಂತಹ ಆರೋಗ್ಯ ಶಿಬಿರಗಳು ಸಹಕಾರಿ’ ಎಂದರು.

ಕಾರ್ಯಕ್ರಮದಲ್ಲಿ ನಗರಸಭೆ ಮಾಜಿ ಅಧ್ಯಕ್ಷ ಕೆ.ಪಿ.ಜಗನ್ನಾಥ್, ವಾಣಿಜ್ಯೋದ್ಯಮಿ ಎಸ್.ಪ್ರಕಾಶ್, ಭಾರತೀಯ ವೈದ್ಯಕೀಯ ಸಂಘದ ರಾಜ್ಯ ಸಮಿತಿ ಸದಸ್ಯ ಡಾ.ಎಚ್.ಜಿ.ವಿಜಯಕುಮಾರ್, ಖ್ಯಾತ ಪ್ರಸೂತಿ ತಜ್ಞ ಡಾ.ಚೌಡಪ್ಪ, ಶಿಬಿರದ ಪ್ರಾಯೋಜಕರಾದ ಜಿ.ಡಿ.ಲಕ್ಷ್ಮೀನಾರಾಯಣ್, ಜಿ.ಡಿ.ಜಯಶಂಕರ್, ನಗರಸಭೆ ಮಾಜಿ ಉಪಾಧ್ಯಕ್ಷ ವಿ.ರಾಜಪ್ಪ, ಉದ್ಯಮಿ ರವಿಕುಮಾರ್, ಸಂಘಟಕರಾದ ಕೆ.ಕೆ.ವೆಂಕಟೇಶ್, ಎಚ್.ಪ್ರಕಾಶ್‌ರಾವ್, ದೇವರಾಜು, ಮುನಿರಾಜು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT