ಗುರುವಾರ , ಜುಲೈ 7, 2022
23 °C
ದೀಪ ಹೊತ್ತು ಸಂಭ್ರಮಿಸಿದ ಹೆಂಗಳೆಯರು: ಕುರಿ, ಕೋಳಿ ಬಲಿ

ಹೊಲೇರಹಳ್ಳಿ ಮುನೇಶ್ವರ ಜಾತ್ರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ: ತಾಲ್ಲೂಕಿನ ಹೊಲೇರಹಳ್ಳಿಯಲ್ಲಿ ಬುಧವಾರ ಮುನೇಶ್ವರ ಸ್ವಾಮಿ ಜಾತ್ರಾ ಮಹೋತ್ಸವ ಸಡಗರದಿಂದ ನೆರವೇರಿತು. ಎಲ್ಲಾ ಧರ್ಮೀಯರು ಪಾಲ್ಗೊಂಡು ಸಾಮರಸ್ಯದ ಸಂದೇಶ ಸಾರಿದರು.

ಪ್ರತಿವರ್ಷ ಶ್ರೀರಾಮನವಮಿ ನಂತರ ನಡೆಯುವ ಹೊಲೇರಹಳ್ಳಿ ಜಾತ್ರೆಗೆ ಸಾವಿರಾರು ಜನರು ಭಾಗವಹಿಸಿದ್ದರು. ದೇವಾಲಯಕ್ಕೆ ವಿದ್ಯುತ್ ದೀಪಾಲಂಕಾರ ಮಾಡಲಾಗಿತ್ತು. ದೇವಾಲಯದಲ್ಲಿ ವಿಶೇಷ ಪೂಜೆಗಳು ನಡೆದವು. ಭಕ್ತರು ಸಾಲುಗಟ್ಟಿ ನಿಂತು ಪೂಜೆ ಸಲ್ಲಿಸಿದರು.

ವಿವಿಧ ಅಲಂಕಾರಿಕ, ಮಕ್ಕಳ ಆಟದ ವಸ್ತುಗಳ ಮಾರಾಟ ಮಾಡುವಂತಹ ವ್ಯಾಪಾರಿಗಳು, ಪೂಜಾ ಸಾಮಗ್ರಿಗಳನ್ನು ಬುಟ್ಟಿಗಳಲ್ಲಿ ಇಟ್ಟುಕೊಂಡು ಮಾರಾಟ ಮಾಡುವ ವ್ಯಾಪಾರಿಗಳು, ಐಸ್ ಕ್ರೀಂ ಮಾರಾಟಗಾರರು, ಮನೆಗಳಿಗೆ ಅಗತ್ಯ ಸಾಮಾನು ಸರಂಜಾಮು ಮಾರಾಟ ಮಾರುವವರು ರಸ್ತೆಯುದ್ದಕ್ಕೂ ಅಂಗಡಿಗಳನ್ನು ಜೋಡಿಸಿಟ್ಟಿದ್ದರು. ಯುವಕರು ಹಾಗೂ ಯುವತಿಯರು ಕೈಗಳ ಮೇಲೆ ಟ್ಯಾಟೂ ಹಾಕಿಸಿಕೊಂಡು ಸಂಭ್ರಮಿಸಿದರು.

ಸುತ್ತಮುತ್ತಲಿನ ಹಳ್ಳಿಗಳಿಂದ ಮಹಿಳೆಯರು ತಂಬಿಟ್ಟಿನ ದೀಪ ಮಾಡಿಕೊಡಿಕೊಂಡು ತಮಟೆ, ಮಂಗಳವಾದ್ಯಗಳೊಂದಿಗೆ ಬಂದು ದೇವರಿಗೆ ಬೆಳಗಿದರು. ಜಾತ್ರೆಗೆ ಹೋಗುವವರಿಗೆ ದಾರಿಯುದ್ದಕ್ಕೂ ಪಾನಕ, ಮಜ್ಜಿಗೆ, ಕೋಸಂಬರಿ ವಿತರಿಸಲಾಯಿತು. 

ದೀಪ ಹೊರುವ ಸಂಭ್ರಮ: ಬಿದಿರು ಹಾಗೂ ಸ್ಟೀಲ್‌ನಲ್ಲಿ ತಯಾರಿಸಿದ್ದ ಬುಟ್ಟಿಗಳಿಗೆ ವಿವಿಧ ಬಗೆಯ ಹೂಗಳಿಂದ ಅಲಂಕಾರ ಮಾಡಿ ಅವುಗಳಲ್ಲಿ ತಂಬಿಟ್ಟಿನ ದೀಪಗಳನ್ನು ಇಟ್ಟುಕೊಂಡು ಹೆಣ್ಣುಮಕ್ಕಳು, ಮಹಿಳೆಯರು ಸಂಭ್ರಮದಿಂದ ಹೊಲೇರಹಳ್ಳಿವರೆಗೂ ಹೊತ್ತುಕೊಂಡು ಬಂದ್ದಿದ್ದರು. ಹುಲಿವೇಷ ಹಾಕಿದ್ದ ಕಲಾವಿದರು ತಮಟೆ ವಾದನಕ್ಕೆ ತಕ್ಕಂತೆ ಕುಣಿದು ಕುಪ್ಪಳಿಸಿದರು. 

ಗುಡಿಬಂಡೆ ತಾಲ್ಲೂಕಿನ ಜಂಗಾಲಪಲ್ಲಿ ಗ್ರಾಮದ ಭಜನಾ ತಂಡದವರು ಪಂಡಾಪುರ ಭಜನೆ ನಡೆಸಿಕೊಟ್ಟರು. ವೃದ್ಧರು, ಯುವಕರು, ಹೆಣ್ಣುಮಕ್ಕಳು ಭಜನೆಯಲ್ಲಿ ನೃತ್ಯ ಮಾಡುವ ಮೂಲಕ ಜಾತ್ರೆಗೆ ಮೆರುಗು ನೀಡಿದರು. ದೇವಾಲಯಕ್ಕೆ ಹರಕೆ ಹೊತ್ತುಕೊಂಡಿದ್ದ ಭಕ್ತರು ದೇವಾಲಯದಲ್ಲಿ ಪೂಜೆ ಸಲ್ಲಿಸಿದ ನಂತರ ಕುರಿ, ಮೇಕೆ, ಕೋಳಿಗಳನ್ನು ಬಲಿಕೊಟ್ಟು ಹರಕೆ
ತೀರಿಸಿದರು. 

ಪ್ರತಿವರ್ಷದಂತೆ ಈ ವರ್ಷವೂ ಜಾತ್ರೆಯಂದು ರಾತ್ರಿ ಹೊಲೇರಹಳ್ಳಿಯ ರಂಗ ಕಲಾವಿದರು,ವಿದ್ಯುತ್ ದೀಪಾಂಲಕಾರಗಳಿಂದ ಕಂಗೊಳಿಸುತ್ತಿದ್ದ ಸೀನರಿಯಲ್ಲಿ ‘ಭಕ್ತ ಮಾರ್ಕೆಂಡೇಯ’ ನಾಟಕ ಪ್ರದರ್ಶಿಸಿದರು. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು