ಮಂಗಳವಾರ, ಆಗಸ್ಟ್ 3, 2021
26 °C

ಅಂತರ್ಜಲ ವೃದ್ಧಿಸಿ; ಭವಿಷ್ಯ ಕಾಪಾಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ: ‘ಈಗಿನಿಂದಲೇ ಅಂತರ್ಜಲವೃದ್ಧಿ ಮಾಡದೇ ಇದ್ದರೆ ಭವಿಷ್ಯದಲ್ಲಿ ನಮ್ಮ ಮಕ್ಕಳಿಗೆ ನಾವೇ ವಿಷ ನೀಡಿದಂತಾಗುತ್ತದೆ. ಆದ್ದರಿಂದ ಅಂತರ್ಜಲವೃದ್ಧಿ ಮಾಡಿ ಮಕ್ಕಳ ಭವಿಷ್ಯ ಕಾಪಾಡಬೇಕು’ ಎಂದು ಕರ್ನಾಟಕ ಜನತಾ ವೇದಿಕೆ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ವಕೀಲ ವಿ.ಎನ್. ಮಂಜುನಾಥ್ ಅವರು ಕರೆ ನೀಡಿದರು.

ಚನ್ನರಾಯಪಟ್ಟಣ ಹೋಬಳಿ ಟಿ.ಅಗ್ರಹಾರ ಗ್ರಾಮದಲ್ಲಿ ಪರಿವರ್ತನಾ ಕಲಾ ಸಂಸ್ಥೆಯ ವತಿಯಿಂದ ಆಯೋಜಿಸಿದ್ದ ವಿಶ್ವ ಪರಿಸರ ದಿನಾಚರಣೆ ಹಾಗೂ ಪರಿಸರ ಗೀತಗಾಯನ ಮತ್ತು ಗಿಡನೆಡುವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ನಮ್ಮ ಹಿರಿಯರು ಬೆಳೆಸಿದ ಮರಗಳನ್ನು ಸಂರಕ್ಷಿಸಿದ್ದರೆ ಇಂದು ನೀರಿಗಾಗಿ ಇಷ್ಟು ಪರದಾಡುವ ಸ್ಥಿತಿ ಬರುತ್ತಿರಲಿಲ್ಲ. ಜಲವೃದ್ಧಿಗೆ ಪ್ರತಿ ವರ್ಷವೂ ಆಂದೋಲನ ಹಮ್ಮಿಕೊಳ್ಳುವ ಸ್ಥಿತಿ ತಲುಪಿದ್ದು, ಸಮಾಜಕ್ಕೆ ಒಳ್ಳೆಯದಲ್ಲ. ಈಗಲಾದರೂ ಸಮಾಜ ಜಾಗೃತವಾಗಬೇಕು. ಮರಗಳನ್ನೂ ಮಕ್ಕಳಂತೆ ನೋಡುವ ಮನೋಭಾವ ಬೆಳೆಯದೇ ಇದ್ದರೆ ಯಾರಿಗೂ ಉಳಿಗಾಲವಿಲ್ಲ’ ಎಂದು ಎಚ್ಚರಿಸಿದರು.

ಪರಿವರ್ತನಾ ಕಲಾ ಸಂಸ್ಥೆಯ ಅಧ್ಯಕ್ಷ, ಕಿರುತೆರೆ ನಟ ಡಾ.ದೇವನಹಳ್ಳಿ ದೇವರಾಜ್ ಮಾತನಾಡಿ, ‘ದಶಕದ ಹಿಂದೆ ಶೇಕಡ 40ರಷ್ಟು ಮಳೆ ನೀರು ಭೂಮಿಯಲ್ಲಿ ಇಂಗುತ್ತಿತ್ತು. ಆದರೆ, ಈಗ ಶೇಕಡ 5ರಷ್ಟು ಕೂಡ ಇಂಗುತ್ತಿಲ್ಲ. ಅರಣ್ಯೀಕರಣ ಮಾಡುವ ಮೂಲಕ ಮಣ್ಣಿನ ಸವಕಳಿ ನಿಯಂತ್ರಿಸುವ ಜೊತೆಗೆ ಅಂತರ್ಜಲ ಹೆಚ್ಚಿಸುವುದು, ಬಾವಿಗಳ ಮರುಪೂರಣ, ಕಲ್ಲುಗುಂಡು ತಡೆ, ಕೆರೆಹೊಂಡಗಳನ್ನು ನಿರ್ಮಾಣ ಮಾಡುವ ಕಡೆಗೆ ಗಮನಹರಿಸಬೇಕು’ ಎಂದರು.

ಮುಖಂಡ ಚೌಡರಾಜ್ ಮಾತನಾಡಿ, ‘ಶಾಲಾ ಹಂತದಲ್ಲಿಯೇ ಮಕ್ಕಳಲ್ಲಿ ಪರಿಸರಪ್ರಜ್ಞೆ ಮೂಡಿಸುವಂತಹ ಕೆಲಸವಾಗಬೇಕು. ಮನೆಗೊಂದು ಮರ ಬೆಳೆಸಿ ಪೋಷಣೆ ಮಾಡುವಂತಹ ಕೆಲಸವಾಗಬೇಕು. ಆಗ ಮಾತ್ರ ಜಾಗತಿಕ ತಾಪಮಾನದ ವಿಷವರ್ತುಲದಿಂದ ನಾವು ಹೊರಬಹುದಾಗಿದೆ’ ಎಂದರು.

ಕಲಾವಿದರಾದ ಬೆಟ್ಟಕೋಟೆ ಸಹನಾ ಮತ್ತು ಚೌಡಪ್ಪನಹಳ್ಳಿ ಸಂಗೀತ ತಂಡದವರಿಂದ ಪರಿಸರ ಗೀತಗಾಯನ ನಡೆಯಿತು. ಸಸಿಗಳನ್ನು ನೆಡುವ ಕಾರ್ಯಕ್ರಮವೂ ನಡೆಯಿತು. ಸಾಹಿತಿ ರಾಜಣ್ಣ, ಭರತ್, ಎಂ.ಪ್ರಭು, ರೆಡ್ಡಿ, ಶೇಖರ್, ನಾರಾಯಣಸ್ವಾಮಿ, ಲಕ್ಷ್ಮಮ್ಮ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.