ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಳಾಂಗಣ ಕ್ರೀಡಾಂಗಣ ಅಭಿವೃದ್ಧಿ ಅಗತ್ಯ

ದೇವನಹಳ್ಳಿಯಲ್ಲಿ ಆಡಳಿತ ಮಂಡಳಿ ನಿರ್ದೇಶಕ ಸಿ.ಜಗನ್ನಾಥ್‌ರಿಂದ ಶಾಸಕರಿಗೆ ಮನವಿ
Last Updated 1 ಜುಲೈ 2018, 16:16 IST
ಅಕ್ಷರ ಗಾತ್ರ

ದೇವನಹಳ್ಳಿ: ನಗರದ ವೇಣುಗೋಪಾಲಸ್ವಾಮಿ ಒಳಾಂಗಣ ಕ್ರೀಡಾಂಗಣದ ಸಮಗ್ರ ಅಭಿವೃದ್ಧಿಗೆ ಅನುದಾನ ನೀಡುವಂತೆ ಕ್ರೀಡಾಂಗಣ ಆಡಳಿತ ಮಂಡಳಿ ನಿರ್ದೇಶಕ ಹಾಗೂ ಕೆಪಿಸಿಸಿ ರಾಜ್ಯ ಹಿಂದುಳಿದ ವರ್ಗ ಘಟಕ ಉಪಾಧ್ಯಕ್ಷ ಸಿ.ಜಗನ್ನಾಥ್ ಶಾಸಕರಿಗೆ ಮನವಿಪತ್ರ ಸಲ್ಲಿಸಿದರು.

ಇಲ್ಲಿನ ವೇಣುಗೋಪಾಲಸ್ವಾಮಿ ಒಳಾಂಗಣ ಕ್ರೀಡಾಂಗಣದಲ್ಲಿ ಭಾನುವಾರ ಸಂಘದ ವತಿಯಿಂದ ಸನ್ಮಾನ ಮತ್ತು ಅನುದಾನಕ್ಕಾಗಿ ಮನವಿ ಕಾರ್ಯಕ್ರಮದಲ್ಲಿ ಮಾತನಾಡಿದರು.ಕ್ರೀಡಾಸಕ್ತರು ಸೇರಿ ನಿರ್ಮಾಣ ಮಾಡಿಕೊಂಡಿರುವ ಒಳಾಂಗಣ ಕ್ರೀಡಾಂಗಣದಲ್ಲಿ ಹದಿನೈದು ವರ್ಷಗಳಿಂದ ಅನೇಕ ಪ್ರತಿಭಾನ್ವಿತ ಕ್ರೀಡಾಪಟುಗಳು ತರಬೇತಿ ಪಡೆದಿದ್ದಾರೆ. ಅವರು ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಳ್ಳುವಂತೆ ಮಾಡಿದೆ. ಕಿರಿಯ ಕ್ರೀಡಾಪಟುಗಳಿಗೆ ಮಾರ್ಗದರ್ಶನ ನೀಡುತ್ತಿದೆ ಎಂದರು.

ಹತ್ತಾರು ವರ್ಷಗಳ ಹಿಂದೆ ಅಳವಡಿಸಲಾದ ಆಟದ ಅಂಕಣದಲ್ಲಿನ ನೆಲಹಾಸು (ಮರದ ಮ್ಯಾಟ್‌) ಶಿಥಿಲಗೊಂಡಿದೆ. ಕ್ರೀಡಾಂಗಣದ ಮೇಲ್ಚಾವಣಿ ನವೀಕರಿಸಬೇಕಾಗಿದೆ. ನೂತನವಾಗಿ ಅಳವಡಿಸಲು ಕನಿಷ್ಠ ಆರು ಲಕ್ಷ ಅವಶ್ಯಕತೆ ಇದೆ. ಈವರೆಗೆ ಯಾವುದೇ ಇಲಾಖೆಯಿಂದ ಅನುದಾನ ಪಡೆದುಕೊಂಡಿಲ್ಲ ಎಂದರು. ವಾರ್ಷಿಕವಾಗಿ ತರಬೇತಿ ಪಡೆಯುವವರ ಸಂಖ್ಯೆ ಹೆಚ್ಚುತ್ತಿದೆ. ಸ್ಥಳಾವಕಾಶದ ಕೊರತೆ ಹೆಚ್ಚುತ್ತಿದೆ. ಕ್ರೀಡಾ ಸಂಘಕ್ಕೆ ಹೆಚ್ಚುವರಿಯಾಗಿ ಒಂದು ಎಕರೆ ಜಾಗ ಸರ್ಕಾರದ ವತಿಯಿಂದ ಮಂಜೂರು ಮಾಡಿಸಿ ಕೊಡಬೇಕು ಎಂದರು.

ಕ್ರೀಡಾ ಸಂಘ ಆಡಳಿತ ಮಂಡಳಿ ಪ್ರಧಾನ ಕಾರ್ಯದರ್ಶಿ ಡಾ.ಕೆ.ಎಸ್‌. ಪ್ರಭಾಕರ್‌ ಮಾತನಾಡಿ, ಗ್ರಾಮಾಂತರ ಜಿಲ್ಲೆಯಲ್ಲಿ ಇರುವ ಏಕೈಕ ಒಳಾಂಗಣ ಕ್ರೀಡಾಂಗಣದಲ್ಲಿ ವಿಭಾಗೀಯ ಮತ್ತು ರಾಜ್ಯ ಮಟ್ಟದ ಷಟಲ್‌ ಪಂದ್ಯಾವಳಿಯನ್ನು ಆಯೋಜಿಸಲಾಗುತ್ತದೆ ಎಂದರು.

ಉತ್ತಮ ಕ್ರೀಡಾ ಚಟುವಟಿಕೆಗೆ ಅಂಕಣಗಳಿದ್ದರೆ ಆಸ್ಪತ್ರೆ ಅವಶ್ಯಕತೆ ಬೇಡ ಎಂಬ ಸದುದ್ದೇಶವನ್ನು ಸಂಘ ಹೊಂದಿದೆ. ಆಸಕ್ತರಿಗೆ ಕೊರತೆ ಇಲ್ಲ, ಮೂಲ ಸೌಲಭ್ಯಕ್ಕೆ ಕೊರತೆ ಇದೆ. ತಾಲ್ಲೂಕಿನಲ್ಲಿ ಈವರೆಗೆ ಈಜು ಕೊಳವಿಲ್ಲ. ಈಗಾಗಲೇ ದೇವನಹಳ್ಳಿ ಜಿಲ್ಲೆಯಾಗಿ ಘೋಷಣೆಯಾಗಿದೆ. ಇಲ್ಲಿಗೆ ಅವಶ್ಯಕ ಈಜು ಕೊಳ ಬೇಕು. ಇದಕ್ಕಾಗಿ ₹ 80 ಲಕ್ಷ ವೆಚ್ಚದ ರೂಪುರೇಷೆ ಸಿದ್ಧಗೊಳಿಸಲಾಗಿದೆ ಎಂದರು.

ಒಳಾಂಗಣದಲ್ಲಿ ಬೆಳಕಿನ ವ್ಯವಸ್ಥೆ ಕಡಿಮೆ ಇರುವುದರಿಂದ ಕ್ರೀಡಾ ಚಟುವಟಿಕೆಗೆ ಅಡಚಣೆಯಾಗಿದೆ. ಎಲ್‌ಇಡಿ ದೀಪ ಅಳವಡಿಸುವ ಚಿಂತನೆ ಇದ್ದು ಅಂದಾಜು ಎರಡು ಲಕ್ಷ ರೂಪಾಯಿ ವೆಚ್ಚವಾಗುವ ಸಾಧ್ಯತೆ ಇದೆ. ವಿದ್ಯುತ್‌ ಸ್ಥಗಿತಗೊಳ್ಳುವ ಸಂದರ್ಭದಲ್ಲಿ ತೊಂದರೆ ನಿವಾರಣೆಗೆ ಜನರೇಟರ್‌ ಅವಶ್ಯಕತೆ ಇದೆ. ಈ ಎಲ್ಲ ಬೇಡಿಕೆಗಳನ್ನು ಈಡೇರಿಸಬೇಕು ಎಂದರು.

ಕ್ರೀಡಾ ಸಂಘದ ಅಧ್ಯಕ್ಷ ಎನ್‌.ರಘು, ಉಪಾಧ್ಯಕ್ಷ ಎ.ಸಿ.ನಾಗರಾಜ್‌, ಖಜಾಂಚಿ ಜಿ.ಎ. ಕುಮಾರ್‌, ಸಹಕಾರ್ಯದರ್ಶಿ ಸೊಸೈಟಿ ನಂಜಪ್ಪ, ನಿರ್ದೇಶಕರಾದ ಜಿ.ಎನ್‌. ವೇಣುಗೋಪಾಲ್‌, ಅಮರೇಶ್‌, ನರಸಿಂಹಮೂರ್ತಿ, ಬಿ.ಪುಟ್ಟಸ್ವಾಮಿ, ರವೀಂದ್ರ, ಎಂ.ಕುಮಾರ್‌, ಶಶಿಕುಮಾರ್‌, ನಾರಾಯಣಸ್ವಾಮಿ, ಡಿ.ಎಂ. ವೇಣುಗೋಪಾಲ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT