ಭಾನುವಾರ, ಜೂನ್ 13, 2021
23 °C
ದೇವನಹಳ್ಳಿ: ಧ್ವಜಾರೋಹಣ ನೆರವೇರಿಸಿದ ಜಿಲ್ಲಾ ಉಸ್ತುವಾರಿ ಸಚಿವ ಅಶೋಕ್‌ l ಹೋರಾಟಗಾರರ ಸ್ಮರಣೆ

ಸ್ವಾತಂತ್ರ್ಯ ದಿನ: ಸರಳ ಆಚರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದೇವನಹಳ್ಳಿ: ಜಿಲ್ಲೆಯೆಲ್ಲೆಡೆ 74 ನೇ ಸ್ವಾತಂತ್ರ್ಯ ದಿನವನ್ನು ಸರಳವಾಗಿ ಆಚರಿಸಲಾಯಿತು.

ಸರ್ಕಾರಿ ಕಿರಿಯ ಕಾಲೇಜು ಮೈದಾನದಲ್ಲಿ ಜಿಲ್ಲಾ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ನಡೆದ ಕಾರ್ಯಕ್ರಮದ ಧ್ವಜಾರೋಹಣವನ್ನು ಜಿಲ್ಲಾ ಉಸ್ತುವಾರಿ ಸಚಿವ ಆರ್.ಅಶೋಕ್ ನೆರವೇರಿಸಿದರು.

ನಂತರ ಮಾತನಾಡಿದ ಅವರು, ‘ಬ್ರಿಟಿಷರ ದಾಸ್ಯದ ಸಂಕೋಲೆಯಿಂದ ಬಿಡುಗಡೆಯಾಗಲು ಹೋರಾಡಿದ ವೀರ ಸೇನಾನಿಗಳ ತ್ಯಾಗ ಬಲಿದಾನದ ಸಂಕೇತವೇ ಸ್ವಾತಂತ್ರ್ಯ ದಿನಾಚರಣೆಯಾಗಿದೆ’ ಎಂದು ಹೇಳಿದರು.

‘ಸ್ವಾತಂತ್ರ್ಯಕ್ಕಾಗಿ ಅಹಿಂಸಾ ಮಾರ್ಗದಿಂದ ಅರ್ಪಣಾ ಮನೋಭಾವದಿಂದ ಹೋರಾಡಿದ ರಾಷ್ಟ್ರಪಿತ ಗಾಂಧೀಜಿ, ನೆಹರು, ತಿಲಕ್, ಲಜಪತ್ ರಾಯ್, ವಲ್ಲಭಬಾಯಿ ಪಟೇಲ್, ಸುಭಾಷ್ ಚಂದ್ರಭೋಸ್, ಆಜಾದ್, ಭಗತ್ ಸಿಂಗ್ ಇನ್ನಿತರ ಅಸಂಖ್ಯಾತ ಚೇತನಗಳಿಗೆ ಗೌರವ ನಮನ ಸಲ್ಲಿಸುವುದು ಎಲ್ಲರ ಕರ್ತವ್ಯವಾಗಿದೆ’ ಎಂದು ಹೇಳಿದರು. 

ದೇಶದ ಭವ್ಯ ಪರಂಪರೆ ಸಂಸ್ಕೃತಿ ಉಳಿಸಿಕೊಂಡು, ಜಾತಿ ಭಾಷೆ ಪಂಗಡಗಳ ಸಂಕುಚಿತ ಭಾವನೆಯಿಂದ ಹೊರಬಂದು ಸೌಹಾರ್ದತೆ ನೆಲೆಸುವಂತೆ ಮಾಡಬೇಕಿದೆ. ಬಲಿಷ್ಠ ರಾಷ್ಟ್ರ ನಿರ್ಮಾಣದ ಸಂಕಲ್ಪ ಮಾಡಬೇಕಾಗಿದೆ ಎಂದು ತಿಳಿಸಿದರು. 

ಕೋವಿಡ್–19 ಸೋಂಕು ರಾಜ್ಯ ಮತ್ತು ದೇಶದ ಅಭಿವೃದ್ಧಿಗೆ ಪೆಟ್ಟು ನೀಡಿದೆ. ಜಿಲ್ಲೆಯಲ್ಲಿ ಈಗಾಗಲೇ 31 ಫೀವರ್ ಕ್ಲಿನಿಕ್ ಕಾರ್ಯನಿರ್ವಹಿಸುತ್ತಿದ್ದು, ಈ ಪೈಕಿ 5 ಕ್ಲಿನಿಕ್‍ಗಳು ಖಾಸಗಿ ಆಸ್ಪತ್ರೆಗಳಲ್ಲಿವೆ. ಸೋಂಕಿನ ಸಮಸ್ಯೆಯನ್ನು ಸಮರ್ಥವಾಗಿ ನಿಭಾಯಿಸಲಾಗುತ್ತಿದೆ ಎಂದು ಹೇಳಿದರು. 

ಸಾಮಾಜಿಕ ಭದ್ರತಾ ಯೋಜನೆಗಳಡಿ 1,26,100 ಫಲಾನುಭವಿಗಳಿಗೆ ವೇತನ ನೀಡಲಾಗುತ್ತಿದೆ. 40 ಸ್ವಾತಂತ್ರ್ಯ ಹೋರಾಟಗಾರರಿಗೆ ₹ 10 ಸಾವಿರ ಮಾಸಾಶನ ನೀಡಲಾಗುತ್ತಿದೆ ಎಂದು ಮಾಹಿತಿ ನೀಡಿದರು. 

8,411 ಕಟ್ಟಡ ಕಾರ್ಮಿಕರಿಗೆ ತಲಾ ₹ 5 ಸಾವಿರ ಪರಿಹಾರ, 11,434 ಕಾರ್ಮಿಕರಿಗೆ ದಿನಸಿ ಕಿಟ್ ವಿತರಿಸಲಾಗಿದೆ. ಮಡಿವಾಳರಿಗೆ ಮತ್ತು ಸವಿತಾ ಸಮುದಾಯದ 1,106 ಅರ್ಹರಿಗೆ ತಲಾ 5 ಸಾವಿರ ಪರಿಹಾರ ವಿತರಿಸಲಾಗಿದೆ. ಸೋಂಕಿನ ನಡುವೆ ಈ ಬಾರಿಯ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಜಿಲ್ಲೆ ರಾಜ್ಯ ಮಟ್ಟದಲ್ಲಿ ದ್ವಿತೀಯ ಸ್ಥಾನ ಪಡೆದಿರುವುದು ಉತ್ತಮ ಬೆಳೆವಣಿಗೆ ಎಂದು ಹೇಳಿದರು.

ಶಾಸಕ ನಿಸರ್ಗ ನಾರಾಯಣಸ್ವಾಮಿ ಮಾತನಾಡಿ, ಬಯಲು ಸೀಮೆಗೆ ಈವರೆಗೆ ಯಾವುದೇ ಶಾಶ್ವತವಾದ ನೀರಾವರಿ ಯೋಜನೆಗಳಿಲ್ಲ. ಬೆಂಗ
ಳೂರು ನಗರದ ಕಲುಷಿತ ನೀರು ಸಂಸ್ಕ
ರಿಸಿ 9 ಕೆರೆಗಳಿಗೆ ನೀರು ತುಂಬಿಸಲಾಗುತ್ತಿದೆ. ಕ್ಷೇತ್ರದಲ್ಲಿನ 128 ಕೆರೆಗಳಿಗೂ ನೀರು ತುಂಬಿಸಬೇಕು ಎಂದು ಸಚಿವರಲ್ಲಿ ಮನವಿ ಮಾಡಿದರು.

ನಾಡ ಪ್ರಭುಗಳ ಪೂರ್ವಜರ ಕರ್ಮಭೂಮಿ ಆವತಿ ಗ್ರಾಮವನ್ನು ಅಭಿವೃದ್ಧಿ ಪಡಿಸಬೇಕು. ಹಾಲಿನ ಪುಡಿ ಉತ್ಪಾದನಾ ಘಟಕ, ಹೆಚ್ಚಿನ ದ್ರಾಕ್ಷಿ ಬೆಳೆಯುತ್ತಿರುವ ರೈತರಿಗೆ ಅನುಕೂಲವಾಗಲು ವೆಂಕಟಗಿರಿಕೋಟೆ ಬಳಿ ವೈನ್ ಉತ್ಪಾದನಾ ಘಟಕ ಆರಂಭಿಸಲು ಸರ್ಕಾರಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ದೇವನಹಳ್ಳಿ ಮತ್ತು ವಿಜಯಪುರ ಪುರಸಭೆ, ಅವಳಿ ನಗರಗಳಾಗಿದ್ದು, ಅಭಿವೃದ್ಧಿ ಪಡಿಸಬೇಕಾಗಿದೆ. ಎರಡು ಪುರಸಭೆ ಹೊಂದಿರುವ ತಾಲ್ಲೂಕಿನಲ್ಲಿ ತ್ಯಾಜ್ಯ ಸಂಗ್ರಹ ಘಟಕ ಆರಂಭಕ್ಕೆ ಅನುದಾನ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು. 

ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಜಯಮ್ಮ , ಉಪಾಧ್ಯಕ್ಷೆ ಕನ್ಯಾಕುಮಾರಿ, ಬೈಯಾಪ ಅಧ್ಯಕ್ಷ ಎ.ರವಿ, ವಿಧಾನ ಷರಿಷತ್ ಸದಸ್ಯ ಎನ್.ನಾಗರಾಜ್, ಜಿಲ್ಲಾ ಪಂಚಾಯಿತಿ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಸಿ.ಮಂಜುನಾಥ್, ತಾಲ್ಲೂಕು ಪಂಚಾಯತಿ ಅಧ್ಯಕ್ಷೆ ಶಶಿಕಲಾ, ಉಪಾಧ್ಯಕ್ಷೆ ಲಲಿತಮ್ಮ, ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ, ಹೆಚ್ಚುವರಿ ಜಿಲ್ಲಾಧಿಕಾರಿ ಜಗದೀಶ್ ಕೆ.ನಾಯ್ಕ, ಜಿಲ್ಲಾ ಪಂಚಾಯಿತಿ ಸಿ.ಇ.ಓ .ಎನ್ ಎಂ.ನಾಗರಾಜ್, ಪೊಲೀಸ್ ಅಧೀಕ್ಷಕ ರವಿ.ಡಿ,ಚೆನ್ನಣ್ಣನವರ್ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಕೊರೊನ ಕಡಿವಾಣಕ್ಕೆ ಶ್ರಮಿಸಿದವರು, ಸೋಂಕಿನಿಂದ ಗುಣ ಮುಖರಾದವರು, ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಜಿಲ್ಲೆಗೆ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳು ಮತ್ತು ನರೇಗಾ ಯೋಜನೆಯಲ್ಲಿನ ಉತ್ತಮ ಕೆಲಸ ಮಾಡಿದ ಸಾಧಕ ಅಧಿಕಾರಿಗಳನ್ನು ಸನ್ಮಾನಿಸಲಾಯಿತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.