ಭಾನುವಾರ, ಜುಲೈ 3, 2022
27 °C
ಮೂಲಸೌಲಭ್ಯ ಕಲ್ಪಿಸಲು ಗ್ರಾಮಸ್ಥರ ಆಗ್ರಹ

ಕೆ.ಮಲ್ಲಸಂದ್ರ ಪಿಎಚ್‌ಸಿ ಅವ್ಯವಸ್ಥೆ ಆಗರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹೊಸಕೋಟೆ: ಸುತ್ತಲಿನ ಹಳ್ಳಿಗಳ ಜನರ ಆರೋಗ್ಯ ಕಾಪಾಡಬೇಕಾದ ಕೆ. ಮಲ್ಲಸಂದ್ರ ಪ್ರಾಥಮಿಕ ಆರೋಗ್ಯ ಕೇಂದ್ರ ಅವ್ಯವಸ್ಥೆಯ ಆಗರವಾಗಿದೆ. ರೋಗಿಗಳಿಗೆ ಚಿಕಿತ್ಸೆ ಕೊಡಿಸಲು ಬರುವ ಸಂಬಂಧಿಕರು ಹಾಗೂ ಪೋಷಕರು ಸಹ ರೋಗಿಗಳಾಗಿ ತೆರಳುವಂತಹ ಪರಿಸ್ಥಿತಿ ಇದೆ ಎಂಬುದು ಜನರ
ದೂರು.

ಸಮೇತನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆ. ಮಲ್ಲಸಂದ್ರ ಕೇಂದ್ರ ಕಟ್ಟಡದ ಮೇಲ್ಚಾವಣಿ ಬಿರುಕು ಬಿಟ್ಟಿದೆ. ಜೋರಾಗಿ ಮಳೆ ಬಂದರೆ ಕೊಠಡಿಗಳು ಸೋರುತ್ತವೆ. ಆರೋಗ್ಯ ಕೇಂದ್ರದ ಸುತ್ತಮುತ್ತ ಕಸದ ರಾಶಿ, ಕಟ್ಟಡದ ತ್ಯಾಜ್ಯ ತಂದು ಸುರಿಯಲಾಗಿದೆ. ಇಲ್ಲಿ ಚಿಕಿತ್ಸೆಗೆ ಬರುವ ರೋಗಿಗಳು ಹಾಗೂ ಸಿಬ್ಬಂದಿಗೆ ಉಸಿರುಗಟ್ಟಿಸುವ ವಾತಾವರಣ ನಿರ್ಮಾಣವಾಗಿದೆ.

ಆಸ್ಪತ್ರೆ ಹಿಂದೆ ಹಾಗೂ ಬಲಭಾಗದಲ್ಲಿ ತ್ಯಾಜ್ಯ ತುಂಬಿಕೊಂಡಿದೆ. ಸುತ್ತಲೂ ಪಾರ್ಥೇನಿಯಂ ಗಿಡಗಳು ಹಾಗೂ ಆಳೆತ್ತರಕ್ಕೆ ಗಿಡಗಳು ಬೆಳೆದಿದ್ದು ವಿಷ‌ಜಂತುಗಳಿಗೆ ಆಶ್ರಯ ನೀಡಿವೆ. ಆಸ್ಪತ್ರೆ ಸುತ್ತಲೂ ಕಲುಷಿತ ವಾತಾವರಣ ಇದ್ದರೂ, ಅದನ್ನು ಸ್ವಚ್ಛಗೊಳಿಸಲು ಇದುವರೆಗೂ ಯಾರೂ ಕ್ರಮವಹಿಸಿಲ್ಲ. ಮೂರು ಎಕರೆ ವಿಸ್ತೀರ್ಣ ಇರುವ ಈ ಆರೋಗ್ಯ ಕೇಂದ್ರಕ್ಕೆ ಸರಿಯಾದ ಕಾಂಪೌಂಡ್‌ ಕೂಡ ಇಲ್ಲ.

ಸ್ವಚ್ಛ ಭಾರತ ಮಿಷನ್ ಯೋಜನೆಯಡಿ ಕೇಂದ್ರದ ಬಳಿ ₹ 2 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾಗಿರುವ ಶೌಚಾಲಯಕ್ಕೆ ನೀರು ಪೂರೈಕೆಯಾಗುತ್ತಿಲ್ಲ. ಇದರಿಂದ ಉಪಯೋಗಕ್ಕೆ ಬಾರದಂತಾಗಿದೆ. ಶೌಚಾಲಯಕ್ಕೆ ಹೋಗಲು ಸರಿಯಾದ ದಾರಿಯೂ ಇಲ್ಲ. ಆಸ್ಪತ್ರೆಗೆ ಬರುವ ರೋಗಿಗಳು ಬಯಲನ್ನೇ ಶೌಚಾಲಯ ಮಾಡಿಕೊಂಡಿದ್ದಾರೆ.

ಶೌಚಾಲಯವನ್ನು ಬಹಳ ದಿನಗಳಿಂದ ಬಳಸದೆ ಇರುವುದರಿಂದ ನಿರುಪಯುಕ್ತ ವಸ್ತುಗಳು ಹಾಗೂ ಕಳೆ ಸಸ್ಯಗಳ ಬೀಡಾಗಿದೆ. ಆಸ್ಪತ್ರೆಗೆ ಬರುವವರಿಗೆ ಸುಸಜ್ಜಿತ ಶೌಚಾಲಯದ ಅಗತ್ಯವಿದೆ.   

‘ವೈದ್ಯಾಧಿಕಾರಿಯು ನಿಯಮಿತವಾಗಿ ಕರ್ತವ್ಯಕ್ಕೆ ಬರುತ್ತಿಲ್ಲ. ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ನೂತನ ವೈದ್ಯಾಧಿಕಾರಿಯನ್ನು ನೇಮಕ ಮಾಡಬೇಕು’ ಎಂಬುದು ಮುಖಂಡ ಸಂತೋಷಕುಮಾರ್ ಅವರ ಒತ್ತಾಯ.

‘ಬಯಲು ಶೌಚಮುಕ್ತ ಗ್ರಾಮ ಪಂಚಾಯಿತಿ ಎಂದೆಲ್ಲ ಬಿಂಬಿಸಿಕೊಂಡಿರುವ ಸಮೇತನಹಳ್ಳಿ ಗ್ರಾಮ ಪಂಚಾಯಿತಿಯು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಮೂಲ ಸೌಕರ್ಯ ಒದಗಿಸಲು ಮುಂದಾಗಬೇಕು. ತ್ವರಿತವಾಗಿ ಆಸ್ಪತ್ರೆಯ ಅವ್ಯವಸ್ಥೆ ಸರಿಪಡಿಸಲು ಮುಂದಾಗಬೇಕು’ ಎಂದು ಸ್ಥಳೀಯರಾದ ಕಾರ್ತಿಕ್ ಒತ್ತಾಯಿಸುತ್ತಾರೆ. 

‘ಕೆ. ಮಲ್ಲಸಂದ್ರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ವಿರುದ್ಧ ಈಗಾಗಲೇ ಸಾರ್ವಜನಿಕರಿಂದ ಸಾಕಷ್ಟು ದೂರುಗಳು ಕೇಳಿಬಂದಿವೆ. ತಾಲ್ಲೂಕು ಆರೋಗ್ಯಾಧಿಕಾರಿ ಮೂಲಕ ತನಿಖೆ ನಡೆಸಿ ವರದಿ ಪಡೆದುಕೊಂಡು ಇಲಾಖೆಯ ಮೇಲಧಿಕಾರಿಗಳೊಂದಿಗೆ ಚರ್ಚಿಸಿ ಸಮಸ್ಯೆ ಬಗೆಹರಿಸಲಾಗುವುದು’ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ತಿಪ್ಪೇಸ್ವಾಮಿ ತಿಳಿಸಿದರು.

‘ಆರೋಗ್ಯ ಕೇಂದ್ರದ ಅವ್ಯವಸ್ಥೆ ಬಗ್ಗೆ ಈಗಾಗಲೇ ದೂರುಗಳು ಬಂದಿವೆ. ಸತ್ಯಾಸತ್ಯತೆ ಬಗ್ಗೆ ತನಿಖೆ ನಡೆಸಲಾಗುವುದು. ಹೊಸದಾಗಿ ವೈದ್ಯಾಧಿಕಾರಿಯನ್ನು ನೇಮಕ ಮಾಡುವ ಬಗ್ಗೆ ಇಲಾಖೆಯೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು’ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ವೀಣಾ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು