ಭಾನುವಾರ, 24 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

150 ಪ್ರಕರಣ ವಿಲೇವಾರಿ ಗುರಿ

ಜಿಲ್ಲೆಯಲ್ಲಿ ಉಪ ಲೋಕಾಯುಕ್ತ ಪ್ರವಾಸ
Published 5 ಆಗಸ್ಟ್ 2023, 16:04 IST
Last Updated 5 ಆಗಸ್ಟ್ 2023, 16:04 IST
ಅಕ್ಷರ ಗಾತ್ರ

ದೇವನಹಳ್ಳಿ: ಸರ್ಕಾರಿ ಸೇವೆಯಲ್ಲಿ ಕರ್ತವ್ಯ ನಿರ್ವಹಣೆ ಮಾಡುತ್ತಿರುವ ಸಿಬ್ಬಂದಿಗಳು ಕೇವಲ ಸಂಬಳಕ್ಕೆ ಕಾರ್ಯ ನಿರ್ವಹಿಸದೆ, ಜನಸಾಮಾನ್ಯರಿಗೆ ಅನುಕೂಲವಾಗುವಂತೆ ಸಾಮಾಜಿಕ ಕಳಕಳಿಯಲ್ಲಿ ಸೇವೆ ಸಲ್ಲಿಸಬೇಕು ಎಂದು ಉಪ ಲೋಕಾಯುಕ್ತ ನ್ಯಾ. ಕೆ.ಎನ್‌ ಫಣೀಂದ್ರ ತಿಳಿಸಿದರು.

ತಾಲ್ಲೂಕಿನ ಬೀರಸಂದ್ರ ಗ್ರಾಮದ ಜಿಲ್ಲಾಡಳಿತ ಭವನದಲ್ಲಿ ಶನಿವಾರ ಪ್ರಾರಂಭವಾದ ಲೋಕಾಯುಕ್ತರ ನಾಲ್ಕು ದಿನಗಳ ಜಿಲ್ಲಾ ಪ್ರವಾಸದ ಭಾಗವಾಗಿ ಸಾರ್ವಜನಿಕ ಅಹವಾಲು, ಕುಂದುಕೊರತೆ, ದೂರು ವಿಚಾರಣೆ ಹಾಗೂ ಪ್ರಕರಣಗಳ ವಿಲೇವಾರಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಪ್ರವಾಸದ ವೇಳೆ ವಿವಿಧ ಇಲಾಖೆಗಳಿಗೆ ಅನಿರೀಕ್ಷಿತ ಭೇಟಿ ನೀಡಿ ಪರಿಶೀಲನೆ ಮಾಡಲಾಗುತ್ತದೆ. ಈಗಾಗಲೇ ಲೋಕಾಯುಕ್ತದಲ್ಲಿ ಜಿಲ್ಲೆಯ 400 ಪ್ರಕರಣಗಳು ದಾಖಲಾಗಿದ್ದು, 150 ಪ್ರಕರಣವನ್ನು ವಿಲೇ ಮಾಡಲಾಗುವುದು ಎಂದರು.

ಅಧಿಕಾರಿಗಳಿಂದ ಅನಗತ್ಯ ವಿಳಂಬ, ಕಿರುಕುಳ, ಕರ್ತವ್ಯ ಲೋಪ ಮಾಡುವವರ ವಿರುದ್ಧ ಲೋಕಾಯುಕ್ತಕ್ಕೆ ದೂರು ನೀಡಬಹುದಾಗಿದೆ. ಸಮಾಜದಲ್ಲಿ ಆಸ್ತಿ ಪಾಸ್ತಿ, ಗೌರವ ಹಾಗೂ ದೇಹದ ಸಂರಕ್ಷಣೆಯೂ ಜೀವನದ ಹಕ್ಕಾಗಿದೆ. ಅವುಗಳನ್ನು ಕಾನೂನಿ ಮೂಲಕ ರಕ್ಷಿಸಬಹುದಾಗಿದೆ ಎಂದು ತಿಳಿಸಿದರು.

ರಸ್ತೆ, ಕೆರೆ, ಕುಂಟೆ, ಅರಣ್ಯ ಅಭಿವೃದ್ಧಿ ಯೋಜನೆಗಳು ಜನರ ಅನುಕೂಲಕ್ಕಿದೆ. ಪ್ರತಿ ಶಾಸಕರು, ಅಧಿಕಾರಿಗಳು ಜಪ್ರತಿನಿಧಿಗಳು, ಜನರ ಸೇವಕರೇ ಆಗಿದ್ದಾರೆ. ಸೂಕ್ತ ಸಮಯಕ್ಕೆ ಜನರಿಗೆ ಸವಲತ್ತು ತಲುಪಬೇಕಿದೆ. ಅದರಲ್ಲಿ ಲೋಪ ಕಂಡುಬಂದರೆ, ಅದನ್ನು ಪ್ರಶ್ನಿಸಿ ಉತ್ತರ ಬರದೇ ಇದ್ದಲ್ಲಿ, ಲೋಕಾಯುಕ್ತ ಸಂಪರ್ಕಿಸಿ ಎಂದರು.

ಕುವೆಂಪು, ಡಿ.ವಿ.ಗುಂಡಪ್ಪ ಸೇರಿದಂತೆ ದಾರ್ಶನಿಕರ ತತ್ವಗಳನ್ನು ಸಾರ್ವಜನಿಕ ಸೇವೆಯಲ್ಲಿರುವ ಅಧಿಕಾರಿಗಳು ಅಳವಡಿಸಿಕೊಳ್ಳಬೇಕು. ಆರೋಗ್ಯಯುತ ಸಮಾಜಕ್ಕೆ ಮಾಧ್ಯಮ ಮಿತ್ರರೂ ಕೈ ಜೋಡಿಸಬೇಕಿದೆ. ಜನರ ಸಮಸ್ಯೆಗಳ ನಿವಾರಣೆಯಲ್ಲಿ ತಡ ಮಾಡದೇ ತ್ವರಿತವಾಗಿ ಕೆಲಸ ಮಾಡೋಣ. ಜನಸಂಖ್ಯೆಯ ಅನುಗುಣವಾಗಿ ಇಂದು ಶೇ 1ರಷ್ಟು ಸರ್ಕಾರಿ ನೌಕರರು ಇಲ್ಲದಿದ್ದರೂ ಸೇವೆಯಲ್ಲಿ ಅಡೆತಡೆಯಾಗದಂತೆ ಎಚ್ಚರವಹಿಸೋಣ ಎಂದರು.

ಲೋಕಾಯುಕ್ತದ ಹೆಚ್ಚುವರಿ ನಿಬಂಧಕರಾದ ಶಶಿಕಾಂತ ಬಿ. ಭಾವಿಕಟ್ಟಿ, ಉಪನಿಬಂಧಕರಾದ ಎಂ.ವಿ.ಚನ್ನಕೇಶವರೆಡ್ಡಿ, ಹಿರಿಯ ಸಿವಿಲ್ ನ್ಯಾಯಾಧೀಶರಾದ ಸಂದೀಪ್ ಸಾಲಿಯಾನ, ಜಿಲ್ಲಾಧಿಕಾರಿ ಡಾ. ಎನ್.ಶಿವಶಂಕರ, ಸಿಇಓ ಡಾ.ಕೆ.ಎನ್‌.ಅನುರಾಧ, ಎಸ್‌ಪಿ ಮಲ್ಲಿಕಾರ್ಜುನ ಬಾಲದಂಡಿ, ಜಿಲ್ಲಾ ಲೋಕಾಯುಕ್ತ ಪೊಲೀಸ್ ಶ್ರೀನಾಥ್, ಎಂ.ಜೋಶಿ, ಹೆಚ್ಚುವರಿ ಜಿಲ್ಲಾಧಿಕಾರಿ ಎಚ್‌.ಅಮರೇಶ್, ಜಿಪಂ ಉಪ ಕಾರ್ಯದರ್ಶಿ ರಮೇಶ್ ಇದ್ದರು.

84 ಅರ್ಜಿಗಳ ಸ್ವೀಕಾರ

ಸಾಗುವಳಿ ಚೀಟಿ ಖಾತೆ ಬದಲಾವಣೆ ಅಕ್ರಮ ಗಣಿಗಾರಿಕೆ ಗೋಮಾಳ ಒತ್ತುವರಿ ಸರ್ಕಾರಿ ಜಮೀನು ಒತ್ತುವರಿ ಹಕ್ಕು ಪತ್ರ ವಿತರಣೆ ರಾಜಕಾಲುವೆ ಒತ್ತುವರಿ ಅಕ್ರಮ ಜಮೀನು ಒತ್ತುವರಿ ಮುನಿಸಿಪಾಲಿಟಿ ಪಿಟಿಸಿಎಲ್ ಸೇರಿದಂತೆ ಅಕ್ರಮ ಬಡವಾಣೆಗಳ ಪ್ರಕರಣಗಳಿಗೆ ಸಂಬಂಧಿಸಿದಂತೆ ಸಾರ್ವಜನಿಕರು ಉಪ ಲೋಕಾಯುಕ್ತರಿಗೆ 84 ಅಹವಾಲು ಸ್ವೀಕಾರ ಮಾಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT