ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆರೆ ಉಳಿಸುವ ಜವಾಬ್ದಾರಿ ಭಾಷೆ ಉಳಿವಿಗಿಂತ ದೊಡ್ಡದು: ದೊಡ್ಡಹುಲ್ಲೂರು ರುಕ್ಕೋಜಿ

ದೊಡ್ಡಹುಲ್ಲೂರು ರುಕ್ಕೋಜಿ ಅಧ್ಯಕ್ಷತೆಯಲ್ಲಿ 9ನೇ ಸಾಹಿತ್ಯ ಸಮ್ಮೇಳನ
Published 3 ಮಾರ್ಚ್ 2024, 14:04 IST
Last Updated 3 ಮಾರ್ಚ್ 2024, 14:04 IST
ಅಕ್ಷರ ಗಾತ್ರ

ಹೊಸಕೋಟೆ: ‘ಎಂದೆಂದಿಗೂ ಜನರ ಜೀವನಾಡಿಗಳಾಗಿ ಕೆಲಸ ಮಾಡುವ ಕೆರೆಗಳು ಇಂದು ಅಳಿವಿನ ಅಂಚಿನಲ್ಲಿವೆ. ಅವುಗಳನ್ನು ಉಳಿಸುವ ಕೆಲಸವನ್ನು ಆದ್ಯತೆಯ ಮೇರೆಗೆ ಮಾಡಬೇಕಿದೆ’ ಎಂದು 9ನೇ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ದೊಡ್ಡಹುಲ್ಲೂರು ರುಕ್ಕೋಜಿ ಹೇಳಿದರು.

ತಾಲ್ಲೂಕು ಕಚೇರಿ ಆವರಣದಲ್ಲಿ ಶನಿವಾರ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಹಮ್ಮಿಕೊಂಡಿದ್ದ 9ನೇ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿ ಮಾತನಾಡಿದರು.

‘ಸುಮಾರು 500 ವರ್ಷಗಳ ಇತಿಹಾಸ ಹೊಂದಿರುವ ಹೊಸಕೋಟೆ ದೊಡ್ಡಕೆರೆಯನ್ನು ಉಳಿಸುವ ಕೆಲಸ ಮೊದಲು ಹೊಸಕೋಟೆಯ ಜನತೆಯಿಂದ ಆಗಬೇಕು. ಕನ್ನಡ ಭಾಷೆಯನ್ನು ಉಳಿಸಿ ಬೆಳೆಸಲು ಸಾಕಷ್ಟು ಜನರಿದ್ದಾರೆ. ಆದರೆ ಜೀವಸೆಲೆ, ಜೀವಮೂಲಗಳಾದ ತಾಲ್ಲೂಕಿನ ಕೆರೆಗಳನ್ನು ಉಳಿಸುವ ಕೆಲಸ ಪ್ರಮುಖವಾಗಿ ಆಗಬೇಕಿದೆ’ ಎಂದರು.

‘ಹೊಸಕೋಟೆ ದೊಡ್ಡಕೆರೆ ವಿವಿಧ ಪ್ರಭೇದಗಳ ಪಕ್ಷಿಗಳ ಕಲರವದ ಸ್ಥಳವಾಗಿತ್ತು. ಪ್ರಾಣಿ ಪಕ್ಷಿಗಳ ಮೆಲುದನಿ ಕೂಗು ಕಲರವಕ್ಕಿಂತ ಬೇರೆ ಆಶೀರ್ವಾದ ನಮಗೆ ಬೇಕೇ. ತುಂಬಿದ ಕೆರೆಯಂಚುಗಳಲ್ಲಿ ತೇಲಿ ಬರುವ ತಂಗಾಳಿಗಿಂತ ಮನುಷ್ಯನಿಗೆ ಯಾವ ಸುಖ ಇದ್ದಿತು. ಆದ್ದರಿಂದ ಹೊಸಕೋಟೆಯ ದೊಡ್ಡ ಕೆರೆಯನ್ನು ಉಳಿಸಿ ಅಭಿವೃದ್ಧಿಪಡಿಸುವ ಕೆಲಸ ಆಗಬೇಕು. ಈ ಹಕ್ಕೊತ್ತಾಯ ಕೇವಲ ತಾಲ್ಲೂಕಿನ ಮಾತ್ರವಲ್ಲದೆ ಇಡೀ ರಾಜ್ಯಕ್ಕೆ ಅನ್ವಯವಾಗಬೇಕಿದೆ’ ಎಂದು ಒತ್ತಾಯಿಸಿದರು.

ಸಂಸದ ಬಿ.ಎನ್.ಬಚ್ಚೇಗೌಡ ಮಾತನಾಡಿ, ‘ಸುಮಾರು ಎರಡೂವರೆ ಸಾವಿರಕ್ಕೂ ಹೆಚ್ಚು ವರ್ಷಗಳ ಇತಿಹಾಸ ಹೊಂದಿರುವ ಕನ್ನಡ ಭಾಷೆಗೆ ಜಗತ್ತಿನಲ್ಲಿಯೇ ವಿಶೇಷವಾದ ಗೌರವವಿದೆ. ಅಲ್ಲದೆ ಹಲವು ಹೊಸದಾದ ಜೀವಪರ ಪರಂಪರೆಗಳನ್ನು ಹುಟ್ಟುಹಾಕಿದ ಕೀರ್ತಿ ಕನ್ನಡ ಭಾಷೆಗಿದೆ. ಆದ್ದರಿಂದ ನಾನೊಬ್ಬ ಕನ್ನಡಿಗ ಎಂದು ಹೇಳಿಕೊಳ್ಳಲು ನನಗೆ ಹೆಮ್ಮೆ ಎನಿಸುತ್ತದೆ’ ಎಂದು ಹೇಳಿದರು.

ಶಾಸಕ ಶರತ್ ಬಚ್ಚೇಗೌಡ ಮಾತನಾಡಿ, ‘ಸಾಹಿತ್ಯ ಸಂಸ್ಕೃತಿ, ಸಾಂಸ್ಕೃತಿಕ ಕ್ಷೇತ್ರದ ಅಭಿವೃದ್ಧಿ ದೃಷ್ಟಿಯಿಂದ ಸರ್ಕಾರ ಎಲ್ಲ ರೀತಿಯ ಸಹಕಾರ ನೀಡುತ್ತಾ ಬಂದಿದೆ. ನೆಲ, ಜಲ, ಭಾಷೆ ವಿಚಾರ ಬಂದಾಗ ಪ್ರತಿಯೊಬ್ಬ ಕನ್ನಡಿಗರು ಒಗ್ಗಟ್ಟಾಗಬೇಕು. ಕನ್ನಡಕ್ಕಾಗಿ ಅವಿರತ ದುಡಿದ ಹಲವಾರು ಸ್ಮರಣೀಯರಿದ್ದು ಅವರಿಗೆ ಗೌರವ ಸಮರ್ಪಿಸುವ ಕೆಲಸ ಆಗಬೇಕು. ಅಷ್ಟೇ ಅಲ್ಲದೆ ಸಮ್ಮೇಳನಗಳು ಹಬ್ಬದ ರೀತಿಯಲ್ಲಿ ನಡೆಯಬೇಕು’ ಎಂದರು.

ಮುನ್ನ ನಗರದ ಕೆಇಬಿ ವೃತ್ತದಿಂದ ಬೆಳ್ಳಿರಥ, ವಿವಿಧ ಸಾಂಸ್ಕೃತಿಕ ಕಲಾ ತಂಡಗಳೊಂದಿಗೆ ಸಮ್ಮೇಳನಾಧ್ಯಕ್ಷರ ಮೆರವಣಿಗೆ ವೇದಿಕೆವರೆಗೆ ನಡೆಯಿತು.

ತಹಶೀಲ್ದಾರ್ ವಿಜಯ್ ಕುಮಾರ್, ಕಸಾಪ ಜಿಲ್ಲಾಧ್ಯಕ್ಷ ಕೃಷ್ಣಪ್ಪ, ತಾಲ್ಲೂಕು ಅಧ್ಯಕ್ಷ ಎಚ್.ಎಂ.ಮುನಿರಾಜು, ರಾಜ್ಯ ಒಕ್ಕಲಿಗರ ಸಂಘದ ಮಾಜಿ ನಿರ್ದೇಶಕ ಬಿ.ಎನ್.ಗೋಪಾಲಗೌಡ, ಕನ್ನಡ ಕಾರ್ಮಿಕರ ಹೋರಾಟ ವೇದಿಕೆ ಮಾಜಿ ಅಧ್ಯಕ್ಷ ಹುಲ್ಲೂರು ರಾಜ್ ಗೋಪಾಲ್, ಎಚ್.ಎಂ. ಸುಬ್ಬರಾಜು ಇದ್ದರು.

ಸಮ್ಮೇಳನದ ವೇದಿಕೆ ಕಾರ್ಯಕ್ರಮ ಉದ್ಘಾಟಿಸಿದ ಗಣ್ಯರು
ಸಮ್ಮೇಳನದ ವೇದಿಕೆ ಕಾರ್ಯಕ್ರಮ ಉದ್ಘಾಟಿಸಿದ ಗಣ್ಯರು
ಮೆರವಣಿಗೆಯಲ್ಲಿ ಸಾಗಿ ಬಂದ ಕಳಶ ಹೊತ್ತ ವಿದ್ಯಾರ್ಥಿನಿಯರು
ಮೆರವಣಿಗೆಯಲ್ಲಿ ಸಾಗಿ ಬಂದ ಕಳಶ ಹೊತ್ತ ವಿದ್ಯಾರ್ಥಿನಿಯರು

ಅಸಮಾಧಾನದ ಹೊಗೆ

ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಕುರಿತು ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳಿಗೆ ಸೂಕ್ತ ಮಾಹಿತಿ ಇಲ್ಲದ ಕಾರಣ ಪರಿಷತ್ತಿನ ಒಳಗೆಯೇ ಅಸಮಾಧಾನದ ಹೊಗೆಯಾಡುತ್ತಿತ್ತು. ಸಾಹಿತ್ಯ ಸಮ್ಮೇಳನವಾಗಿದ್ದರೂ ಸಾಹಿತಿಗಳಿಗೆ ಸಲ್ಲಬೇಕಾದ ಸೂಕ್ತ ಗೌರವ ಸಿಕ್ಕಿಲ್ಲ. ನಗರದಾದ್ಯಂತ ರಾಜಕೀಯ ಮುಖಂಡರ ಶುಭಾಷಯ ಕೋರುವ ಪ್ಲೆಕ್ಸ್ ಬ್ಯಾನರ್‌ ಮಾತ್ರ ರಾರಾಜಿಸುತ್ತಿತ್ತು. ಇದು ಸಾಹಿತ್ಯ ಕಾರ್ಯಕ್ರಮವೋ ರಾಜಕೀಯ ಕಾರ್ಯಕ್ರಮವೋ ಎಂಬ ಅನುಮಾನ ಸಾಹಿತ್ಯಾಸಕ್ತರಲ್ಲಿ ಮೂಡುವಂತೆ ಮಾಡಿತ್ತು. ಇತ್ತೀಚೆಗೆ ಅಗಲಿದ ಹೊಸಕೋಟೆ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿ ಜಗದೀಶ್ ಕೆಂಗನಾಳ್ ಅವರ ಕುರಿತು ಸಾಹಿತ್ಯ ಪರಿಷತ್ ಪದಾಧಿಕಾರಿಗಳು ಅನಾದರ ತೋರಿರುವುದು ಸಾಹಿತ್ಯಾಭಿಮಾನಿಗಳಲ್ಲಿ ಅಸಹನೆ ಉಂಟಾಗುವಂತೆ ಮಾಡಿತ್ತು. ಕನ್ನಡ ಸಾಧಕರನ್ನು ಗುರುತಿಸುವ ಪಿಯುಸಿ ಎಸ್‌ಎಸ್‌ಎಲ್‌ಸಿ ವಿವಿಧ ಪದವಿಗಳಲ್ಲಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳನ್ನು ಗೌರವಿಸುವ ತಾಲ್ಲೂಕಿನಾದ್ಯಂತ ಇರುವ ವಿವಿಧ ಪ್ರತಿಭಾವಂತ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜನೆ ಮಾಡುವ ವಿಚಾರದಲ್ಲಿ ಆಯೋಜಕರು ವಿಫಲವಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT