ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವ್ಯಾಲಿ ವಾದ ಸರಣಿ: ಜನರ ಬಲಿಗಾಗಿ ರೂಪಿಸಿದ ಯೋಜನೆ!

ಸಂದೀಪ್‌ ಅನಿರುದ್ಧನ್‌
Published 8 ನವೆಂಬರ್ 2023, 3:03 IST
Last Updated 8 ನವೆಂಬರ್ 2023, 3:03 IST
ಅಕ್ಷರ ಗಾತ್ರ

ಜನರ ಆರೋಗ್ಯ ಹಾಗೂ ಸುತ್ತಮುತ್ತಲಿನ ಪರಿಸರದ ಸುಸ್ಥಿರತೆ ಕಾಪಾಡುವುದು ನಾವು ಆಯ್ಕೆ ಮಾಡಿದ ಸರ್ಕಾರದ ಜವಾಬ್ದಾರಿ. ಸರ್ಕಾರ ಬೆಂಗಳೂರಿನ ಒಳಚರಂಡಿ ನೀರನ್ನು ಸಮರ್ಪಕವಾಗಿ ಸಂಸ್ಕರಿಸದೆ ಕೆ.ಸಿ. ವ್ಯಾಲಿ ಮತ್ತು ಎಚ್.ಎನ್.ವ್ಯಾಲಿ ಅವಳಿ ಯೋಜನೆಗಳ ಮೂಲಕ ಕೋಲಾರ, ಚಿಕ್ಕಬಳ್ಳಾಪುರ ಮತ್ತು ಬೆಂಗಳೂರು ಗ್ರಾಮಾಂತರದ ಕೆಲ ಪ್ರದೇಶದ ಕೆರೆಗಳನ್ನು ತುಂಬಿಸುತ್ತಿದೆ.

ಕಲುಷಿತ ನೀರನ್ನು ಹೇಗೆ ಸಂಸ್ಕರಿಸಿದರೂ ಅದು ವಿಷವೇ. ಅದನ್ನು ಕೆರೆಗಳಿಗೆ ತುಂಬಿಸಿ ಅಂತರ್ಜಲ ಮಲಿನಗೊಳಿಸಲಾಗುತ್ತಿದೆ. ಕೆರೆಗಳಿಗೆ ಕೊಳಚೆ ನೀರು ತುಂಬಿಸುವುದರಿಂದ ಅಂತರ್ಜಲ ನಂಜಾಗುತ್ತದೆ. ಇದು ಆ ಭಾಗದ ಜನ, ಜಾನುವಾರು ಮತ್ತು ಪರಿಸರದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಇದು ಒಂದು ರೀತಿ ಆ ಪ್ರದೇಶಗಳಲ್ಲಿ ಜನರ ಬಲಿಗಾಗಿ ಸರ್ಕಾರ ನಡೆಸುತ್ತಿರುವ ತಯಾರಿಯಂತೆ ನನಗೆ ಭಾಸವಾಗುತ್ತಿದೆ.  

ವ್ಯಾಲಿ ನೀರಿನಲ್ಲಿ ಕೇವಲ ಚರಂಡಿ ನೀರು ಮಾತ್ರವಲ್ಲ, ಕೈಗಾರಿಕೆಗಳ ಅಪಾಯಕಾರಿ ತ್ಯಾಜ್ಯವೂ ಸೇರಿದೆ. ಎರಡನೇ ಹಂತದ ಸಂಸ್ಕರಣೆಯಲ್ಲಿ ಒಳಚರಂಡಿ ನೀರು ಸರಿಯಾಗಿ ಶುದ್ಧೀಕರಣ ಆಗುತ್ತಿಲ್ಲ. ಇನ್ನೂ ಕೈಗಾರಿಕಾ ತ್ಯಾಜ್ಯ ಮತ್ತು ರಾಸಾಯನಿಕಗಳು ಹೇಗೆ ಸಂಸ್ಕರಣೆಗೊಳ್ಳುತ್ತವೆ?

ಈ ಹಂತದಲ್ಲಿ ಭಾರ ಲೋಹಗಳು ನೀರಿನಲ್ಲಿ ಉಳಿದುಕೊಳ್ಳುತ್ತಿವೆ. ಸರಿಯಾಗಿ ಸಂಸ್ಕರಣೆ ಆಗುತ್ತಿಲ್ಲ ಎಂದು ಇತ್ತೀಚಿಗೆ ಸಮೀಕ್ಷೆಯಿಂದ ಗೊತ್ತಾಗಿದೆ. ಸರ್ಕಾರ ಮೂರನೇ ಹಂತದಲ್ಲಿ ಈ ನೀರನ್ನು ಸಂಸ್ಕರಣೆ ಮಾಡುವುದಾಗಿ ಹೇಳುತ್ತಿದೆ. ಆದರೂ, ಅದರಲ್ಲಿಯ ರಾಸಾಯನಿಕಗಳು ಸಂಸ್ಕರಣೆ ಆಗುವುದು ಅನುಮಾನ!

ಈಗಾಗಲೇ ಆ ಪ್ರದೇಶಗಳ ಜನರಲ್ಲಿ ನಾನಾ ಅನಾರೋಗ್ಯ ಸಮಸ್ಯೆ ಕಾಡುತ್ತಿವೆ. ಮುಂದಿನ ದಿನಗಳಲ್ಲಿ ಆ ಪ್ರಾಂತ್ಯದ ಜನರು ಕಾಯಂ ರೋಗಪೀಡಿತರಾಗುತ್ತಾರೆ. ಕಾಯಿಲೆ ಹರಡುವಿಕೆ ಆರಂಭವಾಗುತ್ತದೆ. ಜನರ ಸರಣಿ ಸಾವು ಶುರುವಾಗುತ್ತವೆ. ಇದು ಬೆಂಗಳೂರು ಜನತೆಯನ್ನೂ ಬಾಧಿಸಲಿದೆ. ವ್ಯಾಲಿ ಯೋಜನೆಯಿಂದ ಮುಂದಿನ ದಿನಗಳಲ್ಲಿ ಆಗಲಿರುವ ಅಡ್ಡ ಪರಿಣಾಮ ಮತ್ತು ಅದರ ಗಂಭೀರತೆಯನ್ನು ಯಾರು ಅರಿತುಕೊಳ್ಳುತ್ತಿಲ್ಲ. ಇದು ಮಾನವ ಹಕ್ಕುಗಳ ಉಲ್ಲಂಘನೆ.

ಜಲಮೂಲ ರಕ್ಷಣೆಯೇ ಪರಿಹಾರ: ಯಾವುದೇ ಒಂದು ಯೋಜನೆ ಜಾರಿಗೊಳಿಸುವ ಮುನ್ನ ಸರ್ಕಾರ ರೂಪಿಸುವ ನೀತಿ,ನಿಯಮ ಸರಿ ಇರಬೇಕು. ಇಲ್ಲದಿದ್ದರೆ ಏನೆಲ್ಲ ಸಮಸ್ಯೆಗಳು ಉದ್ಭವಿಸುತ್ತವೆ ಎಂಬುದಕ್ಕೆ ಕೆ.ಸಿ ವ್ಯಾಲಿ ಮತ್ತು ಎಚ್‌.ಎನ್‌ ವ್ಯಾಲಿ ಯೋಜನೆಯೇ ಸಾಕ್ಷಿ. ನೀತಿ,ನಿಯಮ ರೂಪಿಸುವ ಹಂತದಲ್ಲೇ ದೊಡ್ಡ ತಪ್ಪು ನಡೆದಿದೆ. ಇದನ್ನು ಸರಿ‍ಪಡಿಸಬೇಕಿದೆ.

ಸ್ಥಳೀಯ ಜಲ ಮೂಲಗಳ ರಕ್ಷಣೆ, ಅಭಿವೃದ್ಧಿ ಮತ್ತು ಸುಸ್ಥಿರ ಉದ್ದೇಶದಿಂದ 2019ರಲ್ಲಿ ಸರ್ಕಾರ ಕರ್ನಾಟಕ ಜಲ ನಿಯಮ ರೂಪಿಸಿದ್ದು, ಇನ್ನೂ ಅನುಷ್ಠಾನಗೊಂಡಿಲ್ಲ. ಇದನ್ನು ಸರ್ಕಾರ ವ್ಯವಸ್ಥಿತವಾಗಿ ಜಾರಿಗೊಳಿಸಿದರೆ ಈಗ ಉದ್ಭವಿಸಿರುವ ಸಮಸ್ಯೆ ತಪ್ಪಿಸಬಹುದು.

ಕೋಲಾರ, ಚಿಕ್ಕಬಳ್ಳಾಪುರದ ಕೆರೆಗಳಲ್ಲಿ ನೀರಿಲ್ಲ ಎಂದರೆ ಬೇರೆ ಕಡೆಯಿಂದ ತಂದು ಅಲ್ಲಿಯ ಕೆರೆಗಳನ್ನು ತುಂಬುವುದಲ್ಲ. ಕೆರೆ ಸುತ್ತಮುತ್ತ ಸಾವಿರ ವರ್ಷಗಳಿಂದ ಇರುವ ಎಲ್ಲ ಜಲಮೂಲಗಳನ್ನು ಪುನಶ್ಚೇತನಗೊಳಿಸಿ, ಸರಿಯಾಗಿ ನಿರ್ವಹಣೆ ಮಾಡಬೇಕು. ರಾಜಕಾಲುವೆ ದುರಸ್ತಿ ಮತ್ತು ಒತ್ತುವರಿ ತೆರವುಗೊಳಿಸಬೇಕು. ಸ್ಥಳೀಯ ಜಲಮೂಲಗಳಿಂದ ಕರೆ, ಕಾಲುವೆ ತುಂಬಿಸಬೇಕು. ಈ ಮೂಲಕ ಅಂತರ್ಜಲವನ್ನು ಸುರಕ್ಷಿತವಾಗಿ ಇಟ್ಟುಕೊಳ್ಳಬೇಕು. ಇಷ್ಟು ಮಾಡಿದರೆ ಎಲ್ಲಿಂದಲೋ ನೀರು ತರುವ ಅಗತ್ಯ ಇಲ್ಲ. ಇದನ್ನೇ ಸ್ಥಳೀಯ ಜಲ ಸಂಪನ್ಮೂಲ ಭದ್ರತೆ ಎನ್ನುತ್ತಾರೆ. ಇವೆಲ್ಲವನ್ನೂ ಕರ್ನಾಟಕ ಜಲ ನಿಯಮ ಒಳಗೊಂಡಿದೆ.

(ಲೇಖಕರು: ಜಲ ಸಂರಕ್ಷಣಾ ಹೋರಾಟಗಾರ ಹಾಗೂ ಸಂಯೋಜಕ, ಕೊಅಲೇಷನ್‌ ಫಾರ್‌ ವಾಟರ್‌ ಸೆಕ್ಯೂರಿಟಿ)

ನಿರೂಪಣೆ: ಎಂ.ನಂಜುಂಡಸ್ವಾಮಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT