ಭಾನುವಾರ, 28 ಮೇ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುತ್ತಿಗೆದಾರರ ಬಾಕಿ ಬಿಲ್‌ ಪಾವತಿಗೆ ಅನುದಾನ ಕೊರತೆ: ₹800 ಕೋಟಿ ಸಾಲ ಪಡೆಯಲು ಸಿದ್ಧತೆ

Last Updated 28 ಜನವರಿ 2018, 19:32 IST
ಅಕ್ಷರ ಗಾತ್ರ

ಬೆಂಗಳೂರು: ವಿವಿಧ ಕಾಮಗಾರಿಗಳನ್ನು ಪೂರ್ಣಗೊಳಿಸಿರುವ ಗುತ್ತಿಗೆದಾರರಿಗೆ ಹಾಗೂ ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಗಮಕ್ಕೆ (ಕೆಆರ್‌ಐಡಿಎಲ್) ಬಾಕಿ ಬಿಲ್‌ ಪಾವತಿಸಲು ಬಿಬಿಎಂಪಿ ಅನುದಾನದ ಕೊರತೆ ಎದುರಿಸುತ್ತಿದೆ. ಈ ಸಲುವಾಗಿ ₹800 ಕೋಟಿ ಸಾಲ ಪಡೆಯಲು ಪಾಲಿಕೆ ಮುಂದಾಗಿದೆ.

ಈ ಕುರಿತ ಪ್ರಸ್ತಾವವನ್ನು ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿಯು ಕೌನ್ಸಿಲ್‌ ಸಭೆಯ ಅನುಮೋದನೆಗಾಗಿ ಸಲ್ಲಿಸಿದೆ. ಸೋಮವಾರ (ಇದೇ 29) ಕೌನ್ಸಿಲ್‌ ಸಭೆ ನಡೆಯಲಿದೆ. ಬಾಕಿ ಬಿಲ್‌ ಪಾವತಿಸಲು ಅನುದಾನ ನೀಡುವಂತೆ ಸರ್ಕಾರವನ್ನು ಕೋರಲು ಪಾಲಿಕೆ ನಿರ್ಧರಿಸಿದೆ. ಇದಕ್ಕೆ ಸರ್ಕಾರ ಒಪ್ಪದಿದ್ದರೆ, ಶೇ 4ರ ಬಡ್ಡಿದರದಲ್ಲಿ ಸರ್ಕಾರದಿಂದಲೇ ಸಾಲ ಪಡೆಯುವ ಅಥವಾ ಸ್ಪರ್ಧಾತ್ಮಕ ಬಡ್ಡಿ ದರದಲ್ಲಿ ರಾಷ್ಟ್ರೀಕೃತ ಬ್ಯಾಂಕ್‍ಗಳಿಂದ ಅಲ್ಪಾವಧಿ ಸಾಲ ಪಡೆಯುವ ಪ್ರಸ್ತಾವ ಬಿಬಿಎಂಪಿ ಮುಂದಿದೆ.

ಬಾಕಿ ಬಿಲ್‌ಗಳ ಮೊತ್ತವನ್ನು ಗುತ್ತಿಗೆದಾರರಿಗೆ ಸಕಾಲದಲ್ಲಿ ಪಾವತಿಸದೇ ಇರುವುದರಿಂದ ಹೊಸ ಕಾಮಗಾರಿಗಳ ಟೆಂಡರ್‌ ಪ್ರಕ್ರಿಯೆಯಲ್ಲಿ ಭಾಗವಹಿಸುತ್ತಿಲ್ಲ. ಇದರಿಂದ ಅಭಿವೃದ್ಧಿ ಕಾಮಗಾರಿಗಳು ಕುಂಠಿತಗೊಂಡಿವೆ.

ನಗರದಲ್ಲಿ ಆಗಸ್ಟ್‌ನಿಂದ ಅಕ್ಟೋಬರ್‌ವರೆಗೆ ಸುರಿದ ಭಾರಿ ಮಳೆಯಿಂದಾಗಿ ಅನೇಕ ಕಡೆ ಸಾರ್ವಜನಿಕ ಆಸ್ತಿಗಳು ಹಾಳಾಗಿದ್ದವು. ಅವುಗಳನ್ನೂ ಪಾಲಿಕೆ ದುರಸ್ತಿ ಮಾಡಬೇಕಿದೆ.

1,111 ಫಲಾನುಭವಿಗಳಿಗೆ ನಿವೇಶನ: ಪಾಲಿಕೆಯ ವ್ಯಾಪ್ತಿಯಲ್ಲಿನ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ನಿವೇಶನರಹಿತರಿಗೆ ನಿವೇಶನ ಹಂಚಿಕೆ ಮಾಡುವ ಪ್ರಸ್ತಾವವನ್ನು ಕೌನ್ಸಿಲ್‌ ಅನುಮೋದನೆಗಾಗಿ ಸಲ್ಲಿಸಲಾಗಿದೆ.

ಬೆಂಗಳೂರು ಉತ್ತರ ತಾಲ್ಲೂಕಿನ ದಾಸನಪುರ ಹೋಬಳಿಯ ಲಕ್ಷ್ಮಿಪುರ ಗ್ರಾಮದ ಸರ್ವೆ ನಂಬರ್‌ 24 ಮತ್ತು 25ರಲ್ಲಿ 22 ಎಕರೆ 5 ಗುಂಟೆ ಹಾಗೂ ದಕ್ಷಿಣ ತಾಲ್ಲೂಕಿನ ಕೆಂಗೇರಿ ಹೋಬಳಿಯ ಅಗರ ಗ್ರಾಮದ ಸರ್ವೆ ನಂಬರ್‌ 28ರಲ್ಲಿ 7 ಎಕರೆ 5 ಗುಂಟೆ ಜಮೀನನ್ನು ಕಂದಾಯ ಇಲಾಖೆ ಬಿಬಿಎಂಪಿಗೆ ಹಸ್ತಾಂತರಿಸಿದೆ.

ಈ ಜಾಗಗಳಲ್ಲಿ ಬಡಾವಣೆ ನಿರ್ಮಿಸಿ ಮೂಲಸೌಕರ್ಯ ಒದಗಿಸಲು ₹12.14 ಕೋಟಿ ಅನುದಾನವನ್ನು ಮಂಜೂರು ಮಾಡಲು ಉದ್ದೇಶಿಸಲಾಗಿದೆ. ಬಿಬಿಎಂಪಿ ವ್ಯಾಪ್ತಿಯ ಪಶ್ಚಿಮ, ದಕ್ಷಿಣ ಹಾಗೂ ರಾಜರಾಜೇಶ್ವರಿ ನಗರ ವಲಯಗಳ ಮಟ್ಟದಲ್ಲಿ 1,111 ಫಲಾನುಭವಿಗಳ ಪಟ್ಟಿಯನ್ನು ಸಿದ್ಧಪಡಿಸಿದ್ದು, ಅದಕ್ಕೆ ಅನುಮೋದನೆ ಪಡೆಯಬೇಕಿದೆ.

702 ಹುದ್ದೆಗಳ ನೇಮಕಾತಿಗೆ ಪ್ರಸ್ತಾವ

ಪಾಲಿಕೆಯಲ್ಲಿ ಖಾಲಿ ಇರುವ 702 ಹುದ್ದೆಗಳನ್ನು ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್‌ಸಿ) ಮೂಲಕ ನೇರ ನೇಮಕಾತಿ ಮಾಡುವ ಪ್ರಸ್ತಾವವನ್ನು ಕೌನ್ಸಿಲ್‌ ಅನುಮೋದನೆಗಾಗಿ ಸಲ್ಲಿಸಲಾಗಿದೆ.

ಭಾರತೀಯ ವಿಜ್ಞಾನ ಸಂಸ್ಥೆಯ ಮೂಲಕ ನೇಮಕಾತಿ ಪ್ರಕ್ರಿಯೆ ಕೈಗೊಳ್ಳಲು ಉದ್ದೇಶಿಸಲಾಗಿತ್ತು. ಆದರೆ, ಇದಕ್ಕೆ ಕಾನೂನಿನಲ್ಲಿ ಅವಕಾಶವಿಲ್ಲದ ಕಾರಣ ಕೆಪಿಎಸ್‌ಸಿ ಮೂಲಕ ನೇಮಕಾತಿ ಪ್ರಕ್ರಿಯೆ ನಡೆಸಲು ತೀರ್ಮಾನಿಸಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT