ಶನಿವಾರ, ಅಕ್ಟೋಬರ್ 16, 2021
29 °C
ವಿಶ್ವ ಗ್ರಾಮಾಂತರ ಅಂಚೆ ಚೀಟಿ ಪ್ರದರ್ಶನ

ದೇಶದ ಅಂಚೆ ಇತಿಹಾಸ ಅರಿಯಿರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ: ಆಧುನಿಕ ಅಂಚೆ ಸೇವೆ ಅಸ್ತಿತ್ವಕ್ಕೆ ಬರುವುದಕ್ಕೆ ಮೊದಲಿನಿಂದಲೂ ಭಾರತದಲ್ಲಿ ಅಂಚೆ ವ್ಯವಸ್ಥೆ ಇತ್ತು. ಮೊದಲಿಗೆ ಅಂಚೆ ರಾಜ್ಯ ಆಡಳಿತಕ್ಕೆ ಮಾತ್ರ ಉಪಯೋಗವಾಗುತ್ತಿತ್ತು ಎಂದು ಅಂಚೆ ಇಲಾಖೆ ಉಪನಿರ್ದೇಶಕ ಗಣಪತಿ ಭಟ್ ಅಭಿಪ್ರಾಯಪಟ್ಟರು.

ಪಟ್ಟಣದ ಸರ್ಕಾರಿ ಬಾಲಕಿಯರ ಪ್ರೌಢಶಾಲೆ ಆವರಣದಲ್ಲಿ ಭಾನುವಾರ ಗಾಂಧಿ ಜಯಂತಿ ಅಂಗವಾಗಿ ಆಯೋಜಿಸಿದ್ದ ಗಾಂಧಿಫೆಕ್ಸ್ ವಿಶ್ವ ಗ್ರಾಮಾಂತರ ಅಂಚೆ ಚೀಟಿ ಪ್ರದರ್ಶನದಲ್ಲಿ ಮಾತನಾಡಿದರು.

ಕಾಲಾಳು ಅಂಚೆ ವ್ಯವಸ್ಥೆ ಕಾಗದ ಪತ್ರಗಳ ಸಾಗಣೆ ಜತೆಗೆ ರಾಜ್ಯದ ಅಭಿವೃದ್ಧಿ ಮತ್ತು ಯುದ್ಧ ಪ್ರಕ್ರಿಯೆ ತಿಳಿಯುವ ಸಾಧನವೂ ಆಗಿತ್ತು. ಅಲ್ಲಾವುದ್ದೀನ್‌ ಖಿಲ್ಜಿ 1296ರ ಸುಮಾರಿಗೆ ಅಂಚೆ ಪದ್ಧತಿ ಜಾರಿಗೆ ತಂದರೆ ಅದನ್ನು ಶೇರ್‌ಷಾ ಇನ್ನಷ್ಟು ವಿಸ್ತರಿಸಿದ. ಕಾಲಾಳುಗಳೊಂದಿಗೆ ಅಶ್ವರೋಹಿ ಅಂಚೆ ಕೂಡ ಶುರುವಾಯಿತು. ಸಂಚಾರ ವ್ಯವಸ್ಥೆಯಲ್ಲಿ ಸುಧಾರಣೆ ಆಗುತ್ತಿದ್ದಂತೆ ಅಂಚೆ ಪದ್ಧತಿಯಲ್ಲೂ ಅನೇಕ ಮಾರ್ಪಾಡು ಆದವು. 1542ರೊಳಗೆ 2000 ಮೈಲುಗಳಲ್ಲಿ ಅಂಚೆ ಹಾದಿ ಇತ್ತು. ಆಗಲೇ ಅಂಚೆ ಹೊತ್ತೊಯ್ಯುವವರಿಗೆ ಹಾದಿಯುದ್ದಕ್ಕೂ ವಿಶ್ರಾಂತಿ ಗೃಹ ನಿರ್ಮಿಸುವ ಪರಿಪಾಠವೂ ಬಂತು ಎಂದು ವಿವರಿಸಿದರು.

ಕಾಲಾಳು, ಕುದುರೆ, ಒಂಟೆಗಳನ್ನು ಅಂಚೆ ಸಾಗಣೆಗೆ ಬಳಸಲಾಗುತ್ತಿತ್ತು. ಇಂತಹ ಇತಿಹಾಸವುಳ್ಳ ಅಂಚೆ ಹಾಗೂ ಚೀಟಿಗಳ ಸಂಗ್ರಹಣೆ ಪ್ರವೃತ್ತಿಯನ್ನಾಗಿ ಮಾಡಿಕೊಳ್ಳುವುದೆಂದರೆ ಸುಲಭದ ಮಾತಲ್ಲ. ಯುವಜನರು ಇಂತಹ ಕಲೆ ವೃದ್ಧಿಸಿಕೊಂಡು ಮುಂದಿನ ಪೀಳಿಗೆಗೆ ಇತಿಹಾಸ ಸಾರಬೇಕು ಎಂದರು.

ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ದಂಡಿಗಾನಹಳ್ಳಿ ನಾರಾಯಣಸ್ವಾಮಿ ಮಾತನಾಡಿ, ಕೇವಲ ಪತ್ರ ವ್ಯವಹಾರ, ತಂತಿ ಸಂದೇಶ ಕಾರ್ಯ ಸೇವೆಗಷ್ಟೇ ಮೀಸಲಾಗಿದ್ದ ಅಂಚೆ ಕಚೇರಿ ಕಾಲಕ್ಕೆ ತಕ್ಕಂತೆ ಬದಲಾಗಿದೆ. ಉಳಿತಾಯ ಯೋಜನೆ, ಬ್ಯಾಕಿಂಗ್‌ ವ್ಯವಸ್ಥೆ, ಇ-ಪೋಸ್ಟ್‌, ಇ-ಎಂಒ ಸೇರಿ ಅನೇಕ ಯೋಜನೆ ಸೇವೆಯಲ್ಲಿ ಸೇರ್ಪಡೆ ಮಾಡಿಕೊಂಡು ಮತ್ತೆ ತನ್ನ ಛಾಪು ಉಳಿಸಿಕೊಳ್ಳುತ್ತಾ ಸಾಗಿದೆ. ದೇಶದ ಕಲೆ, ಸಾಹಿತ್ಯ, ಸಂಗೀತ, ಸಂಸ್ಕೃತಿ, ಭಾಷೆ ಪ್ರತಿನಿಧಿಸುವ ಅಂಚೆ ಚೀಟಿ, ರಾಷ್ಟ್ರ ಲಾಂಛನ, ದೇಶದ ಸಮೃದ್ಧ ಸಸ್ಯ ಸಂಪತ್ತು, ನದಿ, ಕಡಲು, ಬಂದರು, ಪ್ರಾಣಿ, ಪಕ್ಷಿಗಳ ಚಿತ್ರಒಳಗೊಂಡಿರುವ ಅಂಚೆ ಚೀಟಿ, ಸ್ವಾತಂತ್ರ್ಯ ಹೋರಾಟಗಾರರು, ಭಾರತರತ್ನ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು, ಖ್ಯಾತ ವಿಜ್ಞಾನಿಗಳು, ಮಹಾಪುರುಷರು, ಮಹಾತ್ಮ ಗಾಂಧೀಜಿ ಕುರಿತು ಅಂಚೆ ಚೀಟಿ ಎಲ್ಲರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ ಎಂದರು.

ರಾಜು ಅವಳೇಕರ್, ಶಾಲಾಭಿವೃದ್ಧಿ ಸಮಿತಿ ಉಪಾಧ್ಯಕ್ಷೆ ಭಾರತಿಪ್ರಭುದೇವ್, ಸದಸ್ಯರಾದ ವಿ.ಎನ್.ಸೂರ್ಯಪ್ರಕಾಶ್, ವಿ.ವಿಶ್ವನಾಥ್, ಪುರಸಭಾ ಸದಸ್ಯ ಸಿ.ಎಂ.ರಾಮು, ಶಾಲಾ ಶಿಕ್ಷಕರು ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.