ಗುರುವಾರ , ಜುಲೈ 7, 2022
23 °C
ದೊಡ್ಡಬಳ್ಳಾಪುರ: ಕಾಂಗ್ರೆಸ್‌ ಪಕ್ಷದಿಂದ ಪ್ರತಿಭಟನೆ

ಈಶ್ವರಪ್ಪ ಬಂಧನಕ್ಕೆ ಒತ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದೊಡ್ಡಬಳ್ಳಾಪುರ: ಮಾಜಿ ಸಚಿವ ಕೆ.ಎಸ್‌. ಈಶ್ವರಪ್ಪ ಅವರ ಬಂಧನಕ್ಕೆ ಒತ್ತಾಯಿಸಿ ಹಾಗೂ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್ ಪಕ್ಷದಿಂದ ನಗರದ ನೆಲದಾಂಜನೇಯ ದೇವಾಲಯದಿಂದ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಯಿತು.

ನಗರದ ಪ್ರಮುಖ ರಸ್ತೆಗಳಲ್ಲಿ ನಡೆದ ಮೆರವಣಿಗೆಯುದ್ದಕ್ಕೂ ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ತಾಲ್ಲೂಕು ಕಚೇರಿ ವೃತ್ತದಲ್ಲಿ ತಹಶೀಲ್ದಾರ್ ಮೂಲಕ ಮನವಿ ಪತ್ರ ಸಲ್ಲಿಸಲಾಯಿತು.

ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್, ರಾಜ್ಯದಾದ್ಯಂತ ಬಿಜೆಪಿ ಸರ್ಕಾರದ ವಿರುದ್ಧ  ಪ್ರತಿಭಟನೆ ಮಾಡಲಾಗುತ್ತಿದೆ. ಬಿಜೆಪಿ ಸರ್ಕಾರದಲ್ಲಿ ಶೇ 40ರಷ್ಟು ಕಮಿಷನ್ ತಾಂಡವವಾಡುತ್ತಿದೆ ಎಂದು ಟೀಕಿಸಿದರು.

ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಮೋದಿಗೆ ಪತ್ರ ಬರೆದಾಗ ಕ್ರಮ ತೆಗೆದುಕೊಳ್ಳುತ್ತಾರೆ ಅಂದುಕೊಂಡಿದ್ದೆವು. ಆದರೆ, ಅದು ಸಹ ಸುಳ್ಳಾಯಿತು. ಬಿಜೆಪಿ ಕಾರ್ಯಕರ್ತ ಸಂತೋಷ್ ಪಾಟೀಲ ಕಮಿಷನ್ ದಂಧೆಯಿಂದ ನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇಷ್ಟಾದರೂ ಸರ್ಕಾರ ಈಶ್ವರಪ್ಪ ಅವರನ್ನು ಬಂಧಿಸಿಲ್ಲ ಎಂದು ಆರೋಪಿಸಿದರು.

ಈ ಸರ್ಕಾರ ಮಠಕ್ಕೆ ಹಣ ಕೊಟ್ಟಿದ್ದಕ್ಕೂ ಶೇ 30ರಷ್ಟು ಕಮಿಷನ್‌ ಪಡೆದುಕೊಂಡಿದೆ. ಕಮಿಷನ್ ಪಟ್ಟಿಯಲ್ಲಿ ಇನ್ನೂ ಕೆಲ ಸಚಿವರಿದ್ದಾರೆ. ಆ ಪಟ್ಟಿಯನ್ನು ಬಿಡುಗಡೆ ಮಾಡಲಾಗುವುದು ಎಂದರು.

ವಿಧಾನ ಪರಿಷತ್‌ ಸದಸ್ಯ ಎಸ್‌. ರವಿ, ಶಾಸಕ ಟಿ. ವೆಂಕಟರಮಣಯ್ಯ ಮಾತನಾಡಿ, ಬಿಜೆಪಿ ನೇತೃತ್ವದ ಸರ್ಕಾರದಲ್ಲಿ  ಕಮಿಷನ್‌ ವ್ಯವಹಾರ ನಡೆಯುತ್ತಿದೆ. ಕಮಿಷನ್‌ ಇಲ್ಲದೆ ಅಭಿವೃದ್ಧಿ ಕೆಲಸಗಳೇ ನಡೆಯುತ್ತಿಲ್ಲ ಎಂದು ದೂರಿದರು.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದಲ್ಲಿ ಗುತ್ತಿಗೆದಾರರು ಕಮಿಷನ್‌ ಕೊಡಲಾರದೆ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದು ರಾಜ್ಯದ ದುರಂತ ಸಂಗತಿಯಾಗಿದೆ. ಆತ್ಮಹತ್ಯೆ ಮಾಡಿಕೊಂಡ ಗುತ್ತಿಗೆದಾರ ಸಂತೋಷ್‌ ಪಾಟೀಲ ಖುದ್ದು ಪ್ರಧಾನಿ, ಸಚಿವಾಲಯಕ್ಕೆ ದೂರು ನೀಡಿದರೂ ನ್ಯಾಯ ದೊರೆತಿಲ್ಲ ಎಂದು ಆರೋಪಿಸಿದರು.

ಕೆಪಿಸಿಸಿ ಸದಸ್ಯ ಜಿ. ಲಕ್ಷ್ಮೀಪತಿ, ಬೆಂಗಳೂರು ಗ್ರಾಮಾಂತರ ಜಿಲ್ಲಾ ಅಧ್ಯಕ್ಷ ಮುನಿಶಾಮಣ್ಣ, ಕೆಪಿಸಿಸಿ ಉಪಾಧ್ಯಕ್ಷ ನಾರಾಯಣಸ್ವಾಮಿ, ಪ್ರಧಾನ ಕಾರ್ಯದರ್ಶಿ ಉದಯಶಂಕರ್, ಕಾಂಗ್ರೆಸ್‌ ನಗರ ಘಟಕದ ಅಧ್ಯಕ್ಷ ಕೆ.ಪಿ. ಜಗನ್ನಾಥ್‌, ಕಸಬಾ ಬ್ಲಾಕ್‌ ಅಧ್ಯಕ್ಷ ವೆಂಕಟೇಶ್‌, ಗ್ರಾಮಾಂತರ ಬ್ಲಾಕ್‌ ಅಧ್ಯಕ್ಷ ಎಂ. ಬೈರೇಗೌಡ, ಮುಖಂಡರಾದ ದೇವನಹಳ್ಳಿಯ ಶ್ರೀನಿವಾಸ್ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು