ಸೋಮವಾರ, ಜನವರಿ 20, 2020
27 °C
ಕೊಠಡಿ ಆಧುನೀಕರಣ, ಪ್ರಯೋಗಾಲಯ ಉಪಕರಣಕ್ಕಾಗಿ ಒಟ್ಟು ₹ 18 ಲಕ್ಷ ವೆಚ್ಚ

ಪಶುರೋಗ ನಿರ್ಣಯಕ್ಕೆ ಪ್ರಯೋಗಾಲಯ ಸಹಕಾರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದೇವನಹಳ್ಳಿ: ‘ಬಮೂಲ್ ಒಕ್ಕೂಟ ವ್ಯಾಪ್ತಿಯಲ್ಲಿ ಮೊದಲ ಬಾರಿಗೆ ಪಶುರೋಗ ನಿರ್ಣಯ ಪ್ರಯೋಗಾಲಯ ಅರಂಭವಾಗಿದ್ದು ಪಶುಪಾಲಕರಿಗೆ ಸಹಕಾರಿಯಾಗಲಿದೆ’ ಎಂದು ಬಮೂಲ್ ನಿರ್ದೇಶಕ ಬಿ.ಶ್ರೀನಿವಾಸ್ ಹೇಳಿದರು.

ಇಲ್ಲಿನ ಬಮೂಲ್ ಒಕ್ಕೂಟ ಉಪ ಶಿಬಿರ ಕಚೇರಿ ಕಟ್ಟಡದಲ್ಲಿ ನೂತನ ಪ್ರಯೋಗಾಲಯ ಉದ್ಘಾಟನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಬೆಂಗಳೂರು ನಗರ, ಗ್ರಾಮಾಂತರ ಜಿಲ್ಲೆ ಮತ್ತು ರಾಮನಗರ ಜಿಲ್ಲೆ ವ್ಯಾಪ್ತಿಯ 12 ತಾಲ್ಲೂಕು ವ್ಯಾಪ್ತಿಯಲ್ಲಿ ಮೊದಲ ಬಾರಿಗೆ ಪ್ರಯೋಗಾಲಯ ಆರಂಭಿಸಿದ್ದು, ಒಕ್ಕೂಟದ ವತಿಯಿಂದ ಕೊಠಡಿ ಆಧುನೀಕರಣ ಮತ್ತು ಪ್ರಯೋಗಾಲಯ ಉಪಕರಣಕ್ಕಾಗಿ ಒಟ್ಟು ₹ 18 ಲಕ್ಷ ವೆಚ್ಚ ಮಾಡಲಾಗಿದೆ’ ಎಂದು ಹೇಳಿದರು.

‘ದೇವನಹಳ್ಳಿ ತಾಲ್ಲೂಕಿನಲ್ಲಿ ಪ್ರಸ್ತುತ ಮಿಶ್ರತಳಿ ಹಾಲು ನೀಡುತ್ತಿರುವ ರಾಸುಗಳ ಸಂಖ್ಯೆ 31,437 ಇದೆ. ನಾಟಿ ಹಸುಗಳು 373, ಎಮ್ಮೆಗಳು 5,366 ಸೇರಿ ಒಟ್ಟು 37,176 ಇದ್ದು, ಮಿಶ್ರ ತಳಿ ರಾಸುಗಳಿಗೆ ಹೆಚ್ಚು ಮಾರಕ ರೋಗಗಳು ಬರುವ ಸಾಧ್ಯತೆ ಇರುವುದರಿಂದ ಪ್ರಯೋಗಾಲಯ ಅನಿವಾರ್ಯ’ ಎಂದರು.

‘ಪಶುಗಳಿಗೆ ಬರುವ ವಿವಿಧ ಮಾರಕ ರೋಗಗಳ ಪರಿಶೀಲನೆ ನಡೆಸಲು ರಕ್ತದ ಮಾದರಿ ಪರೀಕ್ಷೆಗೆ ಒಳಪಡಿಸಬೇಕು. ಕೆಲ ಸಂದರ್ಭದಲ್ಲಿ ಮೃತ ರಾಸುಗಳ ಪ್ರಮುಖ ಅಂಗಾಂಗಗಳನ್ನು ಕತ್ತರಿಸಿ ಬೆಂಗಳೂರಿನ ಹೆಬ್ಬಾಳ ಮತ್ತು ಚಿಂತಾಮಣಿಯಲ್ಲಿರುವ ಪ್ರಯೋಗಾಲಯಕ್ಕೆ ಕಳುಹಿಸಬೇಕಿತ್ತು. ರೈತರ ಸಂಕಷ್ಟ ತಪ್ಪಿಸಲು ಜಿಲ್ಲೆಯಲ್ಲಿ ಪ್ರಯೋಗಾಲಯದ ಅಗತ್ಯವಿತ್ತು. ಈಗ ಪಶುಪಾಲಕರ ಬೇಡಿಕೆ ಈಡೇರಿದೆ. ಬಮೂಲ್ ಒಕ್ಕೂಟ ವ್ಯಾಪ್ತಿಯಲ್ಲಿ ಇನ್ನು ಮೂರು ಕಡೆ ಪ್ರಯೋಗಾಲಯ ಆರಂಭಿಸುವ ಚಿಂತನೆ ಇದೆ’ ಎಂದು ಹೇಳಿದರು.

ಶಾಸಕ ನಿಸರ್ಗ ನಾರಾಯಣಸ್ವಾಮಿ ಮಾತನಾಡಿ, ‘ಪಶುಗಳಿಗೆ ಬರುವ ರೋಗಗಳನ್ನು ತ್ವರಿತವಾಗಿ ಪತ್ತೆ ಹಚ್ಚಿ, ಗುಣಪಡಿಸಲು ಪ್ರಯೋಗಾಲಯದ ಅವಶ್ಯಕತೆ ಇತ್ತು. ಪಶುಗಳು ಕೆಲ ಸಂದರ್ಭಗಳಲ್ಲಿ ಸಾವಿನ ಹಂತ ತಲುಪಿದರೂ ರೋಗ ಯಾವುದು ಎಂಬುದರ ಅರಿವು ಪಶುವೈದ್ಯರಿಗೆ ತಿಳಿಯದೆ ಅಂದಾಜಿನ ಮೇಲೆ ಚಿಕಿತ್ಸೆ ನೀಡುತ್ತಿದ್ದರು. ಪಶುಪಾಲಕರು ಅಂತಿಮ ಘಟ್ಟದವರೆಗೆ ಪಶುಗಳನ್ನು ರೋಗಮುಕ್ತವನ್ನಾಗಿಸಲು ಅಪಾರ ಹಣ ವ್ಯಯ ಮಾಡಬೇಕಿತ್ತು. ಈ ಪ್ರಯೋಗಾಲಯದಲ್ಲಿ ಉಚಿತ ಪರೀಕ್ಷೆ ನಡೆಸಿ ಚಿಕಿತ್ಸೆ ನೀಡುವುದರಿಂದ ಪಶುಪಾಲಕರಿಗೆ ಪ್ರಯೋಜನವಾಗಲಿದೆ’ ಎಂದು ಹೇಳಿದರು.

ಜಿಲ್ಲಾ ಪಂಚಾಯಿತಿ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷೆ ರಾಧಮ್ಮ ಮುನಿರಾಜು, ಸದಸ್ಯ ಲಕ್ಷ್ಮಿ ನಾರಾಯಣಪ್ಪ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಚೈತ್ರಾ, ಹಾಪ್‌ಕಾಮ್ ಉಪಾಧ್ಯಕ್ಷ ಬಿ.ಮುನೇಗೌಡ, ಜೆಡಿಎಸ್ ಕಾರ್ಯಾಧ್ಯಕ್ಷ ಆರ್ ಮುನೇಗೌಡ, ಜಿಲ್ಲಾ ಸಹಕಾರ ಒಕ್ಕೂಟ ಅಧ್ಯಕ್ಷ ಎ.ಸಿ.ನಾಗರಾಜ್, ನಿರ್ದೇಶಕ ಸಂಪಂಗಿಗೌಡ, ಡಿ.ಸಿ.ಸಿ ಬ್ಯಾಂಕ್ ನಿರ್ದೇಶಕ ಸೊಣ್ಣಪ್ಪ, ಹಾಲು ಒಕ್ಕೂಟ ಶಿಬಿರ ಕಚೇರಿ ಉಪ ವ್ಯವಸ್ಥಾಪಕ ಡಾ.ಶಿವಾಜಿ ನಾಯ್ಕ, ಗ್ರಾಮ ಪಂಚಾಯಿತಿ ಅಧ್ಯಕ್ಷ ದೇವರಾಜ್, ಜೆಡಿಎಸ್ ಹಿಂದುಳಿದ ವರ್ಗ ತಾಲ್ಲೂಕು ಘಟಕ ಅಧ್ಯಕ್ಷ ಲಕ್ಷ್ಮಣ್, ಕುಂದಾಣ ವಿ.ಎಸ್.ಎಸ್.ಎನ್ ಅಧ್ಯಕ್ಷ ನರಗನಹಳ್ಳಿ ಶ್ರೀನಿವಾಸ್, ಎಂ.ಪಿ.ಸಿ.ಎಸ್. ನೌಕರರ ಕ್ಷೇಮಾಭಿವೃದ್ಧಿ ಸಂಘ ತಾಲ್ಲೂಕು ಅಧ್ಯಕ್ಷ ಚನ್ನಕೇಶವ, ಪ್ರಧಾನ ಕಾರ್ಯದರ್ಶಿ ಬಿ.ಎಂ.ಲೋಕೇಶ್, ಬಮೂಲ್ ವಿಸ್ತೀರ್ಣಾಧಿಕಾರಿಗಳಾದ ಮುನಿರಾಜುಗೌಡ, ಮಂಜುನಾಥ್, ಮುಖಂಡರಾದ ಸುಬ್ಬೇಗೌಡ, ಚಂದ್ರೇಗೌಡ, ವಿಜಯ ಕುಮಾರ್ ಇದ್ದರು.

ಪ್ರತಿಕ್ರಿಯಿಸಿ (+)