ಶುಕ್ರವಾರ, ಡಿಸೆಂಬರ್ 13, 2019
17 °C
ಬನ್ನಿ ಕೊಯಿರಾ ಕಡೆಗೆ ಒಂದು ಹೆಜ್ಜೆ ಅಭಿಯಾನ

ಕೆರೆ ಅಭಿವೃದ್ಧಿಗೆ ಸ್ವಯಂ ಪ್ರೇರಿತರಾಗಿ ಸಹಕರಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದೇವನಹಳ್ಳಿ: ಮೂಲೆಗುಂಪಾಗಿರುವ ಸ್ಥಳೀಯ ಗ್ರಾಮಗಳ ಕೆರೆಗಳ ಅಭಿವೃದ್ಧಿಗೆ ಸಂಘಸಂಸ್ಥೆಗಳೊಂದಿಗೆ ಸ್ಥಳೀಯ ಗ್ರಾಮಸ್ಥರು ಸ್ವಯಂಪ್ರೇರಿತರಾಗಿ ಸಹಕರಿಸಬೇಕು ಎಂದು ಪರಿಸರವಾದಿ ಆನಂದ್ ಮಲ್ಲಿಗೆವಾಡ ಹೇಳಿದರು.

ಇಲ್ಲಿನ ಕೊಯಿರಾ ಕೆರೆಬಳಿ ಬೆಂಗಳೂರು ನಗರದ ಡಾಲರ್ಸ್ ಕಾಲೊನಿ ಶಾಖೆ ರೋಟರಿ ಸಂಸ್ಥೆ ಹಾಗೂ ರೋಟರಿ ಅರ್ಕಾವತಿ ಸಮುದಾಯ ಕಾವಲುಪಡೆ ಸಹಯೋಗದಲ್ಲಿ ಬನ್ನಿ ಕೊಯಿರಾ ಕಡೆಗೆ ಒಂದು ಹೆಜ್ಜೆ ನಮ್ಮೆಲ್ಲರ ಹೊಂದಾಣಿಕೆ ಅಭಿಯಾನದಲ್ಲಿ ಭಾಗವಹಿಸಿ ಮಾತನಾಡಿದರು.

ಪರಂಪರೆಯಲ್ಲಿ ಜೀವನದಿಯಾಗಿದ್ದ ಅರ್ಕಾವತಿ ನದಿಯ ಪಾತ್ರಗಳು ಕಣ್ಮರೆಯಾಗಿವೆ. ಬೆಂಗಳೂರಿನಿಂದ ಕೇವಲ 40 ಕಿ.ಮೀ.ವ್ಯಾಪ್ತಿಯಲ್ಲಿ ಬರುವ ಅರ್ಕಾವತಿ ನದಿ ಪಾತ್ರಗಳನ್ನು ಅಭಿವೃದ್ಧಿಪಡಿಸಿ ಹತ್ತಾರು ಕೆರೆಗಳಿಗೆ ಅಂತರ್ಜಲದ ಜೀವ ತುಂಬದಿದ್ದರೆ ಜೀವ ಸಂಕುಲ ನಾಶವಾಗಲಿದೆ ಎಂದರು.

ಪ್ರಸ್ತುತ ದೇವನಹಳ್ಳಿ ತಾಲ್ಲೂಕು ಬೆಂಗಳೂರು ನಗರದೊಂದಿಗೆ ಜೋಡಣೆಯಾಗಿ ಮುಂದುವರಿದು ಶರವೇಗದಲ್ಲಿ ಬೆಳೆಯುತ್ತಿದೆ. ಇನ್ನು ಹತ್ತು ವರ್ಷದಲ್ಲಿ ಬೆಂಗಳೂರು ಮಹಾ ನಗರ ಪಾಲಿಕೆವ್ಯಾಪ್ತಿಗೆ ಒಳಪಡುವ ಸಾಧ್ಯತೆ ಇದೆ. ಅಪಾರ ಪ್ರಮಾಣದ ಊಹೆಗೂ ನಿಲುಕದ ಜನಸಂಖ್ಯಾ ಬೆಳವಣಿಗೆಯಾಗಲಿದೆ. ಅವರೆಲ್ಲರಿಗೂ ಕುಡಿಯುವ ನೀರಿಗಾಗಿ ಜಲಮೂಲ ರಕ್ಷಣೆ ಮತ್ತು ಸಮತೋಲನ ಪರಿಸರ ಸಂರಕ್ಷಣೆ ಮಾಡಿ ಮೂಲ ಸೌಲಭ್ಯಕ್ಕೆ ಒತ್ತು ನೀಡಬೇಕಾಗಿದೆ ಎಂದು ಹೇಳಿದರು.

‘ಭವಿಷ್ಯದ ಸಾರ್ಥಕ ಸೇವೆಗೆ ಯುವಸಮುದಾಯ ಜೊತೆಗೂಡಬೇಕು. ಇಲ್ಲದಿದ್ದಲ್ಲಿ ಭವಿಷ್ಯದ ಪೀಳಿಗೆಗೆ ಉಳಿಗಾಲವಿಲ್ಲ’ ಎಂದು ಹೇಳಿದರು.

ರೋಟರಿ ಸಂಸ್ಥೆ ಆದ್ಯಕ್ಷ ಸಂಜಯ್ ಕೃಷ್ಣ ಮಾತನಾಡಿ, ಈ ಹಿಂದೆ ಕೆರೆಯನ್ನು ಒಂದು ಬಾರಿ ಪರಿಶೀಲನೆ ನಡೆಸಲಾಗಿತ್ತು. ಸ್ಥಳೀಯರು ಸೇರಿ ಕೆರೆಯಂಗಳದಲ್ಲಿನ ಐದಾರು ಎಕರೆಯಲ್ಲಿನ ಹೂಳು ಮಾತ್ರ ತೆಗೆದಿದ್ದಾರೆ. ಹಣದ ಕೊರತೆ ಮತ್ತು ಮುಂಗಾರು ಮಳೆಯಿಂದಾಗಿ ಕೆರೆಯಲ್ಲಿ ನೀರು ತುಂಬಿದ ಕಾರಣ ಕಾಮಗಾರಿ ಸ್ಥಗಿತಗೊಂಡಿತ್ತು. ಪ್ರಸ್ತುತ ರೋಟರಿ ಸಂಸ್ಥೆಯ ಪದಾಧಿಕಾರಿಗಳು ಮತ್ತು ಸದಸ್ಯರು ಕೆರೆ ಸಂಪೂರ್ಣವಾಗಿ ಮಾದರಿಯನ್ನಾಗಿ ಅಭಿವೃದ್ಧಿಪಡಿಸುವ ಸಂಕಲ್ಪ ಇಟ್ಟುಕೊಂಡಿದ್ದೇವೆ. ಅಂದಾಜು ₹ 50 ಲಕ್ಷ ಆಗಬಹುದು. ಹಣಕ್ಕಿಂತ ಅರ್ಕಾವತಿ ನದಿ ಪಾತ್ರದ ಮೊದಲ ಕೆರೆ ಅಭಿವೃದ್ಧಿ ಎಂಬುದು ನಮಗೂ ಖುಷಿಯ ವಿಚಾರ. ಕೆರೆ ಮತ್ತು ನದಿ ಪಾತ್ರದ ಮೂಲಗಳನ್ನು ಇಡಿ ಒಂದು ದಿನ ವೀಕ್ಷಣೆ ಮಾಡಿ ಹಂತಹಂತವಾಗಿ ಕೆರೆ ಅಭಿವೃದ್ಧಿಪಡಿಸುವ ವಿಶ್ವಾಸವಿದೆ ಎಂದು ಹೇಳಿದರು.

ಹಸಿರು ಸೇನೆ ಜಿಲ್ಲಾ ಘಟಕ ಅಧ್ಯಕ್ಷ ಕೆ.ಎಸ್.ಹರೀಶ್ ಮಾತನಾಡಿ, ‘ರಾಜ್ಯ ಸರ್ಕಾರದ ಪರಿಸರ, ಅರಣ್ಯ ಇಲಾಖೆ, ಪರಿಸರ ಇಲಾಖೆ, ಭೂ ಮತ್ತು ಗಣಿ ಇಲಾಖೆ ವ್ಯಾಪ್ತಿಯಲ್ಲಿನ ಯಾವುದೇ ನಿಯಮ ಅರ್ಕಾವತಿ ನದಿ ಪಾತ್ರದಲ್ಲಿ ಪಾಲನೆಯಾಗುತ್ತಿಲ್ಲ. ಇದರ ಬಗ್ಗೆ ಅನೇಕ ಹೋರಾಟ ನಡೆಸಿದರೂ ಸರ್ಕಾರ ಕಣ್ಣುಮುಚ್ಚಿ ಕುಳಿತಿದೆ. ನದಿಪಾತ್ರಗಳ ಸಂರಕ್ಷಣೆಯಾಗದಿದ್ದರೆ ಸ್ಥಳೀಯರ ಜೀವನ ಆಪೋಶನವಾಗಲಿದೆ ಎಂಬುದನ್ನು ಸರ್ಕಾರ ಅರ್ಥಮಾಡಿಕೊಳ್ಳಬೇಕು ಎಂದರು.

ರೋಟರಿ ಅರ್ಕಾವತಿ ಸಮುದಾಯ ಕಾವಲು ಪಡೆಯ ಅಧ್ಯಕ್ಷ ಚಂದ್ರಶೇಖರ್, ಮುಖಂಡ ಚಿಕ್ಕೆಗೌಡ ಮತ್ತು ರೋಟರಿ ಸಂಸ್ಥೆಯ ವಿವಿಧ ಘಟಕದ ಪದಾಧಿಕಾರಿಗಳು, ಗ್ರಾಮಸ್ಥರು ಇದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು