ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲ್ಲುಬಾಳು ಗ್ರಾ.ಪಂನಿಂದ ಕೆರೆಗಳಿಗೆ ಕಾಯಕಲ್ಪ

ಕೈಗಾರಿಕೆಗಳ ಸಹಭಾಗಿತ್ವ, ದಾನಿಗಳ ನೆರವಿನಿಂದ ಅಭಿವೃದ್ಧಿ
Last Updated 26 ಏಪ್ರಿಲ್ 2021, 5:07 IST
ಅಕ್ಷರ ಗಾತ್ರ

ಆನೇಕಲ್: ಕೆರೆಗಳು ಗ್ರಾಮದ ಅವಿಭಾಜ್ಯ ಭಾಗ. ಕೃಷಿ, ದನ ಕರುಗಳು, ಗ್ರಾಮೀಣ ಬದುಕಿನ ವಿವಿಧ ಚಟುವಟಿಕೆಗಳಿಗೆ ಕೆರೆಗಳೇ ಮೂಲ ಸೆಲೆಗಳು. ವಿವಿಧ ಕಾರಣಗಳಿಗಾಗಿ ಕೆರೆಗಳು ಅಸ್ತಿತ್ವ ಕಳೆದುಕೊಳ್ಳುತ್ತಿರುವ ಇತ್ತೀಚಿನ ದಿನಗಳಲ್ಲಿ ಆನೇಕಲ್‌ ತಾಲ್ಲೂಕಿನ ಕಲ್ಲುಬಾಳು ಗ್ರಾಮ ಪಂಚಾಯಿತಿಯು ತನ್ನ ವಿಶೇಷ ಕಾಳಜಿಯ ಫಲವಾಗಿ ತನ್ನ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆರು ಕೆರೆಗಳನ್ನು ಕಂಪನಿಗಳ ಸಹಭಾಗಿತ್ವದಿಂದ ಪುನರುಜ್ಜೀವನಗೊಳಿಸಿ ಕೆರೆಗಳಲ್ಲಿ ಹೊಸ ಕಳೆ ಮೂಡಿಸಿದೆ.

ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕಲ್ಲುಬಾಳು ಗ್ರಾಮ ಪಂಚಾಯಿತಿಯು ಕಳೆದ ಎರಡು ವರ್ಷಗಳಲ್ಲಿ ತನ್ನ ಅಭಿವೃದ್ಧಿಯ ಪ್ರಮುಖ ಭಾಗವಾಗಿ ಕೆರೆಗಳ ಪುನಶ್ಚೇತನಕ್ಕೆ ಒತ್ತು ನೀಡಿದ್ದರ ಫಲವಾಗಿ ತನ್ನ ವ್ಯಾಪ್ತಿಯ ಕೆರೆಗಳು ಜೀವಕಳೆಯಿಂದ ನಳನಳಿಸುವಂತಾಗಿದ್ದು ಎಲ್ಲಾ ಗ್ರಾಮ ಪಂಚಾಯಿತಿಗಳಿಗೂ ಮಾದರಿಯಾಗಿದೆ.

ಇತ್ತೀಚಿನ ದಿನಗಳಲ್ಲಿ ಕೆರೆಗಳು ತ್ಯಾಜ್ಯದಿಂದ, ಒಳಚರಂಡಿ ನೀರಿನಿಂದ ಕಲುಷಿತವಾಗುತ್ತಿವೆ. ರಾಜಕಾಲುವೆಗಳ ಒತ್ತುವರಿಯಿಂದ ಕೆರೆಯ ನೀರಿನ ಮೂಲಗಳು ಬತ್ತಿ ಹೋಗಿ ಕೆರೆ ತನ್ನ ಅಸ್ತಿತ್ವವನ್ನು ಕಳೆದುಕೊಂಡು ಜನರಿಂದ ದೂರವಾಗುತ್ತಿರುವುದೇ ಹೆಚ್ಚು. ಕಲ್ಲುಬಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆರೆಗಳು ಇದಕ್ಕಿಂತ ಭಿನ್ನವಾಗಿರಲಿಲ್ಲ. ಗಬ್ಬು ನಾರುತ್ತಿದ್ದವು. ಕೊಳಚೆ ನೀರಿನಿಂದ ತುಂಬಿದ್ದು ಕೆರೆಗಳ ನೀರು ಸಾರ್ವಜನಿಕ ಉಪಯೋಗಕ್ಕೆ ಬಾರದಂತಾಗಿತ್ತು. ಇದಕ್ಕೆ ಕಾಯಕಲ್ಪ ನೀಡುವ ನಿಟ್ಟಿನಲ್ಲಿ ಕಲ್ಲುಬಾಳು ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿದ್ದ ಬಸವರಾಜು ಮತ್ತು ಮೈಕೋ ನಾಗರಾಜು, ಪಿಳ್ಳಪ್ಪ, ರಮೇಶ್, ಮಂಜುನಾಥ್‌, ದಿನೇಶ್‌, ಅಶ್ವಥ್‌ನಾರಾಯಣ ಅವರ ತಂಡ ಮತ್ತು ಗ್ರಾಮ ಪಂಚಾಯಿತಿ ಸದಸ್ಯರು ಕೆರೆಗಳಿಗೆ ಕಾಯಕಲ್ಪ ಮಾಡುವ ಸಂಕಲ್ಪ ಮಾಡಿದರು. ಇವರ ನಿರ್ಧಾರಕ್ಕೆ ಬೆಂಬಲವಾಗಿ ನಿಂತವರು ಡಿವೈಎಸ್ಪಿಯಾಗಿದ್ದ ಎಸ್‌.ಕೆ.ಉಮೇಶ್‌ ಮತ್ತು ಸರ್ಕಲ್‌ ಇನ್‌ಸ್ಪೆಕ್ಟರ್‌ ಸಿದ್ದೇಗೌಡ ಅವರು ಕೈಜೋಡಿಸಿದರು. ಇವರೊಂದಿಗೆ ಹಲವು ಕೈಗಾರಿಕೆಗಳು ಜೊತೆಗೂಡಿದವು. ಇದರ ಫಲವಾಗಿ ಕೇವಲ ಒಂದೂವರೆ ವರ್ಷದಲ್ಲಿ ಪಾಳು ಬಿದ್ದ ಕೆರೆಗಳು ಹೊಸ ಕೆರೆಗಳಾಗಿ ರೂಪಿತವಾದವು.

2019ರ ಸೆಪ್ಟಂಬರ್‌ 10ರಂದು ಪ್ರಾರಂಭವಾದ ಕೆರೆಗಳ ಅಭಿವೃದ್ಧಿ ಕಾಮಗಾರಿಗಳು ಸುಮಾರು ಒಂದೂವರೆ ವರ್ಷದಲ್ಲಿ ಕೆರೆಯ ರೂಪವನ್ನು ಬದಲಾಯಿಸಿ ಪಾಳು ಬಿದ್ದಿದ್ದ ಕೆರೆಗಳು ಎಲ್ಲರನ್ನೂ ಕೈಬೀಸಿ ಕರೆಯುವಂತಾಗಿದೆ. ಕಲ್ಲುಬಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಲ್ಲುಬಾಳು, ಗಿಡ್ಡೇನಹಳ್ಳಿ, ಕೋನಸಂದ್ರ, ಬುಕ್ಕಸಾಗರ, ಬಾಲರ್‌ ಬಂಡೆ ಭದ್ರಯ್ಯನ ಕುಂಟೆಯ ಕೆರೆಗಳು ಸುಂದರ ಕೆರೆಗಳಾಗಿ ರೂಪುಗೊಂಡಿವೆ.

ಕೆರೆಗಳ ಪುನಶ್ಚೇತನಕ್ಕೆ ಗ್ರಾಮ ಪಂಚಾಯಿತಿಯು ₹30 ಲಕ್ಷ ವೆಚ್ಚ ಮಾಡಿದ್ದರೆ. ಟೊಯೊಟಾ ಕಿರ್ಲೋಸ್ಕರ್‌, ಡೆಲ್ಫಿ, ಸಿಪ್ಲಾ, ಲೈಫ್‌ ಸ್ಟೈಲ್‌ ಪುಷ್ಪಕ್‌ ಫ್ಯಾಬ್ರಿಕೇಟರ್ಸ್‌, ಬಿಲ್‌ಫೋರ್ಜ್‌, ಹಾರೋಹಳ್ಳಿ ಎಕೋ ಪೇಪರ್ಸ್‌ ಮತ್ತು ಜಿಗಣಿ ಕೈಗಾರಿಕ ಸಂಘ ಕೈಜೋಡಿಸಿದೆ. ಸುಮಾರು ₹2 ಕೋಟಿ ವೆಚ್ಚದಲ್ಲಿ ಕಲ್ಲುಬಾಳು ಮತ್ತು
ಕೋನಸಂದ್ರ ಕೆರೆಗಳನ್ನು ಅಭಿವೃದ್ಧಿಪಡಿಸಲಾಯಿತು.

ಪ್ರವೀಣ್‌ ಅವರು ಗಿಡ್ಡೇನಹಳ್ಳಿ ಕೆರೆ ಅಭಿವೃದ್ಧಿಪಡಿಸಿದರು. ಮ್ಯಾಂಗೋ ಮಿಸ್ಟ್ ಮಾಲೀಕ ವೇಣುಗೋಪಾಲರೆಡ್ಡಿ ಅವರು ಬುಕ್ಕಸಾಗರ ಕೆರೆಯನ್ನು ಅಭಿವೃದ್ಧಿಪಡಿಸಿದರು. ಪೊಲೀಸರು ದಾನಿಗಳ ನೆರವಿನಿಂದ ಹರಪನಹಳ್ಳಿ ಕೆರೆಯನ್ನು ಅಭಿವೃದ್ಧಿಪಡಿಸಲಾಯಿತು. ಆನೇಕಲ್‌ ಯೋಜನಾ ಪ್ರಾಧಿಕಾರದ ಮೂಲಕ ವಡೇರಮಂಚನಹಳ್ಳಿ ಕೆರೆ ಅಭಿವೃದ್ಧಿಯಾಗಿದೆ. ಈ ಮೂಲಕ ಕಲ್ಲುಬಾಳು ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಕೆರೆಗಳು ಅಭಿವೃದ್ಧಿಯಾಗುವಂತಾಗಿದೆ.

ಕಲ್ಲುಬಾಳು ಕೆರೆಯಂತೂ ವಾಯುವಿಹಾರಿಗಳ ಆಕರ್ಷಣೆಯಾಗಿದೆ. ಪ್ರತಿದಿನ ಬೆಳಗ್ಗೆ-ಸಂಜೆ ನೂರಾರು ಮಂದಿಯ ನೆಚ್ಚಿನ ತಾಣವಾಗಿದೆ. ಸುತ್ತಮುತ್ತಲಿನ ಗಿಡ ಮರಗಳು, ಪಕ್ಷಿಗಳು ಕೆರೆಯ ಸೌಂದರ್ಯವನ್ನು ಹೆಚ್ಚಿಸಿವೆ. ಸುಮಾರು 1.8 ಕಿ.ಮೀ. ಕೆರೆಯ ಸುತ್ತಳತೆಯಿದ್ದು ಇಲ್ಲಿ 5 ಸಾವಿರಕ್ಕೂ ಹೆಚ್ಚು ಗಿಡ ಮರಗಳು ಬೆಳೆದು ವಾತಾವರಣವನ್ನು ಸುಂದರಗೊಳಿಸಿವೆ. ನೇರಳೆ, ಹಿಪ್ಪೆ, ಬೇವು, ಪನ್ನೀರು, ಬಸುರಿ ಮರ, ಹೊಂಗೆ, ಅರಳಿ, ಕಣಿಗಲೆ, ಕಾಡು ಮಲ್ಲಿಗೆ, ಸಂಪಿಗೆ ಸೇರಿದಂತೆ ನೂರಾರು ಜಾತಿಯ ಗಿಡ ಮರಗಳು ಇಲ್ಲಿಯ ಪ್ರಕೃತಿ ಸೌಂದರ್ಯವನ್ನು ಹೆಚ್ಚಿಸಿವೆ.

ತೃಪ್ತಿ ತಂದಿದೆ

ಪುರಾತನ ಕೆರೆಯನ್ನು ಪುನಶ್ಚೇತನಗೊಳಿಸುವಾಗ ಕೆರೆಯ ಮಧ್ಯದಲ್ಲಿ ಕಲ್ಯಾಣಿಯೊಂದು ಇರುವುದು ಪತ್ತೆಯಾಯಿತು. ಕೆರೆಯ ಮಧ್ಯದಲ್ಲಿ ಮರವೊಂದಿದ್ದು ಅದನ್ನು ಸಹ ಉಳಿಸಲಾಗಿದೆ. ಕೆರೆಯೆಂದರೆ ಮೂಗು ಮುಚ್ಚಿಕೊಂಡು ಹೋಗುತ್ತಿದ್ದ ಜನ ಬದಲಾವಣೆಯ ನಂತರ ಕೆರೆಯತ್ತ ವಿಹಾರಕ್ಕಾಗಿ ಬರುತ್ತಿರುವುದು ತೃಪ್ತಿ ತಂದಿದೆ.

ಬಸವರಾಜು, ಕಲ್ಲುಬಾಳು ಗ್ರಾ. ಪಂ ಮಾಜಿ ಅಧ್ಯಕ್ಷ

***

ಎಸ್‌.ಟಿ.ಪಿ ಅಗತ್ಯ

ಕಲುಷಿತ ನೀರು ಬರದಂತೆ ತಡೆಯಲು ಸುಮಾರು ₹1.25 ಕೋಟಿ ವೆಚ್ಚದಲ್ಲಿ ಎಸ್‌.ಟಿ.ಪಿ ಪ್ಲ್ಯಾಂಟ್ ನಿರ್ಮಿಸುವ ಅವಶ್ಯಕತೆಯಿದೆ. ಈ ಮೂಲಕ ಶುದ್ಧ ನೀರು ಮಾತ್ರ ಕೆರೆಗೆ ಹರಿಯುವಂತೆ ಮಾಡಲಾಗುತ್ತಿದೆ. ತೂಗು ಸೇತುವೆ ಮತ್ತು ದೋಣಿ ವಿಹಾರ ಮಾಡುವ ನಿಟ್ಟಿನಲ್ಲಿ ಪ್ರಯತ್ನಗಳನ್ನು ಮಾಡಲಾಗುವುದು.

ಮೈಕೋ ನಾಗರಾಜು, ಗ್ರಾಮದ ಮುಖಂಡ

***

ಮಾದರಿ ಅಭಿವೃದ್ಧಿ

ಕಲ್ಲುಬಾಳು ಕೆರೆಯನ್ನು 2015-20ರ ಅವಧಿಯ ಗ್ರಾಮ ಪಂಚಾಯಿತಿಯು ಅಭಿವೃದ್ಧಿ ಪಡಿಸಿರುವುದು ಮಾದರಿಯಾಗಿದೆ. ಕೆರೆಯ ನಿರ್ವಹಣೆಯನ್ನು ರೊಟೆಷನ್‌ ಮಾದರಿಯಲ್ಲಿ ಜಿಗಣಿ ಕೈಗಾರಿಕೆಗಳ ಸಂಘದ ಕಂಪನಿಗಳು ನಿರ್ವಹಿಸುತ್ತಿವೆ. ಪಾರ್ಕ್‌ನ ಗಾರ್ಡ್‌ಗಳ ವೇತನ ಸೇರಿದಂತೆ ನಿರ್ವಹಣೆ ಮಾಡುತ್ತಿವೆ.

ರಮೇಶ್‌, ಗ್ರಾಮ ಪಂಚಾಯಿತಿ ಸದಸ್ಯ

***

ಗಿಡಮರಗಳು ಮಕ್ಕಳು

ಕೆರೆಯ ಸುತ್ತಮುತ್ತಲಿನ ಗಿಡ ಮರಗಳನ್ನು ಮಕ್ಕಳಂತೆ ನೋಡಿಕೊಳ್ಳಲಾಗುತ್ತಿದೆ.ನಾನು ಮತ್ತು ನನ್ನ ಪತ್ನಿ ಈ ಗಿಡಗಳು ಮತ್ತು ಕೆರೆಯ ಪ್ರದೇಶವನ್ನು ನೋಡಿಕೊಳ್ಳುತ್ತಿದ್ದೇವೆ. ಬೆಳಗ್ಗೆ 5-8.30 ಮತ್ತು ಸಂಜೆ 4 ರಿಂದ 6 ಗಂಟೆಗೆ ವಾಯು ವಿಹಾರಕ್ಕಾಗಿ ತೆರೆಯಲಾಗುತ್ತದೆ.

ನಾರಾಯಣಪ್ಪ, ಸಸ್ಯ ಪಾಲಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT