ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭೂಮಿ ಕಸಿಯಲು ಹುನ್ನಾರ: 23ನೇ ದಿನಕ್ಕೆ ಕಾಲಿಟ್ಟ ರೈತರ ಅನಿರ್ದಿಷ್ಟಾವಧಿ ಧರಣಿ

Last Updated 27 ಏಪ್ರಿಲ್ 2022, 4:36 IST
ಅಕ್ಷರ ಗಾತ್ರ

ವಿಜಯಪುರ:ಕೈಗಾರಿಕಾ ವಲಯ ಸ್ಥಾಪನೆಗೆ ವಿರೋಧ ವ್ಯಕ್ತಪಡಿಸಿ ಭೂಮಿ ಬಿಟ್ಟುಕೊಡಲು ಒಪ್ಪದ ರೈತರು ನಡೆಸುತ್ತಿರುವ ಅನಿರ್ದಿಷ್ಟಾವಧಿ ಧರಣಿ ಮಂಗಳವಾರ 23ನೇ ದಿನಕ್ಕೆ ಕಾಲಿಟ್ಟಿದೆ.

ಧರಣಿಯಲ್ಲಿ ಪಾಲ್ಗೊಂಡಿದ್ದ ಕರ್ನಾಟಕ ಪ್ರಾಂತ ರೈತ ಸಂಘದ ಅಧ್ಯಕ್ಷ ಜಿ.ವಿ. ಬೈಯಾರೆಡ್ಡಿ ರಾಜ್ಯ ಸರ್ಕಾರ ಹಾಗೂ ಕೆಐಎಡಿಬಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಶತಮಾನಗಳಿಂದ ಅನ್ನ ನೀಡುತ್ತಿರುವ ರೈತರು, ಸ್ವಾವಲಂಬಿಗಳಾಗಿ ಬದುಕುತ್ತಿದ್ದಾರೆ. ಹಲವಾರು ಮಂದಿಗೆ ಉದ್ಯೋಗ ಕೊಟ್ಟಿದ್ದಾರೆ. ಸರ್ಕಾರ ಸಹಕಾರ ನೀಡಲಿ, ನೀಡದಿರಲಿ; ನಿರಂತರವಾಗಿ ಮಳೆ, ಗಾಳಿ, ಬಿಸಿಲು, ಚಳಿ ಲೆಕ್ಕಿಸದೆ ದುಡಿಮೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಮನೆಯವರನ್ನು ಉಪವಾಸ ಇಟ್ಟಾದರೂ ದೇಶಕ್ಕೆ ಅನ್ನ ಕೊಡುತ್ತಿರುವ ತಪ್ಪಿಗಾಗಿ ಅವರನ್ನೇ ಭೂಮಿಯಿಂದ ಹೊರಗೆ ಹಾಕುವ ಹುನ್ನಾರ ನಡೆಯುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ವಿಶ್ವದಲ್ಲಿ ರೈತರನ್ನು ಎದುರು ಹಾಕಿಕೊಂಡಿರುವ ಯಾವ ಸರ್ಕಾರಗಳೂ ಉಳಿದಿಲ್ಲ. ಇದನ್ನು ಸರ್ಕಾರ ಮನಗಾಣಬೇಕು. ಸರ್ಕಾರ ಒಂದು ಹೆಜ್ಜೆಯನ್ನು ರೈತರ ಭೂಮಿ ಕಡೆಗೆ ಇಟ್ಟರೆ, ರೈತರು ಹತ್ತು ಹೆಜ್ಜೆ ವಿಧಾನಸೌಧದ ಕಡೆಗೆ ಇಡುತ್ತೇವೆ. ಅನ್ನದಾತರ ತಾಳ್ಮೆಯನ್ನು ಪರೀಕ್ಷೆ ಮಾಡಬೇಡಿ. ಮುಂದೆ ಆಗುವಂತಹ ಅನಾಹುತಗಳಿಗೆ ನೀವೇ ಹೊಣೆಗಾರರಾಗುತ್ತೀರಿ ಎಂದು ಎಚ್ಚರಿಕೆ ನೀಡಿದರು.

ಪ್ರಾಂತ ರೈತ ಸಂಘದ ಕಾರ್ಯದರ್ಶಿ ಚಂದ್ರತೇಜಸ್ವಿ ಮಾತನಾಡಿ, ರೈತರ ಭೂಮಿಯನ್ನು ಕೈಬಿಡದಿದ್ದರೆ ಈ ಹೋರಾಟ ಕೇವಲ ಹೋಬಳಿಮಟ್ಟಕ್ಕೆ ಸೀಮಿತವಾಗಿರುವುದಿಲ್ಲ. ಜಿಲ್ಲಾ ವ್ಯಾಪ್ತಿಗೆ ವಿಸ್ತರಿಸಲಿದೆ. ಕೃಷಿ ಭೂಮಿ ಬಿಟ್ಟು ಬರಡು ಭೂಮಿಯಲ್ಲಿ ಕಾರ್ಖಾನೆಗಳನ್ನು ಸ್ಥಾಪಿಸಲಿ ಎಂದು ಆಗ್ರಹಿಸಿದರು.

ಹೋರಾಟಗಾರ ಕಲ್ಯಾಣ್ ಕುಮಾರ್ ಬಾಬು ಮಾತನಾಡಿ, ಸರ್ಕಾರಗಳ ರೈತ ವಿರೋಧಿ ನೀತಿಗಳನ್ನು ನಾವು ಒಗ್ಗಟ್ಟಿನಿಂದ ಖಂಡಿಸದಿದ್ದರೆ ಮುಂದೊಂದು ದಿನ ಕಾರ್ಖಾನೆಗಳ ಬಳಿಗೆ ಕೆಲಸಕ್ಕಾಗಿ ಭಿಕ್ಷೆ ಬೇಡುವಂತಹ ಸ್ಥಿತಿ ಬರಲಿದೆ. ಭೂಮಿ ಉಳಿಸಿಕೊಳ್ಳುವುದು ನಮ್ಮೆಲ್ಲರ ಹಕ್ಕು. ನಾವು ಎದೆಗುಂದದೆ ಹೋರಾಟವನ್ನು ಗಟ್ಟಿಗೊಳಿಸೋಣ ಎಂದರು.

ನೀರಾವರಿ ಹೋರಾಟಗಾರ ಮಳ್ಳೂರು ಶಿವಣ್ಣ ಮಾತನಾಡಿ, ರೈತರ ಕೃಷಿಯನ್ನು ನಿರ್ಲಕ್ಷ್ಯ ಮಾಡಿ ಕಾರ್ಪೊರೇಟ್ ಕಂಪನಿಗಳಿಗೆ ರತ್ನಗಂಬಳಿ ಹಾಕಲಾಗುತ್ತಿದೆ. ಆ ಮೂಲಕ ದೇಶದ ಜನರನ್ನು ಮತ್ತೊಮ್ಮೆ ಗುಲಾಮಗಿರಿಗೆ ತಳ್ಳಲಾಗುತ್ತಿದೆ. ನಾವು ಹೋರಾಟದ ಮೂಲಕವೇ ನ್ಯಾಯ ಪಡೆಯುತ್ತೇವೆ ಎಂದು
ತಿಳಿಸಿದರು.

ಮುಖಂಡರಾದ ಮಾರೇಗೌಡ, ನಲ್ಲಪ್ಪನಹಳ್ಳಿ ನಂಜಪ್ಪ, ಅಶ್ವಥಪ್ಪ, ವೆಂಕಟರಮಣಪ್ಪ, ಪ್ರಮೋದ್, ಕೃಷ್ಣಪ್ಪ, ವೆಂಕಟೇಶ್, ಮುನಿಕೃಷ್ಣಪ್ಪ, ದೇವರಾಜ್, ಕರಗಪ್ಪ, ನಂಜೇಗೌಡ, ಮುಕುಂದ್, ಸೊಣ್ಣೆಗೌಡ, ರವಿಚಂದ್ರ, ಕಾರಹಳ್ಳಿ ಶ್ರೀನಿವಾಸ್, ಮೋಹನ್ ಕುಮಾರ್ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT