ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲಾ ಆಸ್ಪತ್ರೆಗೆ ಶೀಘ್ರ ಭೂಮಿಪೂಜೆ: ಸುಧಾಕರ್‌

ದೊಡ್ಡಬಳ್ಳಾಪುರ: ಕಾಯಂ ಪೌರ ಕಾರ್ಮಿಕರಿಗೆ ಮನೆ ನಿರ್ಮಾಣಕ್ಕೆ ಚಾಲನೆ
Last Updated 27 ಏಪ್ರಿಲ್ 2022, 4:31 IST
ಅಕ್ಷರ ಗಾತ್ರ

ದೊಡ್ಡಬಳ್ಳಾಪುರ: ‘ನಗರದಲ್ಲಿ ಜಿಲ್ಲಾ ಆಸ್ಪತ್ರೆ ನಿರ್ಮಾಣ ಮಾಡಲು ಶೀಘ್ರವೇ ಕಾಮಗಾರಿಗೆ ಮುಖ್ಯಮಂತ್ರಿ ಅವರಿಂದಶಂಕುಸ್ಥಾಪನೆ ನೆರವೇರಿಸಲಾಗುವುದು’ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್
ಹೇಳಿದರು.

ನಗರಸಭೆಯ ನೂತನ ಕಟ್ಟಡದ ಉದ್ಘಾಟನೆ ಹಾಗೂ ನಗರಸಭೆಯ ಕಾಯಂ ಪೌರ ಕಾರ್ಮಿಕರಿಗೆ ಜಿ+2 ಮಾದರಿ ಮನೆಗಳ ನಿರ್ಮಾಣ ಕಾಮಗಾರಿಗೆ ಮಂಗಳವಾರ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.

ಜಿಲ್ಲೆಯ ದೇವನಹಳ್ಳಿ, ಹೊಸಕೋಟೆ ಹಾಗೂ ನೆಲಮಂಗಲ ತಾಲ್ಲೂಕುಗಳಲ್ಲಿ ಖಾಸಗಿ ಆಸ್ಪತ್ರೆ ಹಾಗೂ ವೈದ್ಯಕೀಯ ಕಾಲೇಜುಗಳಿವೆ. ದೊಡ್ಡಬಳ್ಳಾಪುರ ತಾಲ್ಲೂಕಿನಲ್ಲಿ ಮೂರು ಹಂತದ ಚಿಕಿತ್ಸೆ ನೀಡುವಂತಹ ಆಸ್ಪತ್ರೆ ಇಲ್ಲದ ಕಾರಣ ಬೆಂಗಳೂರು ಗ್ರಾಮಾಂತರ ಜಿಲ್ಲಾ ಆಸ್ಪತ್ರೆಯನ್ನು ದೊಡ್ಡಬಳ್ಳಾಪುರದಲ್ಲಿ ನಿರ್ಮಿಸಲು ಉದ್ದೇಶಿಸಿ ಕಡತವನ್ನು ಆರ್ಥಿಕ ಇಲಾಖೆಯ ಮಂಜೂರಾತಿಗಾಗಿ ಕಳುಹಿಸಲಾಗಿದೆ. ಅನುಮೋದನೆ ದೊರೆತ ಕೂಡಲೇ ಟೆಂಡರ್ ಕರೆದು ಕಟ್ಟಡ ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಲಾಗುವುದು ಎಂದು
ಹೇಳಿದರು.

ವೇಗವಾಗಿ ಬೆಳೆಯುತ್ತಿರುವ ದೊಡ್ಡಬಳ್ಳಾಪುರ ನಗರ ಹಾಗೂ ತಾಲ್ಲೂಕಿನ ಜನರಿಗೆ ಕುಡಿಯುವ ನೀರಿನ ಸಮಸ್ಯೆ ನಿವಾರಿಸಲು ಜಕ್ಕಲಮಡುಗು ನೀರಾವರಿ ಯೋಜನೆಯನ್ನು ಅನುಷ್ಠಾನಗೊಳಿಸಲಾಗುವುದು. ಈ ನಿಟ್ಟಿನಲ್ಲಿ ಚಿಕ್ಕಬಳ್ಳಾಪುರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಸಚಿವರು, ಜಿಲ್ಲಾಧಿಕಾರಿಗಳನ್ನು ಒಳಗೊಂಡ ಸಮಿತಿಯು ಕಾರ್ಯ ನಿವರ್ಹಿಸುತ್ತಿದೆ ಎಂದರು.

ಸರ್ಕಾರವು ಅಭಿವೃದ್ಧಿ ಕಡೆಗೆ ಒತ್ತು ನೀಡುತ್ತಿದೆ. ₹ 6.77 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿರುವ ದೊಡ್ಡಬಳ್ಳಾಪುರ ನಗರಸಭೆ ಕಟ್ಟಡವು ಸುಸಜ್ಜಿತವಾಗಿ ನಿರ್ಮಾಣವಾಗಿದೆ. ನಗರಸಭೆಯು ಸ್ವಚ್ಛತೆಗೆ ಆದ್ಯತೆ ನೀಡಬೇಕು. ವೈಜ್ಞಾನಿಕವಾಗಿ ತ್ಯಾಜ್ಯ ವಿಂಗಡಣೆ ಹಾಗೂ ಪ್ರತಿ ಮನೆಯಲ್ಲೂ ಕಸ ವಿಂಗಡಣೆಗೆ ಮಾಡುವಂತೆ ಅರಿವು ಕಾರ್ಯಕ್ರಮ ಏರ್ಪಡಿಸಬೇಕು. ನಗರದ ಸ್ವಚ್ಛತೆಯಲ್ಲಿ ಜನರ ಸಹಭಾಗಿತ್ವ ಅತಿಮುಖ್ಯ ಎಂದು ತಿಳಿಸಿದರು.

ನಗರದ ನೈರ್ಮಲ್ಯ ಕಾಪಾಡುವಿಕೆಯಲ್ಲಿ ಪೌರಕಾರ್ಮಿಕರ ಸೇವೆ ಹೆಚ್ಚಿದೆ. ಇವರ ಸೇವೆ ಪರಿಗಣಿಸಿ ದೊಡ್ಡಬಳ್ಳಾಪುರ ನಗರಸಭೆಯ 34 ಕಾಯಂ ಪೌರ ಕಾರ್ಮಿಕರ ಕುಟುಂಬಗಳಿಗೆ ₹3.37 ಕೋಟಿ ವೆಚ್ಚದ ಮನೆ ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿರುವುದು ಪವಿತ್ರ ಕೆಲಸವಾಗಿದೆ ಎಂದರು.

ಪೌರಾಡಳಿತ, ಸಣ್ಣ ಕೈಗಾರಿಕೆ, ಸಾರ್ವಜನಿಕ ವಲಯ ಉದ್ಯಮಗಳ ಸಚಿವ ಎಂ.ಟಿ.ಬಿ. ನಾಗರಾಜ್‌ ಮಾತನಾಡಿ, ಅಂತರರಾಷ್ಟ್ರೀಯ ಮಟ್ಟದ ಕೈಗಾರಿಕೆಗಳು, ಕಾರ್ಖಾನೆಗಳು, ಖಾಸಗಿ ಶಾಲಾ-ಕಾಲೇಜುಗಳು, ಖಾಸಗಿ ಬಡಾವಣೆಗಳು ನಿರ್ಮಾಣವಾಗುತ್ತಿರುವ ದೊಡ್ಡಬಳ್ಳಾಪುರ ನಗರಸಭೆ ವ್ಯಾಪ್ತಿಯ ಅಭಿವೃದ್ಧಿ ಕಾಮಗಾರಿಗಳಿಗೆ ಸಾಕಷ್ಟು ಅನುದಾನ ನೀಡಲಾಗಿದೆ. ಅದನ್ನು ಸಮರ್ಪಕವಾಗಿ ಬಳಸಬೇಕಿದೆ ಎಂದು ನಿರ್ದೇಶನ ನೀಡಿದರು.

ಕಾರ್ಯಕ್ರಮದಲ್ಲಿ ನಗರಸಭೆ ವ್ಯಾಪ್ತಿಯಲ್ಲಿ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸಿದ ಐವರು ಪೌರ ಕಾರ್ಮಿಕರನ್ನು ಸಚಿವರು
ಸನ್ಮಾನಿಸಿದರು.

ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷೆ ಎಸ್‌. ಸುಧಾರಾಣಿ, ಉಪಾಧ್ಯಕ್ಷೆ ಫರ್ಹಾನಾ ತಾಜ್, ಜಿಲ್ಲಾಧಿಕಾರಿ ಕೆ. ಶ್ರೀನಿವಾಸ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಕೆ. ರೇವಣಪ್ಪ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೋನ ವಂಶಿಕೃಷ್ಣ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ಶಾಲಿನಿ, ನಗರಸಭೆ ಪೌರಾಯುಕ್ತ ಕೆ.ಜಿ. ಶಿವಶಂಕರ್‌ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT