ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರ ವಿಶೇಷ ಪ್ಯಾಕೇಜ್‌ ಘೋಷಿಸಲಿ

ಆನೇಕಲ್: ಖಾಸಗಿ ಶಾಲಾ – ಕಾಲೇಜು ಶಿಕ್ಷಕರು, ಉಪನ್ಯಾಸಕರ ಆಗ್ರಹ
Last Updated 20 ಆಗಸ್ಟ್ 2020, 6:06 IST
ಅಕ್ಷರ ಗಾತ್ರ

ಆನೇಕಲ್: ಕೊರೊನಾ ಸಂಕಷ್ಟದ ಹಿನ್ನೆಲೆಯಲ್ಲಿ ಖಾಸಗಿ ಅನುದಾನ ರಹಿತ ಶಾಲಾ-ಕಾಲೇಜುಗಳು ಶಿಕ್ಷಕರು ಮತ್ತು ಉಪನ್ಯಾಸಕರಿಗೆ ರಾಜ್ಯ ಸರ್ಕಾರ ವಿಶೇಷ ಪ್ಯಾಕೇಜ್‌ ಘೋಷಿಸಬೇಕು ಹಾಗೂ ಆರೋಗ್ಯ ವಿಮೆ ನೀಡಬೇಕು ಎಂದು ಶಿಕ್ಷಕರ ಮತ್ತು ಆಡಳಿತ ಮಂಡಳಿ ಫೋರಂ ಅಧ್ಯಕ್ಷ ಎ.ಪಿ.ರಂಗನಾಥ್‌ ಒತ್ತಾಯಿಸಿದರು.

ಪಟ್ಟಣದಲ್ಲಿ ಫೋರಂನ ವತಿಯಿಂದ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು,ಸರ್ಕಾರ ವಿವಿಧ ವರ್ಗಗಳಿಗೆ ಆರ್ಥಿಕ ನೆರವಿನ ಪ್ಯಾಕೇಜ್‌ ಘೋಷಿಸಿದೆ. ಆದರೆ, ಲಕ್ಷಾಂತರ ಮಂದಿ ಶಿಕ್ಷಕರು ಮತ್ತು ಉಪನ್ಯಾಸಕರು ಅನುದಾನ ರಹಿತ ಶಾಲಾ ಕಾಲೇಜು ಗಳಲ್ಲಿ ಕೆಲಸ ಮಾಡುತ್ತಿದ್ದು, ಸಂಬಳವಿ ಲ್ಲದೇ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅವರಿಗೆ ನೆರವಾಗಬೇಕು ಎಂದು ಆಗ್ರಹಿಸಿದರು.

ಕೆಲವು ಆಡಳಿತ ಮಂಡಳಿಗಳು ಶೇ.50ರಷ್ಟು ವೇತನ ನೀಡಿವೆ. ಆದರೆ, ಬಹುತೇಕ ಆಡಳಿತ ಮಂಡಳಿಗಳು ವೇತನ ನೀಡಿಲ್ಲ. ಊಟಕ್ಕೂ ಪರದಾಡಬೇಕಾದ ಪರಿಸ್ಥಿತಿಯಿದೆ. ಕಳೆದ ಮಾರ್ಚ್‌ ತಿಂಗಳಿನಿಂದ ಶಾಲಾ-ಕಾಲೇಜುಗಳು ಮುಚ್ಚಿವೆ. ಸುಮಾರು 7 ತಿಂಗಳುಗಳಿಂದ ವೇತನವಿಲ್ಲ ಎಂದು ಅಳಲು ತೋಡಿಕೊಂಡರು.

ಶಿಕ್ಷಕರು ಮತ್ತು ಉಪನ್ಯಾಸಕರನ್ನು ಮೌಲ್ಯಮಾಪನ, ಸಮೀಕ್ಷೆ, ಚುನಾವಣೆ ಮತ್ತಿತರ ಎಲ್ಲಾ ಕೆಲಸಗಳಿಗೂ ಬಳಸಲಾಗಿದೆ. ಆದರೆ ಶಿಕ್ಷಕರಿಗೆ ಸೌಲಭ್ಯ ನೀಡಲು ಮಾತ್ರ ಸರ್ಕಾರ ಮೀನಮೇಷ ಎಣಿಸುತ್ತಿದೆ. ಖಾಸಗಿ ಶಾಲೆಗಳಿಗೆ ನೀಡಬೇಕಾದ ₹ 1,025 ಕೋಟಿ ಆರ್‌ಟಿಇ ಹಣ ಇದುವರೆಗೆ ಬಿಡುಗಡೆಯಾಗಿಲ್ಲ. ಈ ಹಣ ಬಿಡುಗಡೆಯಾದರೆ ವೇತನ ನೀಡಲು ಅನುಕೂಲವಾಗುತ್ತದೆ ಎಂದು ಹೇಳಿದರು.

‘ಸುಮಾರು 22 ಸಾವಿರ ಮಂದಿ ಉಪನ್ಯಾಸಕರು ಸಂಕಷ್ಟದಲ್ಲಿದ್ದಾರೆ. ಶಿಕ್ಷಣ ಇಲಾಖೆಯ ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ನಿಧಿ ಮತ್ತು ಶಿಕ್ಷಕರ ಕ್ಷೇಮಾಭಿವೃದ್ಧಿ ನಿಧಿಯಲ್ಲಿನ ಹಣವನ್ನು ಬಳಸಿಕೊಂಡು ಪ್ಯಾಕೇಜ್‌ ನೀಡಲು ಸಾಧ್ಯವಿದೆ’ ಎಂದರು.

ಕಾರ್ಯಾಧ್ಯಕ್ಷ ಎಲ್‌.ಎನ್‌.ಮುಕುಂದರಾಜು, ಕಾರ್ಯದರ್ಶಿ ಸೂಡಿ ಸುರೇಶ್‌, ಜಂಟಿ ಕಾರ್ಯದರ್ಶಿ ಟಿ.ಕೆ.ನರಸೇಗೌಡ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT