ಸಾಲ ಮಾಡಿ ಬೆಳೆದಿರುವ ಹೂವಿಗೆ ಇಲ್ಲ ಬೆಲೆ: ಹೂವಿನಂತೆ ಬಾಡಿದ ರೈತರ ಬದುಕು

7

ಸಾಲ ಮಾಡಿ ಬೆಳೆದಿರುವ ಹೂವಿಗೆ ಇಲ್ಲ ಬೆಲೆ: ಹೂವಿನಂತೆ ಬಾಡಿದ ರೈತರ ಬದುಕು

Published:
Updated:
Deccan Herald

ವಿಜಯಪುರ: ತರಕಾರಿ ಬೆಳೆದು ನಷ್ಟಕ್ಕೆ ಒಳಗಾದ ರೈತರು ಹೂವಿನ ಬೆಳೆಯಲ್ಲಾದರೂ ಒಂದಿಷ್ಟು ಕಾಸು ಸಂಪಾದನೆ ಮಾಡುವ ಉಮೇದಿನಿಂದ ಲಕ್ಷಾಂತರ ರೂಪಾಯಿ ಸಾಲ ಮಾಡಿ ಬೆಳೆದಿರುವ ಹೂವಿಗೆ ಬೆಲೆ ಸಿಗದ ಕಾರಣ ರೈತರ ಬದುಕು ಹೂವಿನಂತೆ ಬಾಡಿದಂತಾಗಿದೆ ಎಂದು ರೈತ ಅಶೋಕ್‌ ಬೇಸರ ವ್ಯಕ್ತಪಡಿಸಿದರು.

ಈ ಭಾಗದಲ್ಲಿ 1800 ಅಡಿ ಕೊರೆದರೂ ಒಂದಿಂಚು ನೀರು ಸಿಗುತ್ತಿಲ್ಲ.  ಹಿರಿಯರು ಕೃಷಿ ನಂಬಿ ಜೀವನ ಮಾಡಿದವರು. ಕೃಷಿ ಮುಂದುವರೆಸಿಕೊಂಡು ಹೋಗುವ ಹೊಣೆಗಾರಿಕೆ ಒಂದಡೆಯಾದರೆ, ಮತ್ತೊಂದು ಕಡೆ ಎಷ್ಟೇ ಸಂಕಷ್ಟ ಎದುರಾದರೂ ಸ್ವಾವಲಂಬಿಗಳಾಗಿ ಬದುಕು ಕಟ್ಟಿಕೊಳ್ಳಬೇಕು ಎನ್ನುವ ಹಂಬಲವೂ ರೈತರಿಗೆ ಎದುರಾಗಿದೆ.

‘ಟೊಮೊಟೊ ಸೇರಿದಂತೆ ಅನೇಕ ರೀತಿಯ ವಾಣಿಜ್ಯ ಬೆಳೆ ಬೆಳೆದರೂ ಬೆಲೆ ಸಿಗುತ್ತಿಲ್ಲ. ಸಾಲ ಮಾಡಿ ಸಾಕಾಗಿದೆ. ಒಂದು ಕೊಳವೆ ಬಾವಿ ಕೊರೆಸಲು ₹‌8 ಲಕ್ಷ ಹಣ ಬೇಕಾಗುತ್ತದೆ. ಒಂದು ಕೆ.ಜಿ.ಚೆಂಡು ಹೂ ₹10 ರೂಪಾಯಿಗೆ ಬೆಳೆಗಾರರಿಂದ ಖರೀದಿ ಮಾಡಲಾಗುತ್ತದೆ. ಮಾರುಕಟ್ಟೆಯಲ್ಲಿ ₹30 ರೂಪಾಯಿವರೆಗೂ ಮಾರಾಟ ಮಾಡುವ ವ್ಯಾಪಾರಿಗಳು, ಮಧ್ಯವರ್ತಿಗಳು ಒಳ್ಳೆಯ ಲಾಭ ಮಾಡಿಕೊಳ್ಳುತ್ತಾರೆಯೇ ಹೊರತು ರೈತರಿಗೆ ಲಾಭ ಇಲ್ಲ’ ಎಂದು ಅಶೋಕ್‌ ನೊಂದು ನುಡಿದರು.

ರೈತ ಮುಖಂಡ ಮುನಿಆಂಜಿನಪ್ಪ ಮಾತನಾಡಿ, ‘ಸರ್ಕಾರ ಎಷ್ಟೇ ಯೋಜನೆಗಳನ್ನು ತಂದರೂ ಸಮರ್ಪಕವಾಗಿ ನೀರಿನ ಸೌಲಭ್ಯ ಕಲ್ಪಿಸಿಕೊಡದಿದ್ದರೆ ಯಾವುದೇ ಪ್ರಯೋಜವಾಗುವುದಿಲ್ಲ. ಕೆರೆಗಳಲ್ಲಿ ಅಂತರ್ಜಲ ಅಭಿವೃದ್ಧಿ ಮಾಡಲು ನೀರು ಹರಿಸುವ ಬದ್ಧತೆ ತೋರಿಸದಿದ್ದರೆ ಬಯಲುಸೀಮೆ ಪ್ರದೇಶಗಳಲ್ಲಿ ರೈತರಿಗೆ ಉಳಿಗಾಲವಿಲ್ಲ’ ಎಂದು ಆತಂಕ ವ್ಯಕ್ತಪಡಿಸಿದರು.

ಸಾಲಮನ್ನಾ ಮಾಡಿದ ಮಾತ್ರಕ್ಕೆ ಎಲ್ಲ ರೈತರ ಬದುಕು ಹಸನಾಗುವುದಿಲ್ಲ. ರೈತರು ಬೆಳೆದಂತಹ ಎಲ್ಲಾ ಬೆಳೆಗಳಿಗೂ ವೈಜ್ಞಾನಿಕ ಬೆಲೆ ನಿಗದಿ ಪಡಿಸಿದಾಗ ಮಾತ್ರವೇ ನ್ಯಾಯ ಸಿಗಲು ಸಾಧ್ಯ. ಈ ನಿಟ್ಟಿನಲ್ಲಿ ಸ್ಥಳೀಯವಾಗಿ ಜನಪ್ರತಿನಿಧಿಗಳು ಬದ್ಧತೆ ತೋರಬೇಕು. ಸರ್ಕಾರ ಗಂಭೀರವಾಗಿ ಆಲೋಚನೆ ಮಾಡಬೇಕು ಎಂದರು.

ಹೂವಿನ ವ್ಯಾಪಾರಿ ಅಶ್ವತ್ಥಪ್ಪ ಮಾತನಾಡಿ, ‘ಈಗ ಸಾಕಷ್ಟು ಹೂವಿನ ಪೂರೈಕೆ ಇದ್ದು, ಖರೀದಿಸುವವರು ಇಲ್ಲವಾಗಿದ್ದಾರೆ. ಹೂವು ಒಂದೆರಡು ದಿನಗಳು ಉಳಿಸಿಕೊಳ್ಳುವಂತೆ ಸರಕು ಅಲ್ಲ. ಇದರಿಂದ ನಮಗೂ ನಷ್ಟವುಂಟಾಗುತ್ತಿದೆ’ ಎಂದು ವ್ಯಾಪಾರದ ನೆಲೆಯಲ್ಲಿ ಅವರು ವಿವರಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !