ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿ ತಂತ್ರ: ‘ಪೇಜ್‌ ಪ್ರಮುಖ್‌’

ಬಿಜೆಪಿ ತಂತ್ರ: ಮತದಾರರ ಪಟ್ಟಿಯ ಪ್ರತಿ ಪುಟಕ್ಕೂ ಒಬ್ಬ ಕಾರ್ಯಕರ್ತನ ನಿಯೋಜನೆ
Last Updated 24 ಫೆಬ್ರುವರಿ 2018, 20:15 IST
ಅಕ್ಷರ ಗಾತ್ರ

ಬಳ್ಳಾರಿ: ಪ್ರತಿಯೊಬ್ಬ ಮತದಾರರನ್ನು ಸೆಳೆಯಲು ತಂತ್ರ ರೂಪಿಸಿರುವ ರಾಜ್ಯ ಬಿಜೆಪಿ, ಮತದಾರರ ಪಟ್ಟಿಯ ಪ್ರತಿ ಪುಟಕ್ಕೆ ಒಬ್ಬ ಕಾರ್ಯಕರ್ತರನ್ನು ‘ಪೇಜ್‌ ಪ್ರಮುಖ್‌’ ಆಗಿ ನಿಯೋಜಿಸಲು ನಿರ್ಧರಿಸಿದೆ.

ನಿಯೋಜಿತರು ಮಾಡಬೇಕಾಗಿದ್ದು ಇಷ್ಟೆ; ಅವರಿಗೆ ನಿಗದಿಯಾದ ಪುಟದಲ್ಲಿರುವ ಎಲ್ಲ ಮತದಾರರನ್ನು ಸಂಪರ್ಕಿಸಬೇಕು. ಬಿಜೆಪಿಗೇ ಮತ ನೀಡುವಂತೆ ಓಲೈಸಬೇಕು. ಆಯಾ ವಾರ್ಡ್ ವ್ಯಾಪ್ತಿಯಲ್ಲಿರುವ ಎಲ್ಲ ಕಾರ್ಯಕರ್ತರನ್ನೂ ಈ ಕೆಲಸಕ್ಕೆ ಪಕ್ಷ ಬಳಸಿಕೊಳ್ಳಲಿದೆ.

ತಲಾ 13 ಮಂದಿಯಂತೆ ವಾರ್ಡ್‌ವಾರು ಸಮಿತಿಗಳನ್ನು ರಚಿಸಿರುವ ಪಕ್ಷ, ಅದರಲ್ಲೇ ಪರಿಣಾಮಕಾರಿಯಾಗಿ ಕೆಲಸ ಮಾಡುವ ಒಂಬತ್ತು ಮಂದಿಯನ್ನು ಆಯ್ಕೆ ಮಾಡಿ ನವಶಕ್ತಿ ಸಮಾವೇಶವನ್ನೂ ಆಯೋಜಿಸುತ್ತಿದೆ. ಅದರೊಂದಿಗೆ ಪ್ರತಿ ವಾರ್ಡ್‌ನಲ್ಲೂ ‘ಮಹಿಳಾ ಪ್ರಮುಖ್‌’ ಎಂಬ ಹೆಸರಿನಲ್ಲಿ ಮಹಿಳಾ ಕಾರ್ಯಕರ್ತರನ್ನು ಗುರುತಿಸಿ ಅವರ ಮೂಲಕ ಮಹಿಳೆಯರ ಮತ ಸೆಳೆಯಲು ಮುಂದಾಗಿದೆ.

ಈ ಬಗ್ಗೆ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದ ಬಳ್ಳಾರಿ ನಗರ ಕ್ಷೇತ್ರದ ಬಿಜೆಪಿ ಟಿಕೆಟ್‌ ಆಕಾಂಕ್ಷಿ ಜಿ.ಸೋಮಶೇಖರ ರೆಡ್ಡಿ, ‘ಪೇಜ್‌ ಪ್ರಮುಖರನ್ನು ನಿಯೋಜಿಸುವಂತೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಸೂಚಿಸಿದ್ದಾರೆ. ಮತ ಸೆಳೆಯಲು ಇದೊಂದು ಅದ್ಭುತ ತಂತ್ರ. ನಗರದ ಎಲ್ಲ ವಾರ್ಡ್‌ಗಳಲ್ಲೂ ಅರ್ಹ ಕಾರ್ಯಕರ್ತರನ್ನು ಗುರುತಿಸಲಾಗುತ್ತಿದೆ’ ಎಂದರು.

ಉತ್ತರ ಪ್ರದೇಶದಿಂದ ನಿಯೋಜನೆ: ‘ಸಾಮಾಜಿಕ ಜಾಲ ತಾಣಗಳಲ್ಲಿ ಪಕ್ಷದ ಪರ ಜನರ ಒಲವು– ನಿಲುವುಗಳನ್ನು ಗುರುತಿಸಿ ಮಾಹಿತಿ ನೀಡಲೆಂದೇ ಉತ್ತರ ಪ್ರದೇಶದ ಕಾರ್ಯಕರ್ತರು ನಗರಕ್ಕೆ ಬಂದಿದ್ದಾರೆ’ ಎಂದು ಹೇಳಿದರು.

‘ಬಿಜೆಪಿ ಪರ ಜನರ ಅಭಿಪ್ರಾಯ ಹೇಗಿದೆ ಎಂಬ ಕುರಿತು ಮಾಹಿತಿ ಸಂಗ್ರಹಿಸಲು ನೆರೆಯ ಆಂಧ್ರಪ್ರದೇಶದ ಕಾರ್ಯಕರ್ತರನ್ನೂ ಪಕ್ಷವು ಜಿಲ್ಲೆಗೆ ನಿಯೋಜಿಸಿದೆ. ಅವರು ಜನರ ನಡುವೆಯೇ ಸದ್ದಿಲ್ಲದೆ ಕಾರ್ಯನಿರತರಾಗಿದ್ದಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT