ಶುಕ್ರವಾರ, ಜನವರಿ 17, 2020
22 °C

ನಿಷ್ಠಾವಂತ ನಾಯಕರ ಅಗತ್ಯವಿದೆ: ಸಿ.ಮುನಿಯಪ್ಪ ಅಭಿಮತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ: ‘ಸಮಾಜದಲ್ಲಿ ಭ್ರಷ್ಟಾಚಾರ, ದೌರ್ಜನ್ಯ, ದಬ್ಬಾಳಿಕೆ ಹೆಚ್ಚುತ್ತಿವೆ. ಹಾಗಾಗಿ ನಿಷ್ಠಾವಂತ ನಾಯಕರ ಅಗತ್ಯ ಇದೆ’ ಎಂದು ಭಾರತ ಜನಜಾಗೃತಿ ಸೇನೆ ರಾಜ್ಯ ಘಟಕದ ಅಧ್ಯಕ್ಷ ಸಿ.ಮುನಿಯಪ್ಪ ಹೇಳಿದರು.

ದೇವನಹಳ್ಳಿ ತಾಲ್ಲೂಕಿನ ಕಾಂಗ್ರೆಸ್ ನಾಯಕ ಮುನಿನರಸಿಂಹಯ್ಯ ಅವರ ಜನ್ಮದಿನದ ಅಂಗವಾಗಿ ಅವರನ್ನು ಅಭಿನಂದಿಸಿ ಮಾತನಾಡಿದರು.

‘ಶೋಷಿತ ವರ್ಗ ಸೇರಿದಂತೆ ಬಡವರ ಪರವಾಗಿ ಕೆಲಸ ಮಾಡುವ ಜನಪ್ರತಿನಿಧಿಗಳು ಅಪರೂಪವಾಗಿರುವ ಈ ದಿನಗಳಲ್ಲಿ ಜನಮನ್ನಣೆ ಗಳಿಸಿರುವ ನಾಯಕರ ಕೊರತೆ ಕಾಡುತ್ತಿರುವುದರಿಂದ ರಾಜ್ಯ ರಾಜಕೀಯದಲ್ಲಿ ಹಲವು ಬದಲಾವಣೆಗಳು ಆಗುತ್ತಿವೆ. ಕ್ಷೇತ್ರದಲ್ಲಿ ಎರಡು ಬಾರಿ ಶಾಸಕರಾಗಿದ್ದ ಮುನಿನರಸಿಂಹಯ್ಯ ಅವರು ಹಲವು ಅಭಿವೃದ್ಧಿ ಕೆಲಸ ಮಾಡಿದ್ದಾರೆ’ ಎಂದು ಹೇಳಿದರು.

‘ಬಡವರಿಗೆ ಭೂ ಮಂಜೂರಾತಿ, ಮನೆ ನಿರ್ಮಾಣ, ರಸ್ತೆ ಅಭಿವೃದ್ಧಿ, ಕುಡಿಯುವ ನೀರಿನ ಪೂರೈಕೆ, ಶೈಕ್ಷಣಿಕ ಬೆಳವಣಿಗೆಗೆ ಪ್ರೋತ್ಸಾಹ ಸೇರಿದಂತೆ ಹಲವಾರು ಅಭಿವೃದ್ಧಿ ಕಾರ್ಯ ಮಾಡಿದ್ದಾರೆ. ಇಂತಹ ನಾಯಕರ ಅನಿವಾರ್ಯತೆ ಇದೆ. ಅವರು ಅನುಷ್ಠಾನಕ್ಕೆ ತಂದಿರುವ ಕಾರ್ಯಕ್ರಮಗಳು ತಳಮಟ್ಟದ ಜನರಿಗೂ ಮುಟ್ಟಬೇಕು’ ಎಂದು ಹೇಳಿದರು.

ಕಾಂಗ್ರೆಸ್ ನಾಯಕ ಮುನಿನರಸಿಂಹಯ್ಯ ಮಾತನಾಡಿ, ‘ಸರ್ಕಾರದ ಯೋಜನೆಗಳು ಜನರನ್ನು ತಲುಪಬೇಕು. ಜನರಿಂದ ಆಯ್ಕೆಯಾದವರು ಪ್ರಾಮಾಣಿಕವಾಗಿ ಕೆಲಸ ಮಾಡಿದಾಗ ಮಾತ್ರ ಸಂವಿಧಾನದ ಆಶಯ ನೆರವೇರಲು ಸಾಧ್ಯ. ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಜನರು ಸದ್ಬಳಕೆ ಮಾಡಿಕೊಳ್ಳುವತ್ತ ಗಮನ ಹರಿಸಬೇಕು. ರಸ್ತೆಗಳ ಉತ್ತಮ ನಿರ್ವಹಣೆ ಮುಖ್ಯ. ಲಭ್ಯವಿರುವ ನೀರಿನ ಸಮರ್ಪಕ ಉಪಯೋಗವಾಗಬೇಕು’ ಎಂದರು.

‘ಪ್ರಸ್ತುತ ರಾಜಕೀಯ ವ್ಯವಸ್ಥೆ ತೀರಾ ಹದಗೆಡುತ್ತಿದೆ. ಬಿಜೆಪಿಯಿಂದ ಜನರ ಮೇಲೆ ಮತ್ತೊಂದು ಉಪಚುನಾವಣೆ ಹೇರುವಂತಾಯಿತು. ಚುನಾವಣೆಗೆ ಖರ್ಚಾಗುವ ಹಣವೆಲ್ಲ ಜನರು ಬೆವರು ಸುರಿಸಿ ದುಡಿದು ಕಟ್ಟುವ ತೆರಿಗೆ ಹಣ. ನಮ್ಮ ಕಾಲದಲ್ಲಿ ಇಷ್ಟೊಂದು ತೆರಿಗೆ ಸರ್ಕಾರಕ್ಕೆ ಬರುತ್ತಿರಲಿಲ್ಲ. ಈಗ ತೆರಿಗೆ ಸಂಗ್ರಹ ಹೆಚ್ಚಿದ್ದರೂ ಹಳ್ಳಿಗಳಲ್ಲಿ ಆಗಬೇಕಿರುವ ಅಭಿವೃದ್ಧಿ ಕಾರ್ಯಗಳು ಆಗುತ್ತಿಲ್ಲ. ಪದೇ ಪದೇ ಈ ರೀತಿ ಚುನಾವಣೆ ನಡೆಸುತ್ತಾ ಹೋದರೆ ಅಭಿವೃದ್ಧಿಗೆ ಅವಕಾಶ ಕಡಿಮೆಯಾಗುತ್ತದೆ’ ಎಂದು ಬೇಸರ ವ್ಯಕ್ತಪಡಿಸಿದರು.

ಮುಖಂಡ ಎಂ. ನರಸಿಂಹಮೂರ್ತಿ ಇದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು