ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕರ ಸಂಕ್ರಾಂತಿ: ಗ್ರಾಮೀಣ ದೇಗುಲಗಳಲ್ಲಿ ಪೂಜೆ

Published 15 ಜನವರಿ 2024, 15:43 IST
Last Updated 15 ಜನವರಿ 2024, 15:43 IST
ಅಕ್ಷರ ಗಾತ್ರ

ವಿಜಯಪುರ(ದೇವನಹಳ್ಳಿ): ಮಕರ ಸಂಕ್ರಾಂತಿ ಹಬ್ಬವನ್ನು ಪಟ್ಟಣ ಸೇರಿದಂತೆ ಗ್ರಾಮೀಣ ಭಾಗದ ದೇವಾಲಯಗಳಲ್ಲಿ ವಿಶೇಷ ಪೂಜೆ ಸಲ್ಲಿಸುವ ಮೂಲಕ ಆಚರಿಸಲಾಯಿತು.

ಪ್ರತಿಯೊಂದು ಹಳ್ಳಿಯಲ್ಲೂ ಕಾಟಮರಾಯ ದೇವರ ದೇವಾಲಯ ನಿರ್ಮಿಸಿ ಕಬ್ಬು, ಕಡಲೇಕಾಯಿ, ಅವರೆಕಾಯಿ ಬೇಯಿಸಿ ನೈವೇದ್ಯ ಸಮರ್ಪಣೆ ಮಾಡಿ ಪೂಜೆ ಸಲ್ಲಿಸಲಾಯಿತು. ರೈತರು ತಮ್ಮ ಮನೆಗಳಲ್ಲಿರುವ ದನ–ಕರು ತೊಳೆದು ಅವುಗಳ ಕೊರಳಿಗೆ ಹೂವಿನ ಮಾಲೆ ಹಾಕಿ ಪೂಜೆ ಸಲ್ಲಿಸಿದರು. ಕಬ್ಬು, ಬೆಲ್ಲ, ಬಾಳೆ ಹಣ್ಣು, ಪೊಂಗಲ್ ಸೇರಿದಂತೆ ವಿವಿಧ ಬಗೆ ಖಾದ್ಯಗಳನ್ನು ಸಿದ್ಧಪಡಿಸಿ ರಾಸುಗಳಿಗೆ ತಿನ್ನಿಸಿದರು.

ಪಟ್ಟಣದ ಯಲುವಹಳ್ಳಿ ರಸ್ತೆಯಲ್ಲಿರುವ ಪ್ರಶಾಂತ ಬಸವಣ್ಣ ದೇವಾಲಯದಲ್ಲಿ ರಾಸುಗಳಿಗೆ ವಿಶೇಷ ಪೂಜೆ ಆಯೋಜಿಸಲಾಗಿತ್ತು. ದೇವಾಲಯದ ಅಭಿವೃದ್ಧಿ ಸಮಿತಿ ವತಿಯಿಂದ ಅಕ್ಕಿ, ಬೇಯಿಸಿದ ಅವರೆಕಾಯಿ, ಗೆಣಸು, ಕಬ್ಬು, ಬೆಲ್ಲ, ಎಳ್ಳನ್ನು ಬಿದಿರಿನ ಬುಟ್ಟಿಗೆ ಹಾಕಿ ಪೂಜೆ ಸಲ್ಲಿಸಿದ ನಂತರ ಆಹಾರವಾಗಿ ಹಸುಗಳಿಗೆ ವಿತರಣೆ ಮಾಡಲಾಯಿತು.

ಕೊಮ್ಮಸಂದ್ರ  ಈಶ್ವರ ದೇವಾಲಯದ ಆವರಣದಲ್ಲಿ ಸಂಕ್ರಾಂತಿ ಅಂಗವಾಗಿ ಪಂಢರಪುರ ಭಜನೆಯೊಂದಿಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾಟಮರಾಯನ ಗುಡಿ ಕಟ್ಟಿ ಪೂಜೆ ನೆರವೇರಿಸಿದರು. ಸುತ್ತಮುತ್ತಲಿನ ನೂರಾರು ಮಂದಿ ನಾಗರಿಕರು ಜಾತ್ರೆ ಸಂಭ್ರಮದಲ್ಲಿ ಪಾಲ್ಗೊಂಡಿದ್ದರು.

ವಿಜಯಪುರ ಹೋಬಳಿ ಧರ್ಮಪುರ ಗ್ರಾಮದ ರೈತ ಅನಿಲ್ ಕುಮಾರ್ ಅವರು ಸಂಕ್ರಾಂತಿ ಅಂಗವಾಗಿ ಎತ್ತುಗಳಿಗೆ ಅಲಂಕಾರ ಮಾಡಿದ್ದರು
ವಿಜಯಪುರ ಹೋಬಳಿ ಧರ್ಮಪುರ ಗ್ರಾಮದ ರೈತ ಅನಿಲ್ ಕುಮಾರ್ ಅವರು ಸಂಕ್ರಾಂತಿ ಅಂಗವಾಗಿ ಎತ್ತುಗಳಿಗೆ ಅಲಂಕಾರ ಮಾಡಿದ್ದರು

ಗಡ್ಡದನಾಯಕನಹಳ್ಳಿ ದುರ್ಗಾಮಹೇಶ್ವರಿ ದೇವಾಲಯ, ಭಟ್ರೇನಹಳ್ಳಿ ಸಾಯಿನಾಥ ಜ್ಞಾನಮಂದಿರ, ನಗರೇಶ್ವರಸ್ವಾಮಿ ದೇವಾಲಯ, ಓಂಕಾರೇಶ್ವರಸ್ವಾಮಿ ದೇವಾಲಯ, ವೀರಭದ್ರಸ್ವಾಮಿ ದೇವಾಲಯ, ಸೋಮೇಶ್ವರಸ್ವಾಮಿ ದೇವಾಲಯ, ವೆಂಕಟರಮಣಸ್ವಾಮಿ ದೇವಾಲಯ, ಧರ್ಮಪುರ ಆಂಜನೇಯಸ್ವಾಮಿ ದೇವಾಲಯ, ಹಾರ್ಡಿಪುರ ವೆಂಕಟರಮಣಸ್ವಾಮಿ ದೇವಾಲಯ, ಕೆರೆಕೋಡಿ ರಸ್ತೆಯಲ್ಲಿರುವ ಅಯ್ಯಪ್ಪಸ್ವಾಮಿ ದೇವಾಲಯಗಳಲ್ಲಿ ವಿಶೇಷ ಪೂಜೆ ಸಲ್ಲಿಸಿದರು.

ವಿಜಯಪುರ ಓಂಕಾರೇಶ್ವರಸ್ವಾಮಿ ದೇವಾಲಯದಲ್ಲಿ ಸಂಕ್ರಾಂತಿ ಹಬ್ಬದ ಅಂಗವಾಗಿ ಮಹಿಳೆಯರೊಬ್ಬರು ಅಯ್ಯಪ್ಪಸ್ವಾಮಿ ಮಾಲಾಧಾರಿಗೆ ಎಳ್ಳು-ಬೆಲ್ಲ ವಿತರಣೆ ಮಾಡಿದರು
ವಿಜಯಪುರ ಓಂಕಾರೇಶ್ವರಸ್ವಾಮಿ ದೇವಾಲಯದಲ್ಲಿ ಸಂಕ್ರಾಂತಿ ಹಬ್ಬದ ಅಂಗವಾಗಿ ಮಹಿಳೆಯರೊಬ್ಬರು ಅಯ್ಯಪ್ಪಸ್ವಾಮಿ ಮಾಲಾಧಾರಿಗೆ ಎಳ್ಳು-ಬೆಲ್ಲ ವಿತರಣೆ ಮಾಡಿದರು

ಹಾರೋಹಳ್ಳಿಯ ಚನ್ನಕೇಶವಸ್ವಾಮಿ ದೇವಾಲಯದಲ್ಲಿ ರಥೋತ್ಸವದೊಂದಿಗೆ ಸಂಕ್ರಾಂತಿ ಹಬ್ಬ ಆಚರಣೆ ಮಾಡಿದರು. ರಥ ಗ್ರಾಮದ ಸುತ್ತಲೂ ಪ್ರದಕ್ಷಿಣೆ ಮಾಡಿ ದೇವಾಲಯದ ಆವರಣಕ್ಕೆ ಬಂದ ನಂತರ, ಗ್ರಾಮದವರೆಲ್ಲರೂ ಪೂಜೆ ಸಲ್ಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT