ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾವು ಇಳುವರಿ ಇಳಿಕೆ ಸಾಧ್ಯತೆ: ಆತಂಕ

ಮಳೆ ಅಭಾವ, ಬಿಸಿಲಿನ ಏರಿಕೆ ಪರಿಣಾಮ l ಜಿಗಿ ಹುಳ ಕಾಟ
Last Updated 31 ಮಾರ್ಚ್ 2020, 20:00 IST
ಅಕ್ಷರ ಗಾತ್ರ

ವಿಜಯಪುರ:ಬಿಸಿಲಿನ ಏರಿಕೆ, ಹವಾಮಾನ ವೈಪರೀತ್ಯ ಮಾವಿನ ಫಸಲಿಗೆ ಮಾರಕವಾಗಿ ಪರಿಣಮಿಸುತ್ತಿದೆ. ಬೆಳೆ ಪರಿಸ್ಥಿತಿಯನ್ನು ಗಮನಿಸಿದರೆ ಈ ಬಾರಿ ಮಾವಿನ ಫಸಲಿನ ಇಳುವರಿಯಲ್ಲಿ ತೀವ್ರವಾಗಿ ಕುಸಿತ ಉಂಟಾಗುವ ಲಕ್ಷಣ ಕಂಡುಬರುತ್ತಿದೆ.

ತಾಲ್ಲೂಕಿನ ರೈತರು ಬಾದಾಮಿ, ಮಲ್ಲಿಕಾ, ದಶೇರಿ, ಬಂಗಾನಪಲ್ಲಿ, ಸೇರಿದಂತೆ ಹಲವು ತಳಿಯ ಮಾವಿನ ಮರಗಳನ್ನು ಬೆಳೆದಿದ್ದಾರೆ. ತೀವ್ರ ಮಳೆಯ ಅಭಾವದಿಂದಾಗಿ ಈ ಬಾರಿ ಮಾವಿನ ಫಸಲು ಕಡಿಮೆಯಾಗಲಿದೆ. ಅಪರೂಪಕ್ಕೆ ಹೂಬಿಟ್ಟ ಮರಗಳಲ್ಲಿ ತೀರಾ ಕಡಿಮೆ ಪ್ರಮಾಣದ ಹೀಚು ಕಾಣಿಸಿಕೊಂಡಿದೆ. ಹಳೆ ತೋಟಗಳಲ್ಲಿನ ಮರಗಳು ಸೊರಗಿವೆ. ಈಗ ಬಂದಿರುವ ಅಲ್ಪ ಪ್ರಮಾಣದ ಫಸಲು ಬಿಸಿಲಿನ ಏರಿಕೆಯಿಂದಾಗಿ ಉದುರಲಾರಂಭಿಸಿರುವುದು ಆತಂಕಕ್ಕೆ ಕಾರಣವಾಗಿದೆ.

‘ಈಗ ಬಂದಿರುವ ಮಾವಿನ ಫಸಲಿನ ಲಭ್ಯತೆ ಪ್ರಮಾಣವನ್ನು ಈ ಹಂತದಲ್ಲಿ ಅಂದಾಜು ಮಾಡಲಾಗದು. ಯಾವುದೇ ಸಂದರ್ಭದಲ್ಲಿ ಬಿರುಗಾಳಿ, ಆಲಿಕಲ್ಲು, ರೋಗಬಾಧೆಯು ಫಸಲನ್ನು ಬಲಿ ಪಡೆಯುವ ಸಾಧ್ಯತೆ ಹೆಚ್ಚಾಗಿ ಇರುತ್ತದೆ. ಹೀಗೆ ಈ ಎಲ್ಲ ಅಡೆತಡೆಗಳಿಂದ ಪಾರಾದ ಫಸಲು ಮಾತ್ರ ಲೆಕ್ಕಕ್ಕೆ ಸಿಗುತ್ತದೆ. ಮಾವಿನ ಹೀಚಿಗೆ ಹುಳ ಬಾಧೆಯುಂಟಾಗುವ ಆತಂಕವೂ ಇದೆ’ ಎನ್ನುತ್ತಾರೆರೈತ ಮಂಜುನಾಥ್.

‘ಮೊದಲ ಬಾರಿಗೆ ಕೆಲವು ತಳಿಯ ಮಾವಿನ ಹೀಚಿಗೆ ಹುಳು ಬಾಧೆ ಕಾಣಿಸಿಕೊಳ್ಳತೊಡಗಿದೆ. ವಿಶೇಷವಾಗಿ ಬಾದಾಮಿ ಹೀಚಿನಲ್ಲಿ ಹೊಂಗೆ ಬೀಜಕ್ಕೆ ಬರುವ ಹುಳುಗಳು ಹೀಚಿನ ತೊಟ್ಟಿನ ಪಕ್ಕದಲ್ಲಿ ರಂಧ್ರ ಮಾಡಿ ಒಳಗೆ ಪ್ರವೇಶಿಸುತ್ತಿವೆ. ಇದರಿಂದ ಪಾರಾದರೆ ಮಾತ್ರವೇ ಈಗ ಬಂದಿರುವ ಬೆಳೆ ಕೈಗೆ ಸಿಗುತ್ತದೆ. ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಈ ಬಗ್ಗೆ ಹೆಚ್ಚಿನ ಜಾಗೃತಿ ಮೂಡಿಸುವ ಕಡೆಗೆ ಗಮನಹರಿಸಬೇಕು’ ಎಂದು ರೈತರು ಮನವಿ ಮಾಡಿದ್ದಾರೆ.

‘ಈ ಬಾರಿ ವಾತಾವರಣ ವೈಪರಿತ್ಯದಿಂದಾಗಿ ಕಳೆದ ವರ್ಷಕ್ಕಿಂತಲೂ ಇಳುವರಿ ಸಾಕಷ್ಟು ಕುಂಠಿತವಾಗಲಿದೆ. ಈ ವಾತಾವರಣದಲ್ಲಿ ಜೀಗಿ ಹುಳ ಜಾಸ್ತಿಯಾಗುತ್ತದೆ. ತಾಲ್ಲೂಕಿನಲ್ಲಿ ಒಟ್ಟು2,106 ಎಕರೆಪ್ರದೇಶದಲ್ಲಿ ಮಾವಿನ ಫಸಲಿದೆ. ಹಣ್ಣಾಗುವ ಸಮಯಕ್ಕೆ ಜೀಗಿಹುಳ, ವಾಟೆ ಕೊರೆಯುವ ಹುಳ, ಫ್ರೂಟ್‌ ಫ್ಲೈ, ಬರುತ್ತವೆ. ತೇವಾಂಶ ಹೆಚ್ಚಾದರೆ ಫ್ರೂಟಿ ಮಿಲ್ಟಿ ಬೂದಿರೋಗ, ಅಂಥ್ರಾಕ್ಸ್ ರೋಗಗಳು ಕಾಣಿಸಿಕೊಳ್ಳುತ್ತವೆ’ ಎಂದುತೋಟಗಾರಿಕೆ ಇಲಾಖೆ ಅಧಿಕಾರಿ ಆದರ್ಶ್ ಮಾಹಿತಿ ನೀಡಿದ್ದಾರೆ.

ಹೊಸದಾಗಿ ಚಿಗುರು ಬಂದಿರುವ ಮರಗಳಲ್ಲಿ ಪ್ಲೀಯಾ ಬೀಟಲ್ ಹುಳು ಕಾಣಿಸಿಕೊಳ್ಳುತ್ತದೆ. ಅದನ್ನು ತಡೆಗಟ್ಟಲಿಕ್ಕಾಗಿ ರೈತರಿಗೆ ಅಗತ್ಯವಾಗಿರುವ ಮಾಹಿತಿ ಒದಗಿಸಲಾಗುತ್ತಿದೆ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT