ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಮೂಹಿಕ ವಿವಾಹಕ್ಕೆ ಪ್ರೋತ್ಸಾಹ ಅವಶ್ಯ: ಸ್ವಾಮೀಜಿ

ಸಾಮೂಹಿಕ ವಿವಾಹ ಮಹೋತ್ಸವ ಅಂಗವಾಗಿ ಧರ್ಮ ಜಾಗೃತಿ ಸಮಾವೇಶ
Last Updated 5 ಡಿಸೆಂಬರ್ 2018, 13:52 IST
ಅಕ್ಷರ ಗಾತ್ರ

ಆನೇಕಲ್: ‘ದುಂದುವೆಚ್ಚಕ್ಕೆ ಕಡಿವಾಣ ಹಾಕಲು ಐಷಾರಾಮಿ ಮದುವೆಗಳಿಗೆ ಬದಲಾಗಿ‌, ಸಾಮೂಹಿಕ ಮದುವೆಗಳತ್ತ ಗಮನ ಹರಿಸಬೇಕಾಗಿದೆ. ಇದರಿಂದ ಮದುವೆ ಜೊತೆಗೆ ಬಡವರಿಗೆ ಅನುಕೂಲವಾಗಲಿದೆ. ಪುಣ್ಯ ಕ್ಷೇತ್ರಗಳಲ್ಲಿ ಸಾಮೂಹಿಕ ವಿವಾಹ ನೆರವೇರಿದರೆ ದೈವದ ಅಭಯ ಇರುತ್ತದೆ’ ಎಂದು ಸುತ್ತೂರು ಮಠದ ಡಾ.ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ ನುಡಿದರು.

ಅವರು ತಾಲ್ಲೂಕಿನ ಮಾಯಸಂದ್ರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳೇಹಳ್ಳಿಯ ಮುನೇಶ್ವರ ಸೇವಾ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ‘ಕಾರ್ತಿಕ ದೀಪೋತ್ಸವ ಹಾಗೂ ಸಾಮೂಹಿಕ ವಿವಾಹ ಮಹೋತ್ಸವ’ದ ಅಂಗವಾಗಿ ಆಯೋಜಿಸಿದ್ದ ‘ಧರ್ಮ ಜಾಗೃತಿ ಸಮಾವೇಶ’ ಉದ್ಘಾಟಿಸಿ ಮಾತನಾಡಿದರು.

ಭಾರತೀಯ ಪರಂಪರೆಯಲ್ಲಿ ಬ್ರಹ್ಮಚರ್ಯ, ಗೃಹಸ್ಥ, ವಾನಪ್ರಸ್ಥ, ಸನ್ಯಾಸಗಳೆಂಬ ನಾಲ್ಕು ಆಶ್ರಮಗಳಿವೆ. ಹುಟ್ಟಿನಿಂದ ಸಾಯುವ ತನಕ ಧರ್ಮ ಪಾಲಿಸುವುದು ಜವಾಬ್ದಾರಿಯಾಗಿದೆ. ಬ್ರಹ್ಮಚಾರಿಯಾಗಿ ಸಾಧನೆ ಮಾಡಿ ಭವಿಷ್ಯ ರೂಪಿಸಿಕೊಳ್ಳಬೇಕು. ಗೃಹಸ್ಥಾಶ್ರಮದಲ್ಲಿ ಹೊಂದಾಣಿಕೆಯಿಂದ ಜೀವನ ನಡೆಸಬೇಕು. ವಾನಪ್ರಸ್ಥ ಆಶ್ರಮದಲ್ಲಿ ಜೀವನದಲ್ಲಿ ಸಹಾಯ ಮಾಡಿದ ವ್ಯಕ್ತಿಗಳನ್ನು ಸ್ಮರಿಸಿ ಅವರಿಗೆ ಅವಕಾಶ ಕಲ್ಪಿಸಿಕೊಟ್ಟು ನಂತರ ಸನ್ಯಾಸಾಶ್ರಮದ ಮೂಲಕ ಮುಕ್ತಿ ಮಾರ್ಗ ಪಡೆಯುವುದು ಪದ್ಧತಿಯಾಗಿದೆ ಎಂದು ತಿಳಿಸಿದರು.

ಮನುಷ್ಯ ವಯೋಧರ್ಮಕ್ಕೆ ಪೂರಕವಾಗಿ ಕಾರ್ಯಗಳನ್ನು ಪೂರೈಸಬೇಕು. ಗೃಹಸ್ಥಾಶ್ರಮ ಪ್ರವೇಶಿಸಿರುವ ವಧು ವರರು ಸತಿ ಪತಿಯಾಗಿ ಹೊಂದಾಣಿಕೆಯಿಂದ ಜೀವನ ನಡೆಸಬೇಕು. ದುಷ್ಟ ಅಭ್ಯಾಸಗಳಿಗೆ ವಿದಾಯ ಹೇಳಿ ಸನ್ಮಾರ್ಗದಲ್ಲಿ ಸಾಗಲು ಸಂಕಲ್ಪ ಮಾಡಬೇಕು ಎಂದು ಕಿವಿಮಾತು ಹೇಳಿದರು.

ಧಾರ್ಮಿಕ ಕಾರ್ಯಗಳು ನಿರಂತರವಾಗಿ ನಡೆಯಬೇಕು. ಇದರಿಂದ ಸಮಾಜದಲ್ಲಿ ಶಾಂತಿ, ನೆಮ್ಮದಿ ಸಿಗಲಿದೆ. ಎಲ್ಲರೂ ಒಗ್ಗೂಡಿ ದೇವರ ಕಾರ್ಯಕ್ಕೆ ಮುಂದಾಗಬೇಕು ಎಂದರು.

ಕೋಡಿಮಠದ ಡಾ.ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಮಾತನಾಡಿ, ಸಮಾಜದಲ್ಲಿ ಇತ್ತೀಚಿನ ದಿನಗಳಲ್ಲಿ ಜನರು ತಾಳ್ಮೆ ಕಳೆದುಕೊಂಡು ಆರೋಗ್ಯ ಕಳೆದುಕೊಳ್ಳುತ್ತಿದ್ದಾರೆ. ಜನರ ದುರಾಸೆಯಿಂದಾಗಿ ಪ್ರಕೃತಿ ನಾಶವಾಗುತ್ತಿದೆ. ಪ್ರಾಕೃತಿಕ ವಿಕೋಪಗಳಿಂದ ಸಮಾಜಕ್ಕೆ ಸಂಚಕಾರ ಉಂಟಾಗುತ್ತಿದೆ ಎಂದು ಹೇಳಿದರು.

ಮನುಷ್ಯನಿಗೆ ಶಾಂತಿ – ನೆಮ್ಮದಿ ದೊರೆಯಬೇಕಾದರೆ ದೇಗುಲಗಳ ಮೊರೆ ಹೋಗಬೇಕು. ಸನಾತನ ಕಾಲದಿಂದಲೂ ದೇವಾಲಯಗಳು ಮಾನವನ ನೆಮ್ಮದಿ ತಾಣಗಳಾಗಿವೆ. ಜಾತಿಮತ ಬೇಧವಿಲ್ಲದೇ ದೇವರನ್ನು ಆರಾಧಿಸುವ ವ್ಯವಸ್ಥೆಯಾಗಬೇಕು. ದೇವರ ದೃಷ್ಟಿಯಲ್ಲಿ ಎಲ್ಲರೂ ಸಮಾನರು. ಮನುಷ್ಯರು ತಮ್ಮ ಸ್ವಾರ್ಥಕ್ಕಾಗಿ ಸಮಾಜ ಒಡೆಯಬಾರದು. ಸಮಾಜವನ್ನು ಒಗ್ಗೂಡಿಸಬೇಕು ಎಂದರು.

ಧಾರ್ಮಿಕ ಕಾರ್ಯಕ್ರಮದ ನೇತೃತ್ವ ವಹಿಸಿದ್ದ ಬೆಳ್ಳಾವಿ ಸಂಸ್ಥಾನ ಮಠದ ಮಹಂತ ಶಿವಾಚಾರ್ಯಸ್ವಾಮೀಜಿ ಮಾತನಾಡಿ, ಗಳಿಸಿದ ಒಂದು ಭಾಗವನ್ನು ಸಮಾಜ ಸೇವೆಗಾಗಿ ಮೀಸಲಿಡಬೇಕು. ಈ ಮೂಲಕ ಸಮಾಜದ ಋಣ ತೀರಿಸಬೇಕು. ದಾನಿಗಳಾದ ಟಿ.ರವೀಂದ್ರರೆಡ್ಡಿ ಅವರು ಸಾಮೂಹಿಕ ವಿವಾಹ ಮಹೋತ್ಸವ ಹಾಗೂ ಧಾರ್ಮಿಕ ಕಾರ್ಯಗಳನ್ನು ಆಯೋಜನೆ ಮಾಡುವ ಮೂಲಕ ಧಾರ್ಮಿಕ ಜಾಗೃತಿ ಮೂಡಿಸುವಲ್ಲಿ ಶ್ರಮಿಸಿದ್ದಾರೆ ಎಂದರು.

ನೊಣವಿನಕೆರೆ ಕಾಡುಸಿದ್ದೇಶ್ವರ ಮಠದ ಶಿವಯೋಗಿಶ್ವರ ಸ್ವಾಮೀಜಿ, ಚಕ್ರಬಾವಿ ಜಂಗಮ ಮಠದ ಸಿದ್ದಲಿಂಗ ಸ್ವಾಮೀಜಿ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಮುನಿರತ್ನಮ್ಮ ನಾರಾಯಣ್, ಮಾಜಿ ಸಚಿವ ಎ.ನಾರಾಯಣಸ್ವಾಮಿ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಟಿ.ಕೆ.ರಮೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT