ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಣಿಗಾರಿಕೆ: ಭಾರಿ ಪ್ರಮಾಣದ ಸ್ಫೋಟಕ ಪತ್ತೆ

ರಾಷ್ಟೀಯ ಹೆದ್ದಾರಿ ಕಾಮಗಾರಿ ಅಡ್ಡಿಯಾದ ಕಲ್ಲುಬಂಡೆ ಸ್ಫೋಟಿಸಲು ಬಳಕೆ
Last Updated 12 ಜುಲೈ 2022, 3:54 IST
ಅಕ್ಷರ ಗಾತ್ರ

ದೇವನಹಳ್ಳಿ: ಬಿದಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೋಡಗುರ್ಕಿ ಬೆಟ್ಟದಲ್ಲಿ ಖಾಸಗಿ ಕಂಪನಿ ನಡೆಸುತ್ತಿರುವ ಗಣಿಗಾರಿಕೆ ಪ್ರದೇಶದಲ್ಲಿ 200 ಕೆ.ಜಿ.ಗೂ ಹೆಚ್ಚಿನ ಸ್ಫೋಟಕ ವಸ್ತುಗಳನ್ನು ಸುರಕ್ಷತಾ ಕ್ರಮಗಳನ್ನು ಅನುಸರಿಸದೆ ಬಳಕೆ ಮಾಡುತ್ತಿರುವುದು ಸೋಮವಾರ ಪತ್ತೆಯಾಗಿದೆ.

ಜಿಲ್ಲೆಯ ದೊಡ್ಡಬಳ್ಳಾಪುರ ಬೈಪಾಸ್‌ನಿಂದ ಹೊಸಕೋಟೆ ಸೆಕ್ಷನ್‌ ರಾಷ್ಟ್ರೀಯ ಹೆದ್ದಾರಿಯವರೆಗೂ 38 ಕಿ.ಮೀ ಉದ್ದದ ಚತುಷ್ಪಥ ರಸ್ತೆ ಕಾಮಗಾರಿಗೆ ಸಂಬಂಧಿಸಿದಂತೆ ಅಗತ್ಯವಿರುವ ಜಲ್ಲಿ ಕಲ್ಲುಗಳನ್ನು ಗಣಿಗಾರಿಕೆ ಮುಖಾಂತರ ಸರಬರಾಜು ಮಾಡಿಕೊಳ್ಳಲು ತಾಲ್ಲೂಕಿನ ಕೊಡಗುರ್ಕಿ ಗ್ರಾಮದ ಸರ್ವೇ ನಂ 149ರಲ್ಲಿ ಒಟ್ಟು 8 ಎಕರೆ 28 ಗುಂಟೆ ಜಾಗವನ್ನು ಎರಡು ವರ್ಷಕ್ಕೆ ಗುತ್ತಿಗೆ ನೀಡಲಾಗಿದೆ.

ಕಲ್ಲು ಗಣಿಗಾರಿಕೆ ನಡೆಯುತ್ತಿರುವ ಸ್ಥಳದಲ್ಲಿ ಜಿಲೆಟಿನ್ ಸ್ಫೋಟಕ ವಸ್ತುಗಳನ್ನು ಸ್ಫೋಟಕ ತಜ್ಞರ ಮೇಲುಸ್ತುವಾರಿ ಇಲ್ಲದೇ ಬಳಸಲಾಗುತ್ತಿದೆ. ಬಂಡೆಗಳಲ್ಲಿ ಸುಮಾರು ಎರಡು ಸಾವಿರ ರಂಧ್ರ ಕೊರೆದು ಅದರಲ್ಲಿ ಜಿಲೆಟಿನ್‌ ತುಂಬಿ ಬಂಡೆಗಳನ್ನು ಸ್ಫೋಟಿಸಲು ಯತ್ನಿಸಿಲಾಗಿತ್ತು ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಸ್ಥಳ ಪರಿಶೀಲನೆಗೆ ಆಗಮಿಸಿದ ತಹಶೀಲ್ದಾರ್‌ಗೆ ಪ್ರತಿರೋಧ ಒಡ್ಡಿದ ಸ್ಥಳೀಯರು, ಗ್ರಾಮಕ್ಕೆ ಹೊಂದಿಕೊಂಡಿರುವ ಬೆಟ್ಟದಲ್ಲಿ ಗಣಿಗಾರಿಕೆ ಮಾಡಬಾರದು ಎಂದು ಒತ್ತಾಯಿಸಿದರು. ಗಣಿಗಾರಿಕೆಗೆ ಅವಕಾಶ ನೀಡದಂತೆ ದೇವನಹಳ್ಳಿಯ ತಹಶೀಲ್ದಾರ್‌ ಸಂಬಂಧಪಟ್ಟ ವಿಭಾಗಾಧಿಕಾರಿಗೂ ಮನವಿ ಮಾಡಿದ್ದರು. ಆದರೂ ಗಣಿಗಾರಿಕೆ ನಡೆಯುತ್ತಿದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.

ಇತ್ತೀಚೆಗೆ ನಡೆದ ‘ಜಿಲ್ಲಾಧಿಕಾರಿ ನಡೆ ಹಳ್ಳಿಯ ಕಡೆ’ ಕಾರ್ಯಕ್ರಮದಲ್ಲಿ ಶಾಸಕ ನಿಸರ್ಗ ನಾರಾಯಣಸ್ವಾಮಿ ಅವರಿಗೆ ಘೇರಾವ್‌ ಹಾಕಿದ್ದ ಗ್ರಾಮಸ್ಥರು, ಗಣಿಗಾರಿಕೆಯಿಂದ ಉಂಟಾಗುತ್ತಿರುವ ತೊಂದರೆಯನ್ನು ಎಳೆಎಳೆಯಾಗಿ ಬಿಡಿಸಿಟ್ಟಿದ್ದರು. ಗ್ರಾಮ ಪಂಚಾಯಿತಿ ನೀಡಿದ್ದ ನಿರಪೇಕ್ಷಣಾ ಪತ್ರ ರದ್ದು ಪಡಿಸಲಾಗಿದ್ದರೂ ಗಣಿಗಾರಿಕೆ ಮಾತ್ರ ಎಗ್ಗಿಲ್ಲದೆ ನಡೆಯುತ್ತಿದೆ. ಅರಣ್ಯ ಇಲಾಖೆಗೆ ಸ್ಥಳೀಯರು ಲಿಖಿತ ದೂರು ನೀಡಿದ್ದರೂ ಪ್ರಯೋಜನವಾಗಿಲ್ಲ ಎಂದು ಆರೋಪಿಸಿದ್ದರು.

ಜೀವವೈವಿಧ್ಯಕ್ಕೆ ಧಕ್ಕೆ
ಗಣಿಗಾರಿಕೆ ನಡೆಯುತ್ತಿರುವ ಕೋಡಗುರ್ಕಿಯ ಗಣಿ ಪ್ರದೇಶದಿಂದ ನಂದಿ ಬೆಟ್ಟ ಮತ್ತು ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣ ಕೆಲ ದೂರದಲ್ಲಿದೆ.ಗಣಿ ಧೂಳಿನಿಂದ 500 ಮೀಟರ್‌ ಅಂತರದಲ್ಲಿ ಸಾಕಷ್ಟು ಕೃಷಿ ಭೂಮಿ, ಕೆರೆ ಮತ್ತು ಕಲ್ಯಾಣಿ ಇದ್ದು, ಜೀವ ವೈವಿಧ್ಯಕ್ಕೆ ಧಕ್ಕೆಯಾಗುತ್ತಿದೆ.

ಜಿಲ್ಲಾ ಗಣಿ ಟಾಸ್ಕ್‌ ಪೋರ್ಸ್‌ ಗಣಿಗಾರಿಕೆ ಪರವಾಗಿ ಕೆಲಸ ಮಾಡುತ್ತಿದೆ.ಗಣಿಗಾರಿಕೆಯಿಂದ ಆಗುತ್ತಿರುವ ತೊಂದರೆ ಪ್ರಶ್ನಿಸಿದವರ ಮೇಲೆ ಪ್ರಕರಣ ದಾಖಲಾಗುತ್ತದೆ ಎಂದು ಗ್ರಾಮಸ್ಥರು ದೂರಿದ್ದಾರೆ.

ಅಧಿಕಾರಿಗಳು ಏನು ಹೇಳುತ್ತಾರೆ?
ಯಾವುದೇ ಸುರಕ್ಷತಾ ಕ್ರಮ ಅನುಸರಿಸದೆ ಸಾವಿರಾರು ಜಿಲೆಟಿನ್‌ ಸ್ಫೋಟಕಗಳನ್ನು ಬಳಸುತ್ತಿರುವುದನ್ನುಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿ ಮೂರ್ತಿ ಅವರ ಗಮನಕ್ಕೆ ತಂದಾಗ ಅವರು ಹೇಳಿದ್ದು ಇಷ್ಟು.

‘ಸ್ಥಳೀಯರು ನೀಡಿರುವ ಮಾಹಿತಿಯ ಆಧಾರದ ಮೇಲೆ ಗಣಿಗಾರಿಕೆ ನಡೆಯುತ್ತಿರುವ ಪ್ರದೇಶಕ್ಕೆ ಭೇಟಿ ನೀಡಿದ್ದೇವೆ. ಸ್ಫೋಟಕಗಳನ್ನು ವೈಜ್ಞಾನಿಕವಾಗಿ ಬಳಸಲು ಹಾಗೂ ಸುರಕ್ಷತಾ ಕ್ರಮಗಳ ಮೇಲುಸ್ತುವಾರಿಗಾಗಿ ಸುರಕ್ಷತಾ ಪ್ರಾಧಿಕಾರ ಫೋರ್‌ಮನ್‌ ಅಥವಾ ಮ್ಯಾನೇಜರ್‌ ನೇಮಕ ಮಾಡುತ್ತದೆ. ಅವರ ಮಾರ್ಗದರ್ಶನದಂತೆಸ್ಫೋಟ ಕಾರ್ಯಾಚರಣೆ ನಡೆಯಬೇಕು. ಆದರೆ, ಸ್ಥಳದಲ್ಲಿ ಯಾವ ಅಧಿಕಾರಿ ಮತ್ತು ಸಿಬ್ಬಂದಿಯೂ ಇಲ್ಲ. ಎಲ್ಲ ಸ್ಫೋಟಕಗಳು ಸುರಕ್ಷತೆ ಇಲ್ಲದೇ ಎಲ್ಲಂದರಲ್ಲಿ ಬಿದ್ದಿವೆ. ಅವುಗಳನ್ನು ಹೊತ್ತು ಸಾಗುವ ವಾಹನವೂ ಕಾಣುತ್ತಿಲ್ಲ. ಈ ಕುರಿತು ನೋಟಿಸ್‌ ನೀಡಿ, ಜಿಲ್ಲಾ ಗಣಿ ಟಾಸ್ಕ್‌ ಪೋರ್ಸ್‌ ಸಮಿತಿಗೆ ವರದಿ ನೀಡಲಾಗುವುದು’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT