ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್‌ ಸ್ಥಿತಿಗೆ ಗೋಮಾತೆ ಶಾಪ ಕಾರಣ: ಕೆ.ಎಸ್‌. ಈಶ್ವರಪ್ಪ

ಹೆಣ್ಣು ಮಕ್ಕಳ ರಕ್ಷಣೆಗಾಗಿ ಲವ್‌ ಜಿಹಾದ್‌ ನಿಷೇಧ ಕಾಯ್ದೆ
Last Updated 13 ಡಿಸೆಂಬರ್ 2020, 20:34 IST
ಅಕ್ಷರ ಗಾತ್ರ

ಆನೇಕಲ್: ‘ಕಾಂಗ್ರೆಸ್‌ ಅಧಿಕಾರ ಕಳೆದುಕೊಂಡು ಹೀನಾಯ ಪರಿಸ್ಥಿತಿಗೆ ತಲುಪಲುಗೋಮಾತೆಯ ಶಾಪ ಕಾರಣ’ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್‌.ಈಶ್ವರಪ್ಪ ಹೇಳಿದ್ದಾರೆ.

‘ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದರೆ ಗೋಹತ್ಯೆ ನಿಷೇಧ ಕಾಯ್ದೆ ಬದಲಾಯಿಸುವುದಾಗಿ ಹೇಳಿರುವ ಸಿದ್ದರಾಮಯ್ಯ ಇನ್ನೂ ಅಧಿಕಾರಕ್ಕೆ ಬರುವ ಹಗಲುಗನಸು ಕಾಣುತ್ತಿದ್ದಾರೆ’ ಎಂದು ಅವರು ಲೇವಡಿ ಮಾಡಿದರು.

ಪಟ್ಟಣದಲ್ಲಿ ಭಾನುವಾರ ಅಂಬೇಡ್ಕರ್‌ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಮಾತನಾಡಿದ ಅವರು, ಸಿದ್ಧರಾಮಯ್ಯ ಅವರು ಅಲ್ಪಸಂಖ್ಯಾತರನ್ನು ಓಲೈಸುವ ಸಲುವಾಗಿ ಈ ರೀತಿ ಹೇಳಿಕೆ ನೀಡುತ್ತಿದ್ದಾರೆ ಎಂದು ಟೀಕಿಸಿದರು.

ಗೋರಕ್ಷಣೆಗಾಗಿ ಗೋ ಹತ್ಯೆ ನಿಷೇಧ ಕಾಯ್ದೆ ಜಾರಿಗೆ ತಂದಂತೆ, ಹೆಣ್ಣು ಮಕ್ಕಳ ರಕ್ಷಣೆಗಾಗಿ ಲವ್‌ ಜಿಹಾದ್ ನಿಷೇಧ‌ ಕಾಯ್ದೆ ಜಾರಿಗೆ ತರುವ ನಿಟ್ಟಿನಲ್ಲಿ ಸರ್ಕಾರ ಚಿಂತನೆ ನಡೆಸಿದೆ ಎಂದರು.

ಗೋಹತ್ಯೆ ನಿಷೇಧ ಭಾರತೀಯ ಸಂಸ್ಕೃತಿ ಪ್ರತೀಕ. ರಾಜ್ಯದ ಕೆಲವೆಡೆ ಕರುಗಳನ್ನು ಕಸಾಯಿಖಾನೆಗೆ ಕೊಂಡೊಯ್ಯಲಾಗುತ್ತಿತ್ತು. ಈ ಸಂದರ್ಭದಲ್ಲಿ ಹೋರಾಟ ಮಾಡಿದ ಹಲವಾರು ಮಂದಿ ಕಗ್ಗೊಲೆಯಾಯಿತು. ಈ ಬಗ್ಗೆ ವಿಧಾನಸಭೆಯಲ್ಲಿ ಪ್ರಸ್ತಾಪ ಮಾಡಿದರೂ ಸಿದ್ದರಾಮಯ್ಯ ಕ್ರಮ ಕೈಗೊಳ್ಳಲಿಲ್ಲ ಎಂದು ಆರೋಪಿಸಿದರು.

ಗ್ರಾ.ಪಂ. ಸದಸ್ಯರ ಹರಾಜು ಕಾನೂನು ಬಾಹಿರ: ರಾಜ್ಯದಲ್ಲಿ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಹಲವೆಡೆ ಸ್ಥಾನಗಳ ಹರಾಜು ಹಾಕುತ್ತಿರುವುದು ಪ್ರಜಾಪ್ರಭುತ್ವ ಕಗ್ಗೊಲೆ ಮತ್ತು ಕಾನೂನು ಬಾಹಿರವಾದದ್ದು. ಹಾಗಾಗಿ ಚುನಾವಣಾ ಆಯೋಗ ಇಂತಹ ವ್ಯಕ್ತಿಗಳ ವಿರುದ್ಧ ಎಫ್‌ಐಆರ್‌ ಹಾಕಿ ಕಾನೂನು ಕ್ರಮ ಕೈಗೊಳ್ಳುವಂತೆ ಪತ್ರ ಬರೆಯಲಾಗಿದೆ ಎಂದು ಈಶ್ವರಪ್ಪ ತಿಳಿಸಿದರು.

ಚುನಾವಣೆ ಪ್ರತಿಯೊಬ್ಬರ ಹಕ್ಕು. ಯಾವುದೇ ಆಸೆ ಆಮಿಷಗಳಿಗೆ ಬಲಿಯಾಗದೇ ಜನರು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಭಾಗಿಗಳಾಗಬೇಕು ಎಂದರು.

ಕುರುಬರನ್ನು ಎಸ್‌ಟಿಗೆ ಸೇರಿಸಬೇಕು ಎಂಬುದು ಹಲವು ವರ್ಷಗಳ ಬೇಡಿಕೆಯಾಗಿದೆ. ರಾಜಕೀಯ ಇಚ್ಛಾಶಕ್ತಿಯಿಲ್ಲದೇ ಈ ಸೌಲಭ್ಯ ದೊರೆತಿಲ್ಲ. ನ್ಯಾಯಸಮ್ಮತವಾಗಿ ದೊರೆಯಬೇಕಾದ ಸೌಲಭ್ಯವಾಗಿದೆ. ಕುಲಶಾಸ್ತ್ರ ಅಧ್ಯಯನ ಮಾಡಿ ಸರ್ಕಾರ ಶಿಫಾರಸು ಮಾಡಬೇಕಾಗಿದೆ. ಬೆಸ್ತರು, ಉಪ್ಪಾರರು ಸಹ ಈ ಸೌಲಭ್ಯ ಪಡೆಯಲು ಅರ್ಹರಾಗಿದ್ದಾರೆ. ಸ್ವಾಮೀಜಿಗಳ ನೇತೃತ್ವದಲ್ಲಿ ಎಲ್ಲ ಪಕ್ಷಗಳು ಒಗ್ಗೂಡಿ ಹೋರಾಟ ಮಾಡಲಾಗುತ್ತಿದೆ ಎಂದರು.

ಸಂಗೊಳ್ಳಿ ರಾಯಣ್ಣ ಬ್ರಿಗೇಡ್‌ ಕಾರ್ಯಾಧ್ಯಕ್ಷ ಆನೇಕಲ್‌ ದೊಡ್ಡಯ್ಯ, ಮುಖಂಡರಾದ ಎಂ.ಯಂಗಾರೆಡ್ಡಿ, ಮನು, ಭಾಸ್ಕರ್‌, ಮುರಳಿ, ಹರೀಶ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT