ಭಾನುವಾರ, ಆಗಸ್ಟ್ 14, 2022
27 °C
ಇಂಗ್ಲೆಂಡ್‌ ಮೂಲದ ಕಂಪನಿಯಿಂದ ₹ 5 ಲಕ್ಷ ನೆರವು

ನಾಗರಬಾವಿ ಅಭಿವೃದ್ಧಿ ಕಾಮಗಾರಿ ವೀಕ್ಷಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ: ‘ಪರಿಸರದ ಅಭಿವೃದ್ಧಿಗೆ ಅನುಕೂಲವಾಗುವಂತಹ ಯಾವುದೇ ಕೆಲಸಕ್ಕೆ ದೊಡ್ಡ ಕಂಪನಿಗಳು ಸಾಂಸ್ಥಿಕ ಮಟ್ಟದಲ್ಲಿ ಸಹಾಯ ಮಾಡಲು ಅವಕಾಶವಿದೆ’ ಎಂದು ಐ.ಎಚ್.ಎಸ್. ಮಾರ್ಕೆಟ್ ಕಂಪನಿಯ ಸಿಎಸ್‍ಆರ್ ಸಮಿತಿ ಸದಸ್ಯ ವಿನಯ್ ತಿಳಿಸಿದರು.

ಪಟ್ಟಣದ ಇತಿಹಾಸ ಪ್ರಸಿದ್ಧ ನಾಗರಬಾವಿ ಅಭಿವೃದ್ಧಿ ಕಾಮಗಾರಿ ವೀಕ್ಷಿಸಿದ ಬಳಿಕ ಅವರು ಮಾತನಾಡಿದರು.

ಪಟ್ಟಣದ ಕಲ್ಯಾಣಿಯಾದ ನಾಗರಬಾವಿಯ ಜೀರ್ಣೋದ್ಧಾರಕ್ಕೆ ಪಟ್ಟಣದ ಮುಖಂಡರು ಶ್ರಮಿಸುತ್ತಿದ್ದಾರೆ. ಜೀರ್ಣೋದ್ಧಾರ ಸಮಿತಿಗೆ ದಾನಿಗಳ ಸಹಾಯಹಸ್ತ ಸಿಗುತ್ತಿದೆ. ಅದೇ ರೀತಿ ಐ.ಎಚ್.ಎಸ್. ಮಾರ್ಕೆಟ್ ಕಂಪನಿಯಿಂದ ₹ 5 ಲಕ್ಷ ದೇಣಿಗೆ ನೀಡಲಾಗಿತ್ತು. ಈ ಹಣವನ್ನು ದುರಸ್ತಿ ಕಾರ್ಯಕ್ಕೆ ಸದ್ವಿನಿಯೋಗ ಮಾಡಿಕೊಂಡಿದ್ದು, ಕಾಮಗಾರಿಯ ವೀಕ್ಷಣೆಗೆ ಬಂದಿದ್ದೇವೆ ಎಂದು ತಿಳಿಸಿದರು.

ನಾಗರಬಾವಿ ಅಭಿವೃದ್ಧಿಯಿಂದ ಸುತ್ತಮುತ್ತಲಿನ 400ಕ್ಕೂ ಹೆಚ್ಚು ಎಕರೆ ರೈತರ ಜಮೀನಿಗೆ ಅನುಕೂಲವಾಗಲಿದೆ. ಇಲ್ಲಿ ಸಂಗ್ರಹವಾಗುವ ನೀರಿನಿಂದ ಅಂತರ್ಜಲಮಟ್ಟ ಹೆಚ್ಚಲಿದೆ ಎಂದರು.

ಕೋಲಾರ, ಚಿಕ್ಕಬಳ್ಳಾಪುರ ಮತ್ತು ಬೆಂಗಳೂರು ಗ್ರಾಮಾಂತರ ಭಾಗದಲ್ಲಿ ಯಾವುದೇ ನದಿ ಮೂಲವಿಲ್ಲ. ಕೆರೆ, ಕಲ್ಯಾಣಿಗಳನ್ನು ಅಭಿವೃದ್ಧಿಪಡಿಸಲು ಸಹಾಯ ಮಾಡುವ ಮೂಲಕ ನೀರಾವರಿಗೆ ಅನುಕೂಲ ಮಾಡಿಕೊಟ್ಟರೆ ರೈತರಿಗೆ ಅನುಕೂಲವಾಗಲಿದೆ. ಕಂಪನಿ ಕಡೆಯಿಂದ ಇನ್ನು ಹೆಚ್ಚಿನ ಸಹಾಯ ಮಾಡಲಾಗುವುದು ಎಂದು
ಹೇಳಿದರು.

ಮುಖಂಡ ಎನ್. ರುದ್ರಮೂರ್ತಿ ಮಾತನಾಡಿ, ಸುಮಾರು ನೂರು ವರ್ಷಗಳ ಇತಿಹಾಸವುಳ್ಳ ನಾಗರಬಾವಿ ಅಭಿವೃದ್ಧಿ ಮಾಡಲು ಸುಮಾರು ಎರಡು ವರ್ಷಗಳಿಂದ ಯೋಜನೆ ರೂಪಿಸಲಾಗಿತ್ತು. ಈಗಾಗಲೇ ಮೂರು ಹಂತದ ಕಾಮಗಾರಿ ಮುಗಿದಿದೆ. ನಾಲ್ಕನೇ ಹಂತದ ಕಾಮಗಾರಿಯಲ್ಲಿ ವಾಕಿಂಗ್ ಪಾತ್ ನಿರ್ಮಾಣ ಮಾಡುತ್ತಿದ್ದು, ಇದರ ವೆಚ್ಚಕ್ಕೆ ಇಂಗ್ಲೆಂಡ್ ಮೂಲದ ಐಎಚ್‍ಎಸ್ ಮಾರ್ಕೆಟ್ ಕಂಪನಿಯು ದೇಣಿಗೆ ನೀಡಿದೆ ಎಂದು ವಿವರಿಸಿದರು.

ಐಎಚ್‍ಎಸ್ ಮಾರ್ಕೆಟ್ ಕಂಪನಿಯ ಸಿಎಸ್‍ಆರ್ ಸಮಿತಿಯ ಸದಸ್ಯ ವೆಂಕಟೇಶ್ ಮಾತನಾಡಿ, ಸಮಿತಿಯಿಂದ ಶೌಚಾಲಯ ನಿರ್ಮಾಣ, ಸ್ಕೈವಾಕಿಂಗ್, ಕಾಂಪೌಂಡ್ ಗೇಟ್ ನಿರ್ಮಾಣಕ್ಕಾಗಿ ಮನವಿ ಪತ್ರ ಬಂದಿದೆ. ಕಂಪನಿಯಲ್ಲಿ ಈ ಬಗ್ಗೆ ಚರ್ಚಿಸಿ ಸಾಧ್ಯವಾದಷ್ಟು ಅನುದಾನ ಕೊಡಿಸಲು ಪ್ರಯತ್ನಿಸುತ್ತೇವೆ ಎಂದು ತಿಳಿಸಿದರು.

ಮಹಂತಿನ ಮಠ ಧರ್ಮಸಂಸ್ಥೆ ಕಾರ್ಯದರ್ಶಿ ವಿ. ವಿಶ್ವನಾಥ್, ನಿವೃತ್ತ ಪೌರಾಯುಕ್ತ ಶಿವಕುಮಾರ್, ಮುಖಂಡರಾದ ಎಸ್. ಪುನೀತ್, ಬೇಕರಿ ಶಿವಣ್ಣ
ಉಪಸ್ಥಿತರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು