ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏಪ್ರಿಲ್‌ ನಂತರ ಮುಂದಿನ ರಾಜಕೀಯ ನಡೆ: ಜೆಡಿಎಸ್‌ ನಾಯಕ ಪಿಳ್ಳಮುನಿಶಾಮಪ್ಪ

ಜನರ ನಿರೀಕ್ಷೆಗೆ ತಕ್ಕಂತೆ ಕ್ಷೇತ್ರದ ಅಭಿವೃದ್ಧಿ ಕೆಲಸ ನಡೆಯುತ್ತಿಲ್ಲ
Last Updated 24 ಅಕ್ಟೋಬರ್ 2018, 14:21 IST
ಅಕ್ಷರ ಗಾತ್ರ

ವಿಜಯಪುರ: ‘ಜೀವನದಲ್ಲಿ ಆಸ್ತಿ, ಅಂತಸ್ತು, ಅಧಿಕಾರಿ ಮುಖ್ಯವಲ್ಲ. ಉತ್ತಮ ಕಾರ್ಯಗಳೇ ನಮ್ಮನ್ನು ಒಳ್ಳೆಯ ಹಾದಿಯತ್ತ ಕೊಂಡೊಯ್ಯುತ್ತವೆ’ ಎಂದು ಜೆಡಿಎಸ್‌ ನಾಯಕ ಪಿಳ್ಳಮುನಿಶಾಮಪ್ಪ ಅಭಿಪ್ರಾಯಪಟ್ಟರು.

ಇಲ್ಲಿನ ಚಂದೇನಹಳ್ಳಿ ಗೇಟ್‌ನಲ್ಲಿರುವ ಬಸವ ಕಲ್ಯಾಣ ಮಠಕ್ಕೆ ಧನಸಹಾಯಯಾಚಿಸಿ ಅವರು ಮಾತನಾಡಿದರು.

‘ಪರೋಪಕಾರ, ನೀತಿ, ನ್ಯಾಯ, ಧರ್ಮಗಳಿಂದ ಮಾತ್ರವೇ ಜನರ ಮನಸ್ಸಿನಲ್ಲಿ ಸ್ಥಾನಮಾನ ಗಳಿಸಲು ಸಾಧ್ಯ. ಅಧಿಕಾರದಲ್ಲಿದ್ದ 5ವರ್ಷಗಳ ಕಾಲ ಈ ಕ್ಷೇತ್ರದ ಜನರಿಗೆ ಪ್ರಾಮಾಣಿಕವಾಗಿ ಹಳ್ಳಿ ಹಳ್ಳಿಗೂ ಸೌಲಭ್ಯ ಕಲ್ಪಿಸಿಕೊಡುವಂತಹ ಕೆಲಸ ಮಾಡಿದ್ದೇನೆ’ ಎಂದರು.

ಧಾರ್ಮಿಕ ಕ್ಷೇತ್ರಗಳ ಅಭಿವೃದ್ಧಿಯಾಗುವುದರಿಂದ ಸಾಮಾಜಿಕವಾಗಿ ಜನರು ಪ್ರಜ್ಞಾವಂತರಾಗುತ್ತಾರೆ. ಮಠಗಳು ಜನರಿಗೆ ಸನ್ಮಾರ್ಗ ಬೋಧಿಸುವಂತಾಗಬೇಕು. ಕಲ್ಮಶಗಳಿಂದಲೇ ತುಂಬಿರುವ ಸಮಾಜದಲ್ಲಿ ಇಂತಹ ಮಠಗಳು, ಜಾತಿ ರಹಿತವಾದ ವಾತಾವರಣ ಉಂಟು ಮಾಡುತ್ತಿರುವುದು ಸಂತಸ ತಂದಿದೆ ಎಂದರು.

‘ಚುನಾವಣೆ ನಂತರದಲ್ಲಿ ಈ ಕ್ಷೇತ್ರದಲ್ಲಿ ನಿಮ್ಮನ್ನು ಮೂಲೆ ಗುಂಪು ಮಾಡಲಾಗುತ್ತಿದೆಯೇ ಎನ್ನುವ ಪ್ರಶ್ನೆಗೆ ಉತ್ತರಿಸಿದ ಅವರು, 5 ವರ್ಷ ಈ ಕ್ಷೇತ್ರದ ಜನರು ನನಗೆ ಶಾಸಕನಾಗಿ ಕೆಲಸ ಮಾಡಲು ಅವಕಾಶ ಮಾಡಿಕೊಟ್ಟಿದ್ದರು. ಅವರು ಕೊಟ್ಟಿದ್ದ ಅವಕಾಶ, ಅವರು ನನ್ನ ಮೇಲೆ ಇಟ್ಟಿದ್ದ ನಂಬಿಕೆಗೆ ಕಿಂಚಿತ್ತು ದ್ರೋಹ ಬಗೆಯದೆ ಎಲ್ಲ ಮುಖಂಡರ ಸಹಕಾರದಿಂದ ಸೇವೆ ಮಾಡಿದ್ದೇನೆ’ ಎಂದರು.‌

‘ಚುನಾವಣೆ ಸಮಯದಲ್ಲಿ ಕೆಲವರು ರಾಜಕೀಯವಾಗಿ ಮೂಲೆಗುಂಪು ಮಾಡಲು ಪ್ರಯತ್ನ ಮಾಡಿರಬಹುದು. ಜನರು ನನ್ನನ್ನು ಮನಸ್ಸಿನಲ್ಲಿ ಇಟ್ಟುಕೊಂಡಿರುವವರೆಗೂ ಯಾರೂ ನನ್ನನ್ನು ಮೂಲೆಗುಂಪು ಮಾಡಲು ಸಾಧ್ಯವಿಲ್ಲ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

‘ಪಕ್ಷದ ವರಿಷ್ಠರು, ಸ್ಥಳೀಯ ನಾಯಕರು ತೆಗೆದುಕೊಂಡ ತೀರ್ಮಾನಗಳಿಂದ ಮನಸ್ಸಿಗೆ ನೋವಾಗಿರುವುದು ನಿಜ. ಹಾಗಂತ ನಾನು ಪಕ್ಷಕ್ಕಾಗಲಿ, ಪಕ್ಷದಿಂದ ಸ್ಪರ್ಧಿಸಿದ್ದ ಅಭ್ಯರ್ಥಿಗಾಗಲಿ ದ್ರೋಹ ಮಾಡುವಂತಹ ಕೆಲಸ ಮಾಡಲಿಲ್ಲ’ ಎಂದರು.

‘ನನಗೆ ಕ್ಷೇತ್ರದ ಜನರ ಹಿತ ಹಾಗೂ ಪಕ್ಷದ ನಾಯಕರು ತೀರ್ಮಾನ ಗೌರವಿಸುವುದು ಮುಖ್ಯವೇ ಹೊರತು; ರಾಜಕಾರಣವಾಗಿರಲಿಲ್ಲ. ನನ್ನ ಅಧಿಕಾರಾವಧಿಯಲ್ಲಿ ಮಾಡಿದ್ದ ಅಭಿವೃದ್ಧಿ ಕೆಲಸಗಳನ್ನು ಕಂಡಿದ್ದ ಜನರು ಪುನಃ ಪಕ್ಷವನ್ನು ಆಶೀರ್ವಾದ ಮಾಡಿದ್ದಾರೆ’ ಎಂದು ತಿಳಿಸಿದರು.

‘ಮುಂದಿನ ನಿಮ್ಮ ರಾಜಕೀಯ ನಿಲುವೇನು ಎನ್ನುವ ಪ್ರಶ್ನೆಗೆ ಉತ್ತರಿಸಿದ ಅವರು, ನಾನೂ ಕ್ಷೇತ್ರದಲ್ಲಿ ಗ್ರಾಮ ಪಂಚಾಯಿತಿ ಸದಸ್ಯನಿಂದ ಶಾಸಕನಾಗುವವರೆಗೂ ದುಡಿದಿದ್ದೇನೆ’ ಎಂದರು.

‘ಕ್ಷೇತ್ರದಲ್ಲಿ ನಡೆಯುತ್ತಿರುವ ಎಲ್ಲ ವಿದ್ಯಮಾನಗಳ ಕುರಿತು ಮಾಹಿತಿ ಇದೆ. ಕ್ಷೇತ್ರಕ್ಕೆ ಬರುತ್ತಿಲ್ಲವೆನ್ನುವುದು ತಪ್ಪು. ನಿರಂತರವಾಗಿ ಜನರ ಸಂಪರ್ಕದಲ್ಲಿದ್ದೇನೆ. ನಾನು ಯಾವುದೇ ಅನ್ಯ ಪಕ್ಷಗಳ ಕಡೆಗೆ ಹೋಗಿಲ್ಲ’ ಎಂದರು.

‘ಜನರ ನಿರೀಕ್ಷೆಗೆ ತಕ್ಕಂತೆ ಕೆಲಸಗಳಾಗುತ್ತಿಲ್ಲ. ಯಾರೇ ಅಧಿಕಾರದಲ್ಲಿರಲಿ ಜನರ ಆಶಯಕ್ಕೆ ತಕ್ಕಂತೆ ಕೆಲಸ ಮಾಡಬೇಕು. ಭ್ರಷ್ಟಾಚಾರಕ್ಕೆ ಕೈ ಹಾಕಬಾರದು. ಮುಂದಿನ ಏಪ್ರಿಲ್ ತಿಂಗಳ ನಂತರ ನಿರ್ಧಾರ ಕೈಗೊಳ್ಳುತ್ತೇನೆ‘ ಎಂದರು.

ಬಸವಕಲ್ಯಾಣ ಮಠದ ಅಧ್ಯಕ್ಷ ಮಹದೇವ ಸ್ವಾಮೀಜಿ, ಮುಖಂಡ ಎಂ.ವೇಣುಗೋಪಾಲ್, ಆಸೀಪ್, ಅನಿಲ್ ಯಾದವ್, ಸುಬ್ಬಣ್ಣ, ಅನಿಸ್ ಉರ್ ರೆಹಮಾನ್, ನಂಜುಂಡಪ್ಪ, ಸುರೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT