ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೈಟೆಕ್‌ ಆಗದ ರೇಷ್ಮೆಗೂಡು ಮಾರುಕಟ್ಟೆ

ಮೂಲ ಸೌಕರ್ಯವಿಲ್ಲದೆ ಬಳಲಿದ ಜಿಲ್ಲೆಯ ಏಕೈಕ ರೇಷ್ಮೆ ಮಾರುಕಟ್ಟೆ
Last Updated 13 ಮಾರ್ಚ್ 2023, 4:10 IST
ಅಕ್ಷರ ಗಾತ್ರ

ವಿಜಯಪುರ(ದೇವನಹಳ್ಳಿ): ಪಟ್ಟಣದಲ್ಲಿರುವ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಏಕೈಕ ರೇಷ್ಮೆ ಮಾರುಕಟ್ಟೆ ಮೂಲಸೌಕರ್ಯ ಕೊರತೆಯಿಂದ ಸೊರಗಿದೆ. ಇಲ್ಲಿಗೆ ಗೂಡು ತರುವ ಸುತ್ತಲಿನ ಗ್ರಾಮೀಣ ಪ್ರದೇಶ ಹಾಗೂ ನೆರೆ ರಾಜ್ಯದ ರೈತರು ಬಳಲಿದ್ದಾರೆ.

ಕುಡಿಯುವ ನೀರಿನ ವ್ಯವಸ್ಥೆ, ಶೌಚಾಲಯ, ಕ್ಯಾಂಟೀನ್‌, ವಿಶ್ರಾಂತಿ ಕೊಠಡಿ ಸೇರಿದಂತೆ ಹಲವು ಸೌಲಭ್ಯ ಕೊರತೆಯಿಂದ ರೈತರು
ಪರದಾಡುವಂತಾಗಿದೆ.

ಜಿಲ್ಲೆಯ ನಾಲ್ಕು ತಾಲ್ಲೂಗಳಿಗೆ ಇರುವ ಏಕೈಕ ಮಾರುಕಟ್ಟೆ ಇದಾಗಿದೆ. ವಿಜಯಪುರ ರೇಷ್ಮೆಗೂಡು ಮಾರುಕಟ್ಟೆಯನ್ನು ಹೈಟೆಕ್ ಮಾರುಕಟ್ಟೆಯನ್ನಾಗಿ ಮಾಡುವ ಜನಪ್ರತಿನಿಧಿಗಳ ಭರವಸೆ ಭರವಸೆ ಆಗಿಯೇ ಉಳಿದಿದೆ.

ರೇಷ್ಮೆ ಇಲಾಖೆ ಭೂಮಿ ಮಂಜೂರಾತಿಗೆ ಅರಣ್ಯ ಇಲಾಖೆಗೆ ಕಳುಹಿಸಿರುವ ಪ್ರಸ್ತಾವಗಳು ಧೂಳು ತಿನ್ನುತ್ತಿವೆ. ಪ್ರಸ್ತುತ ಇರುವ ಮಾರುಕಟ್ಟೆಯನ್ನು ಮೇಲ್ದರ್ಜೆಗೇರಿಸಿ, ಹೊಸರೂಪ ಕೊಡಬೇಕು. ಇದರಿಂದ ಹೆಚ್ಚು ರೈತರು
ವಹಿವಾಟು ನಡೆಸುತ್ತಾರೆ.
ಸರ್ಕಾರಕ್ಕೂ ಹೆಚ್ಚಿನ ಪ್ರಮಾಣದಲ್ಲಿ ತೆರಿಗೆ ಸಂದಾಯವಾಗುತ್ತದೆ. ರೈತರಿಗೆ ಮತ್ತಷ್ಟು ಅನುಕೂಲ ಆಗುತ್ತದೆ ಎನ್ನುವುದು ಸ್ಥಳೀಯ ರೈತರ ಅಭಿಪ್ರಾಯ.

ಬದಲಾದ ಕಾಲಘಟ್ಟದಿಂದ ರೇಷ್ಮೆ ಬೆಳೆಯಿಂದ ವಿಮುಖರಾಗಿದ್ದ ರೈತರು ಮತ್ತೆ ರೇಷ್ಮ ಬೆಳೆಯತ್ತ ಮುಖ ಮಾಡಿದ್ದಾರೆ. ಇಲ್ಲಿನ ರೇಷ್ಮೆಗೂಡು ಮಾರುಕಟ್ಟೆಯನ್ನು ‘ಸಿ’ ವಲಯದಿಂದ ‘ಬಿ’ ವಲಯಕ್ಕೆ ಮೇಲ್ದರ್ಜೆಗೇರಿಸುವುದರ ಜೊತೆಗೆ ಮಾರುಕಟ್ಟೆಗೆ ಅಗತ್ಯ ಸೌಲಭ್ಯ ಕಲ್ಪಿಸಬೇಕೆಂಬುದು ರೈತರು ಆಗ್ರಹಿಸಿದ್ದಾರೆ.

ಇಲ್ಲಿನ ರೇಷ್ಮೆಗೂಡು ಮಾರುಕಟ್ಟೆಯು 1960-61ನೇ ಸಾಲಿನಲ್ಲಿ ಆರಂಭವಾಯಿತು. ಮಾರುಕಟ್ಟೆಯಲ್ಲಿ ಎರಡು ಘಟಕಗಳಿವೆ. ನಿತ್ಯ 5ರಿಂದ 10 ಟನ್ ವರೆಗೂ ರೇಷ್ಮೆಗೂಡು ವಹಿವಾಟು ನಡೆಯುತ್ತಿದೆ. ದೇವನಹಳ್ಳಿ, ಹೊಸಕೋಟೆ, ಬೆಂಗಳೂರು ಉತ್ತರ, ದೊಡ್ಡಬಳ್ಳಾಪುರ, ಬಂಗಾರಪೇಟೆ, ಮುಳಬಾಗಿಲು, ನೆಲಮಂಗಲ, ಚಿಕ್ಕಬಳ್ಳಾಪುರದ ಕಡೆಗಳಿಂದ ರೈತರು, ರೇಷ್ಮೆಗೂಡು ತೆಗೆದುಕೊಂಡು ಬರುತ್ತಾರೆ. ನೆರೆಯ ತಮಿಳುನಾಡು, ಆಂಧ್ರಪ್ರದೇಶಗಳಿಂದಲೂ ರೈತರು ಗೂಡು ತರುತ್ತಾರೆ.

ಮಾರುಕಟ್ಟೆಯಲ್ಲಿ 498 ಬಿನ್‌ಗಳನ್ನು ಹೊಂದಿದೆ. ಪ್ರತಿ ವರ್ಷ ಮಾರುಕಟ್ಟೆಯಿಂದ ₹1.19 ಕೋಟಿಗೂ ಹೆಚ್ಚು ಮಾರಾಟದ ತೆರಿಗೆಯ ಹಣ ಸರ್ಕಾರಕ್ಕೆ ಸಂದಾಯವಾಗುತ್ತಿದೆ. ಆದರೆ, ಮಾರುಕಟ್ಟೆಯನ್ನು ಮೇಲ್ದರ್ಜೆಗೇರಿಸಲು ಹಾಗೂ ಮೂಲ ಸೌಕರ್ಯ ಒದಗಿಸಲು ಸರ್ಕಾರ ನಿರ್ಲಕ್ಷ್ಯವಹಿಸಿದೆ ಎಂದು ರೈತ ಮುಖಂಡ ರಾಮಾಂಜಿನಪ್ಪ ಬೇಸರ
ವ್ಯಕ್ತಪಡಿಸಿದರು.

ತಾಲ್ಲೂಕಿನಲ್ಲಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವಾದ ನಂತರ ಈ ಭಾಗದಲ್ಲಿನ ಭೂಮಿಗೆ ಬಂಗಾರದ ಬೆಲೆ ಬಂದಿದೆ. ಆದರೂ ರೈತರು, ಭೂಮಿ ಮಾರಾಟ ಮಾಡದೇ ಕೃಷಿ, ತೋಟಗಾರಿಕೆ, ರೇಷ್ಮೆ, ಹೈನುಗಾರಿಕೆಯಿಂದಲೇ ತಮ್ಮ ಜೀವನ ಕಟ್ಟಿಕೊಂಡಿದ್ದಾರೆ. ಶೇ 60 ರಷ್ಟು ರೈತ ಕುಟುಂಬಗಳು ರೇಷ್ಮೆ ನೆಚ್ಚಿಕೊಂಡು ಜೀವನ ಸಾಗಿಸುತ್ತಿವೆ. ಹೀಗಾಗಿ ರೇಷ್ಮೆ ಮಾರುಕಟ್ಟೆಗೆ ಅಗತ್ಯ ಸೌಲಭ್ಯ ಒದಗಿಸುವ ಜತೆಗೆ ಮೇಲ್ದರ್ಜೆಗೇರಿಸಬೇಕು ಎನ್ನುವುದು ಇಲ್ಲಿನ ರೈತ ಸಮುದಾಯದ ಆಗ್ರಹ.

ಸಾಕಷ್ಟು ಮಂದಿ ರೈತರು ಸ್ವಂತ ಭೂಮಿ, ನೀರಾವರಿ ಸೌಲಭ್ಯ ಇಲ್ಲದಿದ್ದರೂ ಹಿಪ್ಪುನೇರಳೆ ಸೊಪ್ಪು ಖರೀದಿಸಿ ರೇಷ್ಮೆ ಸಾಕಾಣಿಕೆ ಮಾಡುತ್ತಿದ್ದಾರೆ. ಇವರ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗಬೇಕಾದರೆ, ಮಾರುಕಟ್ಟೆ ವ್ಯವಸ್ಥೆ ಸುಧಾರಿಸಬೇಕು ಎನ್ನುತ್ತಾರೆ ರೈತ ನಂಜುಂಡಪ್ಪ.

ಮಂಡಿ ಅನುಮತಿ ರದ್ದುಗೊಳಿಸಿ: ‘ರೇಷ್ಮೆ ಉದ್ಯಮದಿಂದ ರೈತರು ಮಾತ್ರವಲ್ಲದೆ ರೇಷ್ಮೆನೂಲು ಬಿಚ್ಚಾಣಿಕೆದಾರರು, ಸಾವಿರಾರು ಕಾರ್ಮಿಕರು ಜೀವನ ಸಾಗಿಸುತ್ತಿದ್ದಾರೆ. ಆದರೆ ರೇಷ್ಮೆಮಂಡಿ ತೆರೆಯಲು ಅವಕಾಶ ನೀಡಿರುವುದು ಮಾರುಕಟ್ಟೆಗೆ ಬರುವ ಗೂಡಿನ ಆವಕ ಪ್ರಮಾಣ ಕಡಿಮೆಯಾಗಿದೆ. ಮಂಡಿಗಳ ಮೇಲೆ ಸರ್ಕಾರಕ್ಕೆ ನಿಯಂತ್ರಣವಿಲ್ಲ. ಈ ಕಾರಣದಿಂದ ಭವಿಷ್ಯದಲ್ಲಿ ರೈತರಿಗೆ ಭಾರಿ ಹೊಡೆತ ಬೀಳಲಿದೆ. ಕೂಡಲೇ ಸರ್ಕಾರ ಮಂಡಿಗಳಿಗೆ ನೀಡಿರುವ ಅನುಮತಿ ರದ್ದುಗೊಳಿಸಬೇಕು’ ರೈತ ಮುಖಂಡ ಶಿವಣ್ಣ ಒತ್ತಾಯಿಸಿದರು.

ಪ್ರಮುಖ ಬೇಡಿಕೆಗಳು

l ಮಾರುಕಟ್ಟೆಯಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಬೇಕು.

l ಕ್ಯಾಂಟೀನ್ ವ್ಯವಸ್ಥೆ ಮಾಡಿಕೊಡಬೇಕು

l ಖಾಲಿ ಇರುವ ಹುದ್ದೆ ತುಂಬಬೇಕು.

l ಮಾರುಕಟ್ಟೆಯ ಆವರಣದಲ್ಲಿ ಕೊಳವೆಬಾವಿ ಕೊರೆಯಬೇಕು.

l ಗೂಡು ತರುವ ಮಹಿಳಾ ಮತ್ತು ಪುರುಷ ರೈತರಿಗೆ ಪ್ರತ್ಯೇಕ ವಿಶ್ರಾಂತಿ

l ಕೊಠಡಿ, ಸ್ನಾನದ ಗೃಹ ನಿರ್ಮಿಸಬೇಕು.

l ವಾಹನಗಳ ನಿಲುಗಡೆಗೆ ಪ್ರತ್ಯೇಕ ವ್ಯವಸ್ಥೆ ಮಾಡಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT