ಶನಿವಾರ, ಡಿಸೆಂಬರ್ 5, 2020
25 °C
ದೊಡ್ಡಬಳ್ಳಾಪುರ ಜಿಲ್ಲಾ ಘಟಕದ ಜೆಡಿಎಸ್ ಅಧ್ಯಕ್ಷರ ಮೇಲೆ ಆಕ್ರೋಶ

‘ಸಂಘಟನೆ ಮಾಡಿ, ಇಲ್ಲವೆ ಹೊರಡಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದೊಡ್ಡಬಳ್ಳಾಪುರ: ‘ಜಿಲ್ಲಾ ಘಟಕದ ಅಧ್ಯಕ್ಷ ಮುನೇಗೌಡರನ್ನು ನಂಬಿಕೊಂಡು ತಾಲ್ಲೂಕಿನಲ್ಲಿ ಜೆಡಿಎಸ್‌ ಪಕ್ಷ ಇಲ್ಲ. ಎಲ್ಲರನ್ನು ಒಟ್ಟುಗೂಡಿಸಿಕೊಂಡು ಪಕ್ಷ ಸಂಘಟಿಸಬೇಕು. ಇಲ್ಲವಾದರೆ ತಾಲ್ಲೂಕಿನಿಂದ ಹೊರಡಬೇಕು’ ಎಂದು ಜೆಡಿಎಸ್‌ ಮುಖಂಡ ಹರೀಶ್‌ಗೌಡ ಹೇಳಿದರು.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮುನೇಗೌಡರು ಪಕ್ಷ ಸಂಘಟನೆ ಮಾಡುವ ಕಾರ್ಯಕರ್ತರಿಗಿಂತಲೂ ಮುನೇಗೌಡರ ಪರವಾಗಿ ಮಾತನಾಡುವ ವ್ಯಕ್ತಿಗಳಿಗೆ ಪ್ರಥಮ ಆದ್ಯತೆ ನೀಡುತ್ತಿದ್ದಾರೆ. ಹಿರಿಯ ರಾಜಕಾರಣಿ ಆರ್‌.ಎಲ್‌.ಜಾಲಪ್ಪ ಅವರನ್ನು ಎದುರು ಹಾಕಿಕೊಂಡು ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷ ಸಂಘಟಿಸಿಕೊಂಡು ಬಂದಿರುವ ಅಪ್ಪಯ್ಯಣ್ಣ ಅವರ ವಿರುದ್ಧ ಭಿನ್ನಮತದ ಆರೋಪ ಮಾಡುತ್ತಿದ್ದಾರೆ. ಆದರೆ 2013ರ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಮುನೇಗೌಡ ಅವರು ಕುಮಾರಸ್ವಾಮಿ ಅವರ ವಿರುದ್ಧ ‘ಹೆವಿ ಡೀಲಿಂಗ್‌ ಮಾಸ್ಟರ್‌’ ಎಂದು ಮಾಧ್ಯಮಗಳಿಗೆ ನೀಡಿದ ಹೇಳಿಕೆಯಿಂದಾಗಿಯೇ ರಾಜ್ಯದಲ್ಲಿ ನಮ್ಮ ಪಕ್ಷ ಕಡಿಮೆ ಸ್ಥಾನಗಳಲ್ಲಿ ಜಯಗಳಿಸುವಂತಾಯಿತು. ಪಕ್ಷ ವಿರೋಧಿ ಚಟುವಟಿಕೆ ಮಾಡುತ್ತಿರುವವರೇ ಮುನೇಗೌಡ’ ಎಂದು ದೂರಿದರು.

‘ಜಿಲ್ಲಾ, ತಾಲ್ಲೂಕು ಪಂಚಾಯಿತಿ ಸ್ಥಾನದಿಂದ ಎಲ್ಲಾ ಅಧಿಕಾರಗಳು ಮುನೇಗೌಡರ ಕುಟುಂಬಕ್ಕೇ ನೀಡಿದರೆ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡಿರುವ ಕಾರ್ಯಕರ್ತರಿಗೆ ಯಾವ ಅಧಿಕಾರ ನೀಡಲು ಸಾಧ್ಯ’ ಎಂದು ಪ್ರಶ್ನಿಸಿದ ಅವರು, ‘ಜೆಡಿಎಸ್‌ ಪಕ್ಷಕ್ಕೆ ಕ್ಷೇತ್ರದಲ್ಲಿ ಮುನೇಗೌಡರಿಂದ ಆಗುತ್ತಿರುವ ತೊಂದರೆಗಳ ಕುರಿತಂತೆ ಪಕ್ಷದ ವರಿಷ್ಠರಿಗೆ ಪತ್ರ ಬರೆಯುವ ಮೂಲಕ ಮನವರಿಕೆ ಮಾಡಿಕೊಡಲಾಗುವುದು’ ಎಂದರು.

ಜೆಡಿಎಸ್‌ ಹಿರಿಯ ಮುಖಂಡ ಟಿ.ಎನ್‌.ಪ್ರಭುದೇವ್‌ ಮಾತನಾಡಿ, ‘ತಾಲ್ಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ಚುನಾವಣೆಯಲ್ಲಿ ಮುನೇಗೌಡರ ಪ್ರತಿಷ್ಠೆಯಿಂದಾಗಿ ಅಧಿಕಾರ ನಮ್ಮ ಪಕ್ಷದ ಕೈ ತಪ್ಪಲು ಕಾರಣವಾಗಿದೆ. ಪಕ್ಷದ ಎಲ್ಲಾ ಹಿರಿಯರು ಕಹಿ ಘಟನೆಗಳನ್ನು ಮರೆತು ಪಕ್ಷ ಸಂಘಟನೆಯಲ್ಲಿ ಎಲ್ಲರು ಒಟ್ಟಾಗಿ ಕೆಲಸಮಾಡಬೇಕು. ಮುಂದಿನ ಎಲ್ಲಾ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಸಹಕಾರಿಯಾಗಲಿದೆ’ ಎಂದರು.

ಜಿಲ್ಲಾ ಪಂಚಾಯಿತಿ ಸದಸ್ಯ ಎಚ್‌.ಅಪ್ಪಯ್ಯ ಮಾತನಾಡಿ, ‘ಹೊರಗಿನಿಂದ ನಮ್ಮ ತಾಲ್ಲೂಕಿಗೆ ಬಂದು ದರ್ಪ ತೋರಿಸುವುದನ್ನು ನಿಲ್ಲಿಸಬೇಕು. ಕ್ಷೇತ್ರದ ಜೆಡಿಎಸ್‌ ಪಕ್ಷದಲ್ಲಿ ಭಿನ್ನಮತ ಹುಟ್ಟು ಹಾಕಿದ್ದೇ ಮುನೇಗೌಡರು’ ಎಂದರು.

ಟಿಎಪಿಎಂಸಿಎಸ್‌ ನೂತನ ನಿರ್ದೇಶಕ ಟಿ.ವಿ.ಲಕ್ಷ್ಮೀನಾರಾಯಣ್‌ ಮಾತನಾಡಿ, ‘ತಾಲ್ಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ನಿರ್ದೇಶಕ ಆಯ್ಕೆಗೆ ಇಡೀ ತಾಲ್ಲೂಕಿನ ಎಲ್ಲಾ ಗ್ರಾಮದವರು ಮತ ಚಲಾವಣೆ ಮಾಡುವುದರಿಂದ ಗೊಂದಲವಾಗುತ್ತಿದೆ. ಮುಂದಿನ ಚುನಾವಣೆ ವೇಳೆಗೆ ಕ್ಷೇತ್ರಗಳನ್ನು ವಿಂಗಡಣೆ ಮಾಡಲಾಗುವುದು. ಬಿಜೆಪಿ-ಜೆಡಿಎಸ್‌ ಹೊಂದಾಣಿಕೆಯಲ್ಲಿ ಸ್ಪರ್ಧಿಸಿ ಸೋತಿರುವ ಅಭ್ಯರ್ಥಿಗಳು ಅತ್ಯಂತ ಕಡಿಮೆ ಮತಗಳಿಂದ ಸೋತಿದ್ದಾರೆ. ಇದನ್ನು ಸೋಲು ಅನ್ನಲು ಸಾಧ್ಯವಿಲ್ಲ’ ಎಂದರು.

ಇದೇ ಸಂದರ್ಭದಲ್ಲಿ ನೂತನ ನಿರ್ದೇಶಕ ಕೊನಘಟ್ಟ ಆನಂದ್‌ ಅವರನ್ನು ಅಭಿನಂದಿಸಲಾಯಿತು. ಮುಖಂಡ
ರಾದ ರಾ.ಬೈರೇಗೌಡ, ಅಶ್ವತ್ಥನಾರಾ
ಯಣ, ತಳವಾರ್‌ ನಾಗರಾಜ್‌, ರಂಗಪ್ಪ, ಚಂದ್ರಶೇಖರ್‌, ಕುಂಟನ
ಹಳ್ಳಿ ಮಂಜುನಾಥ್‌ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು