ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೊಡ್ಡಬಳ್ಳಾಪುರ: 600 ಎಕರೆ ಭೂ ಸ್ವಾಧೀನಕ್ಕೆ ಅಧಿಕೃತ ಅಧಿಸೂಚನೆಯೊಂದೇ ಬಾಕಿ?

ಹುಲಿಕುಂಟೆಯಲ್ಲಿ ಮಲ್ಟಿ ಮಾಡಲ್‌ ಲಾಜಿಸ್ಟಿಕ್‌ ಪಾರ್ಕ್‌ ವಿರೋಧಿಸಿ ರೈತರ ಪ್ರತಿಭಟನೆ
Last Updated 3 ಫೆಬ್ರುವರಿ 2021, 2:41 IST
ಅಕ್ಷರ ಗಾತ್ರ

ದೊಡ್ಡಬಳ್ಳಾಪುರ: ತಾಲ್ಲೂಕಿನ ದೊಡ್ಡಬೆಳವಂಗಲ ಹೋಬಳಿ ಹುಲುಕುಂಟೆ ಬಳಿ ಮಲ್ಟಿ ಮಾಡಲ್‌ ಲಾಜಿಸ್ಟಿಕ್‌ ಪಾರ್ಕ್‌ ಸ್ಥಾಪನೆ ಮಾಡಲು 600ಎಕರೆ ಭೂ ಸ್ವಾಧೀನಕ್ಕೆ ಕೆ.ಐ.ಡಿ.ಬಿ ವತಿಯಿಂದ ಸರ್ವೇ ನಂಬರ್‌ಗಳ ಸಮೇತ ನೀಲನಕ್ಷೆ ಸೇರಿದಂತೆ ಎಲ್ಲ ಸಿದ್ಧತೆ ನಡೆದಿದ್ದು ಅಧಿಕೃತ ಪತ್ರಿಕಾ ಪ್ರಕಟಣೆಗೆ ದಿನಗಣನೆ ಆರಂಭವಾಗಿದೆ. ಭೂಸ್ವಾಧೀನದ ವಿರೋಧಿಸಿ ಫೆ.4ರಂದು ರೈತರು ಹುಲಿಕುಂಟೆಯಲ್ಲಿ ಬೃಹತ್‌ ಪ್ರತಿಭಟನೆ ನಡೆಸುತ್ತಿದ್ದಾರೆ.

ನೆಲಮಂಗಲ ತಾಲ್ಲೂಕಿನ ಓಬಳಾಪುರ ಹಾಗೂ ಹುಲಿಕುಂಟೆ ವ್ಯಾಪ್ತಿಯ 1,150 ಎಕರೆ ಪ್ರದೇಶದಲ್ಲಿ ‘ಮಲ್ಟಿ ಮಾಡಲ್‌ ಲಾಜಿಸ್ಟಿಕ್‌ ಪಾರ್ಕ್‌’ (ಎಂಎಂಎಲ್‌ಪಿ) ಸ್ಥಾಪನೆಯಾಗುತ್ತಿದೆ. ನೆಲಮಂಗಲ ತಾಲ್ಲೂಕಿನ ಓಬಳಾಪುರ ಕೈಗಾರಿಕಾ ಪ್ರದೇಶದಲ್ಲಿ 550 ಎಕರೆ ಭೂ ಸ್ವಾಧೀನಕ್ಕೆ ಈಗಾಗಲೇ ಅಧಿಕೃತವಾಗಿ ಪತ್ರಿಕಾ ಪ್ರಕಟಣೆ ಮಾಡಲಾಗಿದೆ. ನೆಲಮಂಗಲ ತಾಲ್ಲೂಕಿಗೆ ಹೊಂದಿಕೊಂಡಂತೆ ಇರುವ ತುಮಕೂರು-ದಾಬಸ್‌ಪೇಟೆ ಹೆದ್ದಾರಿ ಬದಿಯಲ್ಲಿ ತಾಲ್ಲೂಕಿನ ಹುಲಿಕುಂಟೆ ಕೈಗಾರಿಕಾ ಪ್ರದೇಶದಲ್ಲಿ 600 ಎಕರೆ ಗುರುತಿಸ
ಲಾಗಿದೆ.

ಪಾರ್ಕ್‌ ಸ್ಥಾಪನೆ ಮಾಡಲು ಉದ್ದೇಶಿಸಿರುವ ಓಬಳಾಪುರ ಹಾಗೂ ಹುಲಿಕುಂಟೆ ಭಾಗದಲ್ಲಿ ಬಹುತೇಕ ಸಣ್ಣ ಹಿಡಿವಣಿದಾರ ರೈತರ ಸಂಖ್ಯೆಯೇ ಹೆಚ್ಚಾಗಿದೆ. ಅಲ್ಲದೆ, ಸಾಕಷ್ಟು ಸಂಖ್ಯೆ ರೈತರು ಕೊಳವೆಬಾವಿ ಕೊರೆಸಿಕೊಂಡು ನೀವಾರಿ ಸೌಲಭ್ಯದೊಂದಿಗೆ ಅಡಿಕೆ, ತೆಂಗು, ಬಾಳೆ ಸೇರಿದಂತೆ ತರಕಾರಿ ಬೆಳೆ ಬೆಳೆಯುವ ಮೂಲಕ ಜೀವನ ನಡೆಸುತ್ತಿದ್ದಾರೆ. ಸಣ್ಣ ಹಿಡುವಳಿದಾರ ರೈತರು ಹೈನುಗಾರಿಕೆ ಹಾಗೂ ಕುರಿ, ಮೇಕೆ ಸಾಕುವ ಮೂಲಕ ಬದುಕು ಕಟ್ಟಿಕೊಂಡಿದ್ದಾರೆ.

ಹೀಗಾಗಿ ಇಲ್ಲಿನ ಭೂಮಿ ಪಾರ್ಕ್‌ ಸ್ಥಾಪನೆಗೆ ಸ್ವಾಧೀನ ಮಾಡಿಕೊಳ್ಳುವುದರಿಂದ ಸಾವಿರಾರು ಕುಟುಂಬಗಳ ಬದುಕು ಬೀದಿಗೆ ಬೀಳಲಿದೆ. ಯಾವುದೇ ಭೂಮಿ ಸರ್ಕಾರ ಸ್ವಾಧೀನ ಮಾಡಿಕೊಳ್ಳುವ ಮುನ್ನ ಸ್ವಾಧೀನಕ್ಕೆ ಒಳಪಡುತ್ತಿರುವ ಪ್ರದೇಶದಲ್ಲಿ ಜನರ ಸಾಮಾಜಿಕ, ಆರ್ಥಿಕ ಸಮೀಕ್ಷೆ ನಡೆಸಬೇಕು. ಈ ಸಮೀಕ್ಷೆ ಆಧಾರದ ಮೇಲೆ ಭೂಸ್ವಾಧಿನದ ನಿರ್ಧಾರ ಕೈಗೊಳ್ಳಬೇಕು ಎನ್ನುವ ವಾದ ಇಲ್ಲಿನರೈತರದ್ದು.

ಲಾಕ್‌ಡೌನ್‌ ಸಂದರ್ಭಕ್ಕೂ ಮುನ್ನವೇ ಈ ಭಾಗದಲ್ಲಿ ಲಾಜಿಸ್ಟಿಕ್‌ ಪಾರ್ಕ್‌ ಸ್ಥಾಪನೆಗೆ ಒಳಪಡುವ ಸರ್ವೇ ನಂಬರ್‌ ಒಳಗೊಂಡ ನೀಲನಕ್ಷೆ ಕೆ.ಐ.ಡಿ.ಬಿ ವತಿಯಿಂದ ತಮಗೆ ಬೇಕಾದವರಿಗಷ್ಟೇ ನೀಡಿದ್ದಾರೆ. ಇದರ ಆಧಾರದ ಮೇಲೆ ಶ್ರೀಮಂತರು, ಪ್ರಭಾವಿ ರಾಜಕಾರಣಿಗಳು ಸಣ್ಣ ಹಿಡುವಳಿದಾರರಿಂದ ಲಾಕ್‌ಡೌನ್‌ ಸಂದರ್ಭದಲ್ಲಿ ಅತ್ಯಂತ ಕಡಿಮೆ ಬೆಲೆಗೆ ಜಮೀನು ಖರೀದಿ ಮಾಡಿದ್ದಾರೆ.

ಲಾಭದ ಉದ್ದೇಶದಿಂದಲೇ ಜಮೀನು ಖರೀದಿಸಿರುವವರು ಹೆಚ್ಚಿನ ಬೆಲೆ ಪಡೆದು ಪಾರ್ಕ್‌ ಸ್ಥಾಪನೆಗೆ ಜಮೀನು ನೀಡಲು ಸಿದ್ಧ ಎನ್ನುತ್ತಿದ್ದಾರೆ ಎಂದು ಆರೋಪಿಸಿರುವ ಹುಲಿಕುಂಟೆ ಕೃಷಿ ಭೂರಕ್ಷಣಾ ಸಮಿತಿ ಸದಸ್ಯರು, ಭೂಮಿಯನ್ನೇ ನಂಬಿ ಜೀವನ ನಡೆಸುತ್ತಿರುವ ರೈತರು ಮಾತ್ರ ಭೂಮಿ ಉಳಿಸಿಕೊಳ್ಳಲು ಹೋರಾಟ ನಡೆಸುವಂತಾಗಿದೆ ಎಂದು ಆಳಲು ತೋಡಿಕೊಂಡಿದ್ದಾರೆ.

ನಮಗೆ ದುಬಾರಿ ಬೆಲೆ ಅಲ್ಲ; ಭೂಮಿ ಬೇಕು: ಭೂ ಸ್ವಾಧೀನದ ವಿರುದ್ಧ ಹೋರಾಟ ನಡೆಸುತ್ತಿರುವ ರೈತರು ಪಾರ್ಕ್‌ ಸ್ಥಾಪನೆಗೆ ಭೂಮಿ ನೀಡಲು ಸಿದ್ಧರಿದ್ದಾರೆ. ಆದರೆ, ಹೆಚ್ಚಿನ ಬೆಲೆ ನೀಡಲಿ ಎನ್ನುವ ಉದ್ದೇಶದಿಂದ ಹೋರಾಟ ನಡೆಸುತ್ತಿದ್ದಾರೆ ಎನ್ನುವ ಸುಳ್ಳು ಸುದ್ದಿ ಹರಡುತ್ತಿದ್ದಾರೆ. ನಮ್ಮ ಹಿರಿಯರು ಸಂಪಾದನೆ ಮಾಡಿರುವ ಭೂಮಿ ನಮ್ಮ ಮಕ್ಕಳಿಗೂ ಉಳಿಸಿಕೊಟ್ಟು ಹೋಗಬೇಕು ಎನ್ನುವ ಪ್ರಾಮಾಣಿಕ ಹೋರಾಟ ನಮ್ಮದು. ಹಣದ ಆಸೆಗಾಗಿ ನಡೆಸುತ್ತಿರುವ ಹೋರಾಟ ನಮ್ಮದಲ್ಲ. ಭೂಸ್ವಾಧೀನದ ವಿರುದ್ಧ ನ್ಯಾಯಾ
ಲಯದಲ್ಲೂ ಪ್ರಶ್ನೆ ಮಾಡಲಾಗುವುದು ಎಂದು ಕೃಷಿ ಭೂಮಿ ಹೋರಾಟ ಸಮಿತಿ ಮುಖಂಡರು ತಿಳಿಸಿದ್ದಾರೆ.

ಈ ಕೈಗಾರಿಕೆ ಅಗತ್ಯವಿತ್ತ ? : ತಾಲ್ಲೂಕಿನ ಬಾಶೆಟ್ಟಿಹಳ್ಳಿಯಲ್ಲಿ 80ರ ದಶಕದಲ್ಲಿ ಆರಂಭವಾದ ಕೈಗಾರಿಕಾ ಪ್ರದೇಶ ನಾಲ್ಕು ಬಾರಿ ವಿಸ್ತರಣೆಯಾಗಿ ಈಗ ಸುಮಾರು 2,500 ಎಕರೆಗೆ ಬಂದು ನಿಂತಿದೆ. ಹಾಗೆಯೇ ಹುಲಿಕುಂಟೆ ಗಡಿ ಭಾಗಕ್ಕೆ ಹೊಂದಿಕೊಂಡಂತೆಯೇ ನೆಲ
ಮಂಗಲ ತಾಲ್ಲೂಕಿನ ದಾಬಸ್‌ಪೇಟೆ, ಶಿವಗಂಗೆ ಸಮೀಪ ಸುಮಾರು 1,500 ಎಕರೆ ಪ್ರದೇಶದಲ್ಲಿ ಕೈಗಾರಿಕೆ ಸ್ಥಾಪನೆಯಾಗಿದೆ.

ಈ ಇಷ್ಟೂ ಪ್ರದೇಶದಲ್ಲೂ ಭೂಸ್ವಾಧೀನವಾಗಿ ದಶಕಗಳು ಕಳೆದಿದ್ದರೂ ಇನ್ನು ಪೂರ್ಣಪ್ರಮಾಣದಲ್ಲಿ ಕೈಗಾರಿಕೆಗಳು ಕಾರ್ಯಾರಂಭ ಮಾಡದೆ ಜಮೀನು ಖಾಲಿಯಾಗಿಯೇ ಉಳಿದಿದೆ.

ವಾಸ್ತವ ಸ್ಥಿತಿ ಹೀಗಿರುವಾಗ ತಾಲ್ಲೂಕಿಗೆ ಮತ್ತೊಂದು ಕೈಗಾರಿಕಾ ಪ್ರದೇಶ ಸ್ಥಾಪನೆ ಅಗತ್ಯ ಇತ್ತ ಎನ್ನುವ ಪ್ರಶ್ನೆ ಈಗ ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT