ಹೊಸಕೋಟೆ: ತಾಲ್ಲೂಕಿನ ದೇವನಗುಂದಿ ಸುತ್ತಮುತ್ತಲ ಗ್ರಾಮಗಳಲ್ಲಿ ರೈತರು ಕೊರೆಸಿದ ಕೊಳವೆಬಾವಿಗಳಲ್ಲಿ ಪೆಟ್ರೋಲ್ ಮಿಶ್ರಿತ ನೀರು ಬರುತ್ತಿರುವ ಹಿನ್ನೆಲೆಯಲ್ಲಿ ತಹಶೀಲ್ದಾರ್ ಗೀತಾ ಅವರು ಹಿಂದೂಸ್ಥಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್‌ನ ಘಟಕಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ರೈತರು ನೀಡಿರುವ ದೂರಿನ ಬಗ್ಗೆ ಪರಿಶೀಲಿಸಲಾಗಿದೆ. ಪೆಟ್ರೋಲಿಯಂ ಪದಾರ್ಥಗಳು ಹೇಗೆ ಅಂತರ್ಜಲ ಸೇರುತ್ತಿದೆ ಎಂಬುದು ತಿಳಿಯುತ್ತಿಲ್ಲ. ಆದರೆ, ಈಗಾಗಲೇ ಸಂಸ್ಕರಣಾ ಘಟಕದ ಸುತ್ತ ಮುತ್ತ ಸುಮಾರು 500 ರಿಂದ 600 ಮೀಟರ್ ವ್ಯಾಪ್ತಿಯಲ್ಲಿ ಕೊರೆದಿರುವ ಕೊಳವೆಬಾವಿಗಳಲ್ಲಿ ಪೆಟ್ರೋಲ್ ಮಿಶ್ರಿತ ನೀರು ಕಂಡುಬಂದಿದೆ. ಮುಂದಿನ ದಿನಗಳಲ್ಲಿ ಸಮಸ್ಯೆ ಹೆಚ್ಚಾಗಬಾರದೆಂದು ಪರಿಶೀಲಿಸಲಾಗಿದೆ ಎಂದರು.
ಈ ಬಗ್ಗೆ ಅಧಿಕಾರಿಗಳೊಂದಿಗೆ ಮಾತನಾಡಿದ್ದು ಸಂಪೂರ್ಣ ಮಾಹಿತಿ ನೀಡುವಂತೆ ತಿಳಿಸಲಾಗಿದೆ. ಬಾವಿಗಳ ನೀರನ್ನು ಮಾಲಿನ್ಯ ನಿಯಂತ್ರಣ ಮಂಡಳಿಗೆ ಪರೀಕ್ಷಿಸಲು ಕಳುಹಿಸಲಾಗಿದೆ. 15 ದಿನಗಳಲ್ಲಿ ವರದಿ ಬರಲಿದ್ದು, ಆನಂತರ ಮುಂದಿನ ಕ್ರಮದ ಬಗ್ಗೆ ಯೋಜಿಸಲಾಗುತ್ತದೆ ಎಂದು ವಿವರಿಸಿದರು.
ಎಚ್‌ಪಿಸಿಎಲ್ ಅಧಿಕಾರಿ ಗೊವಿಂದರಾಜು ಪ್ರತಿಕ್ರಿಯಿಸಿ, ಸಂಸ್ಥೆಯಿಂದ ಯಾವುದೇ ಪೆಟ್ರೋಲಿಯಂ ಪದಾರ್ಥಗಳು ಸೋರಿಕೆಯಾಗಿ ಅಂತರ್ಜಲ ಸೇರಿರುವ ಸಾದ್ಯತೆ ಇಲ್ಲ. ಆದರೂ, ಈ ಭಾಗದ ಸುತ್ತ ಮುತ್ತ ಕೊಳವೆಬಾವಿಯಲ್ಲಿ ಪೆಟ್ರೋಲ್ ಅಂಶ ಕಂಡು ಬಂದಿದೆ. ಈ ಬಗ್ಗೆ ಮಾಲಿನ್ಯ ನಿಯಂತ್ರಣ ಮಂಡಳಿ ವರದಿ ಬಂದ ನಂತರವೇ ತಿಳಿಯುತ್ತದೆ ಎಂದರು.
ಕಂದಾಯಾಧಿಕಾರಿ ಶೇಷಾಚಲ, ಮಂಜುನಾಥ್ ಹಾಗೂ ವಿವಿಧ ಅಧಿಕಾರಿಗಳು ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.