ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಫೇಲೆಂಬುದು ವಿದ್ಯಾರ್ಥಿ ಜೀವನದ ಅಲ್ಪವಿರಾಮ’

‘ಅನುತ್ತೀರ್ಣ ವಿದ್ಯಾರ್ಥಿಗಳು ಆತ್ಮ ವಿಶ್ವಾಸದಿಂದ ಮತ್ತೊಮ್ಮೆ ಪರೀಕ್ಷೆ ಎದುರಿಸಿ: ಸಿಇಒ ಲತಾ
Last Updated 2 ಮೇ 2019, 13:52 IST
ಅಕ್ಷರ ಗಾತ್ರ

ದೇವನಹಳ್ಳಿ:ಅನುತ್ತೀರ್ಣರಾಗಿರುವ ವಿದ್ಯಾರ್ಥಿಗಳುಯಾವುದೇ ರೀತಿಯಿಂದ ಧೃತಿಗೆಡಬಾರದು. ‌ಆತ್ಮ ವಿಶ್ವಾಸದಿಂದ ಮತ್ತೊಮ್ಮೆ ಪರೀಕ್ಷೆ ಬರೆದು ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಜಿಲ್ಲಾ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆರ್.ಲತಾ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಬೆಂಗಳೂರು ಗ್ರಾಮಾಂತರ ಜಿಲ್ಲೆ 2018–19ನೇ ಸಾಲಿನ 10ನೇ ತರಗತಿ ವಾರ್ಷಿಕ ಫಲಿತಾಂಶ ಉತ್ತಮವಾಗಿ ಮೂಡಿಬಂದಿದೆ. ಇದಕ್ಕೆ ಕಾರಣರಾದ ಶಿಕ್ಷಕ ವೃಂದಕ್ಕೆ ಅಭಿನಂದನೆ ಸಲ್ಲಿಸಿ ಅವರು ಮಾತನಾಡಿದರು.

‘ರಾಜ್ಯ ಮಟ್ಟದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆ 3ನೇ ಸ್ಥಾನ ಪಡೆದಿರುವುದು ಸಂತಸ ತಂದಿದೆ. ಜಿಲ್ಲೆಯಿಂದ 12,166 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಈ ಪೈಕಿ 10,763 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು ಶೇ 88.34ರಷ್ಟು ಫಲಿತಾಂಶ ದಾಖಲಾಗಿದೆ. 2017–18ನೇ ಸಾಲಿನಲ್ಲಿ 11,935 ವಿದ್ಯಾರ್ಥಿಗಳ ಪೈಕಿ 9,807 ವಿದ್ಯಾರ್ಥಿಗಳು ತೇರ್ಗಡೆಯಾಗುವ ಮೂಲಕ ಶೇ 82.17ರಷ್ಟು ಫಲಿತಾಂಶದಿಂದ ರಾಜ್ಯ ಮಟ್ಟದಲ್ಲಿ 14ನೇ ಸ್ಥಾನ ಪಡೆದಿತ್ತು’ ಎಂದು ಹೇಳಿದರು.

‘ಈ ಬಾರಿ 10ನೇ ತರಗತಿ ಪರೀಕ್ಷೆಯಲ್ಲಿ ನವ್ಯ ಮತ್ತು ನಾಗೇಂದ್ರ ಎಂಬ ವಿದ್ಯಾರ್ಥಿಗಳು 625ಕ್ಕೆ 619 ಅಂಕಗಳಿಸಿ ಸಮವಾಗಿ ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ. ದೇವನಹಳ್ಳಿ ಶೇ 93.30, ದೊಡ್ಡಬಳ್ಳಾಪುರ ಶೇ.79.69, ಹೊಸಕೋಟೆ ಶೇ89.6, ನೆಲಮಂಗಲ ಶೇ92.15 ರಷ್ಟು ಫಲಿತಾಂಶ ಗಳಿಸಿದೆ’ ಎಂದು ತಿಳಿಸಿದರು.

‘ಈ ಹಿಂದೆ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಕೃಷ್ಣಭೈರೇಗೌಡ ಅವರ ನಿರ್ದೇಶನದ ಮೇರೆಗೆ ಜಿಲ್ಲಾ ಪಂಚಾಯಿತಿ ಅಧಿಕಾರಿಗಳು, ಸಾರ್ವಜನಿಕ ಶಿಕ್ಷಣ ಇಲಾಖೆ, ಜಿಲ್ಲಾಧಿಕಾರಿ, ವಿವಿಧ ಅಧಿಕಾರಿಗಳ ತಂಡದ ನೇತೃತ್ವದಲ್ಲಿ ಪರೀಕ್ಷಾ ಫಲಿತಾಂಶ ಸುಧಾರಣಾ ಸಮಿತಿ ರಚಿಸಿ ಕಲಿಕೆಯಲ್ಲಿ ಹಿಂದುಳಿದಿದ್ದ ವಿದ್ಯಾರ್ಥಿಗಳನ್ನು ಗುರುತಿಸಿ ವಿಷಯವಾರು ತಜ್ಞ ಶಿಕ್ಷಕರನ್ನು ಬೋಧನೆಗೆ ನೇಮಕ ಮಾಡಲಾಗಿತ್ತು’ ಎಂದು ಹೇಳಿದರು.

‘ಜಿಲ್ಲೆಯಲ್ಲಿ ಪರೀಕ್ಷೆ ಬರೆದ 6,098 ವಿದ್ಯಾರ್ಥಿನಿಯರ ಪೈಕಿ 5514 ಮಂದಿ ತೇರ್ಗಡೆಯಾಗಿದ್ದು ಶೇ 90.42 ಫಲಿತಾಂಶ ಬಂದಿದೆ. ಕಳೆದ ಬಾರಿಗಿಂತ ಈ ಬಾರಿ ಶೇ 5.75 ರಷ್ಟು ಏರಿಕೆಯಾಗಿದೆ. 6068 ಬಾಲಕರ ಪೈಕಿ 5249 ಉತ್ತೀರ್ಣರಾಗಿದ್ದು ಶೇ 5.77ರಷ್ಟು ಏರಿಕೆಯಾಗಿದೆ. ಸರ್ಕಾರಿ ಪ್ರೌಢ ಶಾಲೆಗಳಲ್ಲಿ ಕಳೆದ ವರ್ಷ ಶೇ 78.05 ರಷ್ಟು ಫಲಿತಾಂಶ ಬಂದಿತ್ತು. ಈ ಬಾರಿ ಶೇ 86.26 ರಷ್ಟು ಬಂದಿದ್ದು ಶೇ 8.21 ರಷ್ಟು ಏರಿಕೆಯಾಗಿದೆ. ಅನುದಾನಿತ ಶಾಲೆಗಳ ಫಲಿತಾಂಶ ಶೇ 82.47ರಷ್ಟು ಇದ್ದರೆ ಅನುದಾನಿತ ಪ್ರೌಢ ಶಾಲೆಗಳು ಶೇ.92.19 ರಷ್ಟು ಫಲಿತಾಂಶ ಪಡೆದಿವೆ. ಕಳೆದ ವರ್ಷಕ್ಕಿಂತ ಶೇ 0.9 ರಷ್ಟು ಮಾತ್ರ ಏರಿಕೆಯಾಗಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ಜಿಲ್ಲೆಯಲ್ಲಿ ಕಳೆದ ವರ್ಷ 29 ಪ್ರೌಢ ಶಾಲೆಗಳು ಮಾತ್ರ ಶೇ 100 ರಷ್ಟು ಫಲಿತಾಂಶ ಪಡೆದಿದ್ದವು. ಈ ಬಾರಿ 65 ಶಾಲೆಗಳು ಶೇ 100 ರಷ್ಟು ಫಲಿತಾಂಶದ ಸಾಧನೆ ಮಾಡಿವೆ. ಜಿಲ್ಲೆಯಲ್ಲಿ ಗುರುತಿಸಿದ್ದ ಕಲಿಕೆಯಲ್ಲಿ ಹಿಂದುಳಿದ 1984 ವಿದ್ಯಾರ್ಥಿಗಳ ಪೈಕಿ 1380 ಮಂದಿ ತೇರ್ಗಡೆಯಾಗಿದ್ದು ಶೇ 70ರಷ್ಟು ಫಲಿತಾಂಶ ಬಂದಿದೆ. ಈ ಪೈಕಿ ವಿಶ್ವನಾಥಪುರ ಪ್ರೌಢಶಾಲೆಯ ನಿತಿನ್ ಕುಮಾರ್ 516 (ಶೇ.82.5), ಅರಳು ಮಲ್ಲಿಗೆ ಪ್ರೌಢ ಶಾಲೆಯ ಹರ್ಷ 505 (ಶೇ.80.08), ಸಾದಹಳ್ಳಿ ಪ್ರೌಢಶಾಲೆಯ ಶೇಷಾದ್ರಿ 489 (ಶೇ78.24) ಅಂಕ ಪಡೆದಿರುವುದು ಹೆಮ್ಮೆಯ ವಿಷಯವಾಗಿದೆ’ ಎಂದು ತಿಳಿಸಿದರು.

‘ಕಳೆದ ವರ್ಷ ಪರಿಶಿಷ್ಟ ಜಾತಿ ವಿದ್ಯಾರ್ಥಿಗಳು ಶೇ 78.04ರಷ್ಟು ಫಲಿತಾಂಶ ಪಡೆದಿದ್ದರು. ಈ ಬಾರಿ ಶೇ 87.45 ರಷ್ಟು ಪಡೆದಿದ್ದು ಶೇ 9.40 ರಷ್ಟು ಏರಿಕೆಯಾಗಿದೆ. ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳ ಪೈಕಿ ಕಳೆದ ವರ್ಷ ಶೇ 81.69ರಷ್ಟಿದ್ದ ಫಲಿತಾಂಶ, ಈ ಬಾರಿ ಶೇ 88.73 ಬಂದಿದ್ದು ಶೇ 7ರಷ್ಟು ಏರಿಕೆಯಾಗಿದೆ. ಇತರೆ ವರ್ಗದ ವಿದ್ಯಾರ್ಥಿಗಳು ಕಳೆದ ವರ್ಷ ಶೇ 84.57 ರಷ್ಟು ಫಲಿತಾಂಶ ಪಡೆದಿದ್ದರು. ಪ್ರಸ್ತುತ ಶೇ 88.73ರಷ್ಟು ಫಲಿತಾಂಶ ಪಡೆಯುವ ಮೂಲಕ ಶೇ 7ರಷ್ಟು ಏರಿಕೆಯಾಗಿದೆ. ತಾಲ್ಲೂಕುವಾರು ಫಲಿತಾಂಶದಲ್ಲಿ ದೇವನಹಳ್ಳಿ ತಾಲ್ಲೂಕುರಾಜ್ಯ ಮಟ್ಟದಲ್ಲಿ 5ನೇ ಸ್ಥಾನ ಪಡೆದುಕೊಂಡಿದೆ’ ಎಂದು ಮಾಹಿತಿ ನೀಡಿದರು.

ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಕೃಷ್ಣಮೂರ್ತಿ, ವಿಷಯವಾರು ಕ್ಷೇತ್ರ ಶಿಕ್ಷಣಾಧಿಕಾರಿ ಹನುಮಂತಪ್ಪ, ಶಿಕ್ಷಣ ತಜ್ಞ ಡಾ.ನಾಗರಾಜಯ್ಯ, ಕೆ.ಐ.ಎ.ಎಲ್ ಆಡಳಿತ ಮಂಡಳಿ ವ್ಯವಸ್ಥಾಪಕ ಹೇಮಂತ್ ಇದ್ದರು.

ವಿದ್ಯಾರ್ಥಿಗಳಿಗೆ ವಿಶೇಷ ಕಲಿಕಾ ವ್ಯವಸ್ಥೆ
ನಿಧಾನ ಕಲಿಕಾ ಮಕ್ಕಳ ಆಯ್ಕೆಗಾಗಿ ಸೂಕ್ತ ಮಾನದಂಡಗಳನ್ನು ರಚಿಸಿ ಜಿಲ್ಲೆಯಲ್ಲಿ 33 ನೋಡಲ್ ಕೇಂದ್ರಗಳನ್ನು ಸ್ಥಾಪಿಸಲಾಗಿತ್ತು. ಪ್ರತಿ ಕೇಂದ್ರಕ್ಕೆ ನೋಡಲ್ ಅಧಿಕಾರಿ ನೇಮಕ ಮಾಡಲಾಗಿತ್ತು. ಜಿಲ್ಲೆಯ ಎಲ್ಲಾ 234 ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಪ್ರೌಢಶಾಲಾ ಮುಖ್ಯ ಶಿಕ್ಷಕರ ಸಭೆ ನಡೆಸಿ ಶಾಲಾವಾರು ಫಲಿತಾಂಶ ಸುಧಾರಣಾ ಕ್ರಮಗಳ ಪರಿಶೀಲನೆ, ಪೂರ್ವಭಾವಿ ಪರೀಕ್ಷಾ ಫಲಿತಾಂಶದ ವಿಶ್ಲೇಷಣೆ ಮಾಡಿ ಕಲಿಕೆಗೆ ಒತ್ತು ನೀಡಲಾಗಿತ್ತು.
-ಆರ್.ಲತಾ, ಜಿಲ್ಲಾ ಮುಖ್ಯ ಕಾರ್ಯನಿರ್ವಹಣಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT