ಮಂಗಳವಾರ, ಮೇ 18, 2021
23 °C

ರಸ್ತೆಗಿಳಿಯಲಿದ್ದಾರೆ ಪೊಲೀಸರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದೊಡ್ಡಬಳ್ಳಾಪುರ: ಕೊರೊನಾ ಸೋಂಕು ತಡೆಗೆ ರಾಜ್ಯ ಸರ್ಕಾರ ಹೊರಡಿಸಿರುವ ಮಾರ್ಗಸೂಚಿಗಳನ್ನು ಜಾರಿಗೊಳಿಸುವ ನಿಟ್ಟಿನಲ್ಲಿ ಪೊಲೀಸರು ಹಲವಾರು ಕಾಯ್ದೆಗಳ ಅಡಿಯಲ್ಲಿ ದೂರುಗಳನ್ನು ದಾಖಲಿಸುವ, ದಂಡ ವಿಧಿಸುವ ಕೆಲಸವನ್ನು ಸೋಮವಾರದಿಂದಲೇ ತೀವ್ರಗೊಳಿಸಲಾಗಿದೆ ಎಂದು ಡಿವೈಎಸ್‌ಪಿ ಟಿ.ರಂಗಪ್ಪ ಹೇಳಿದರು.

ಅವರು ನಗರ ಪೊಲೀಸ್‌ ಠಾಣೆ ಆವರಣದಲ್ಲಿ ವಿವಿಧ ಸಂಘಟನೆಗಳ ಮುಖಂಡರು, ಬಾರ್‌, ಹೋಟೆಲ್‌ ಹಾಗೂ ಕಲ್ಯಾಣ ಮಂದಿರ ಮಾಲೀಕರ ಸಭೆಯಲ್ಲಿ ಮಾತನಾಡಿದರು.

ಕೋವಿಡ್‌ 2ನೇ ಅಲೆಯನ್ನು ತಡೆಯುವಲ್ಲಿ ಸಾರ್ವಜನಿಕರ ಸಹಕಾರ ಮುಖ್ಯವಾಗಿದೆ. ಸೋಂಕಿತರ ಸಂಖ್ಯೆ, ಸಾವುಗಳ ಸಂಖ್ಯೆಯು ವಿಶ್ವದ ಇತರೆ ದೇಶಗಳನ್ನು ಮೀರಿಸಿ ಭಾರತವು ಮುನ್ನಡೆಯುತ್ತಿರುವ ವರದಿಗಳು ಗಾಬರಿಗೊಳಿಸುತ್ತಿದೆ. ಈ ಹಿನ್ನೆಲೆಯಲ್ಲಿ ವಿವಾಹಕ್ಕೆ ಇನ್ನು ಸಿದ್ದತೆಗಳನ್ನು ಆರಂಭಿಸಿದವರು ವಿವಾಹ ದಿನಾಂಕವನ್ನು ಮುಂದೂಡುವುದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು. ಸಾರ್ವಜನಿಕರ ಸಭೆ, ಸಮಾರಂಭ, ವಿವಾಹಗಳನ್ನು ನಡೆಸಲು ತಹಶೀಲ್ದಾರ್‌ ಅವರಿಂದ ಕಡ್ಡಾಯವಾಗಿ ಅನುಮತಿ ಪಡೆಯಲೇ ಬೇಕು. ತಹಶೀಲ್ದಾರ್‌ ಅವರು ವಿಧಿಸಿರುವ ನಿಯಮಗಳು ಪಾಲನೆಯಾಗುವಂತೆ ಪೊಲೀಸರು ನೋಡಿಕೊಳ್ಳಲಿದ್ದಾರೆ. ಕಲ್ಯಾಣ ಮಂದಿರ, ಬಾರ್‌, ಮಾರುಕಟ್ಟೆ ಪ್ರದೇಶಗಳು ಕೊರೊನಾ ಸೋಂಕು ಹೆಚ್ಚಾಗಲು ಇರುವ ಮುಖ್ಯ ಕೇಂದ್ರಗಳಾಗಿವೆ. ಹೀಗಾಗಿ ಸರ್ಕಾರದ ಮಾರ್ಗದರ್ಶಗಳನ್ನು ಎಲ್ಲರು ಕಡ್ಡಾಯವಾಗಿ ಪಾಲಿಸಬೇಕು
ಎಂದರು.

ಯಾವುದೇ ರೀತಿಯ ಸಮಾರಂಭ, ಧಾರ್ಮಿಕ ಕಾರ್ಯಕ್ರಮ ಸೇರಿದಂತೆ ಎಲ್ಲಕ್ಕೂ ತಹಶೀಲ್ದಾರ್‌ ಅವರಿಗೆ ಅಧಿಕೃತವಾಗಿ ಅರ್ಜಿಸಲ್ಲಿಸಿ ಅನುಮತಿ ಪಡೆಯಲೇ ಬೇಕು. ಇಲ್ಲವಾದಲ್ಲಿ ಕಾನೂನು ಕ್ರಮ ಅನಿವಾರ್ಯವಾಗಲಿದೆ ಎಂದರು.

ಪೊಲೀಸ್‌ ಠಾಣೆಗಳಿಗೆ ಸಾರ್ವಜನಿಕರು ಅನಾವಶಕವಾಗಿ ಬರುವುದನ್ನು ನಿಲ್ಲಿಸಬೇಕು. ಈಗಾಗಲೇ 8 ಜನ ಪೊಲೀಸ್‌ ಸಿಬ್ಬಂದಿಯಲ್ಲಿ ಕೋವಿಡ್‌-19 ಸೋಂಕು ದೃಢಪಟ್ಟಿದೆ ಎಂದರು.

1ನೇ ಅಲೆಯ ಕೋವಿಡ್‌ ಸಂದರ್ಭದಲ್ಲಿ ದೊಡ್ಡಬಳ್ಳಾಪುರದ ವಿವಿಧ ಸಂಘಟನೆಗಳ ಮುಖಂಡರು ಪೊಲೀಸರೊಂದಿಗೆ ಕೈ ಜೋಡಿಸಿದ್ದರಿಂದ ಸಾರ್ವಜನಿಕರಿಗೆ ಅಗತ್ಯ ಸೇವೆಗಳು ಸಕಾಲದಲ್ಲಿ ದೊರಕಿದ್ದವು. 2ನೇ ಅಲೆ ಹೆಚ್ಚುತ್ತಿರುವ ಈ ಸಂದರ್ಭದಲ್ಲೂ ದಿನದ 24 ಗಂಟೆಗಳ ಕಾಲವು ಸೇವೆ ದೊರೆಯುವಂತೆ ಮಾಡಲು ಮುಂದಕ್ಕೆ ಬರಬೇಕಿದೆ ಎಂದರು. ಸಭೆಯಲ್ಲಿ ಬಿಜೆಪಿ ಮುಖಂಡ ಕೆ. ಎಂ.ಹನುಮಂತರಾಯಪ್ಪ ಹಾಗೂ ವಿವಿಧ ಸಂಘಟನೆಗಳ ಮುಖಂಡರು ಭಾಗವಹಿಸಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು