ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೊಲೀಸರ ಕಾರ್ಯಾಚರಣೆ ಆರೋಪಿಗಳ ಕಾಲಿಗೆ ಗುಂಡೇಟು

Last Updated 26 ಡಿಸೆಂಬರ್ 2022, 6:01 IST
ಅಕ್ಷರ ಗಾತ್ರ

ಆನೇಕಲ್:ತಲೆಮರೆಸಿಕೊಂಡ ಆರೋಪಿಗಳನ್ನು ಬಂಧಿಸಲು ಪೊಲೀಸರು ಭಾನುವಾರ ನಡೆಸಿದ ಕಾರ್ಯಾಚರಣೆ ವೇಳೆ ಹಲ್ಲೆಗೆ ಮುಂದಾದ ಆರೋಪಿಗಳ ಕಾಲಿಗೆ ಪೊಲೀಸರು ಗುಂಡು ಹೊಡೆದಿದ್ದಾರೆ.

ಗಾಂಜಾ ನಶೆಯಲ್ಲಿ ಪೊಲೀಸ್‌ ಪೇದೆಯ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿದ್ದ ವರುಣ್‌ ಅಲಿಯಾಸ್‌ ಕೆಂಚ ಜಿಗಣಿ ಎಂಬಾತ ಸಮೀಪದ ಕಲ್ಲುಬಾಳು ಗ್ರಾಮದ ಮನೆಯೊಂದರಲ್ಲಿ ಅಡಗಿರುವ ಮಾಹಿತಿ ಮೇರೆಗೆಆನೇಕಲ್‌ ಪೊಲೀಸರು ಕಾರ್ಯಾಚರಣೆ ನಡೆಸಿದರು.

ಪೊಲೀಸರು ಶರಣಾಗುವಂತೆ ಸೂಚಿಸಿದರೂ ಹಲ್ಲೆಗೆ ಮುಂದಾದ ಆರೋಪಿ ಕಾಲಿಗೆ ಆನೇಕಲ್‌ ಸಿಪಿಐ ಚಂದ್ರಪ್ಪ ಗುಂಡು ಹೊಡೆದಿದ್ದಾರೆ. ಆರೋಪಿಯನ್ನು ಬಂಧಿಸಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.

ಜಿಗಣಿ ಪೊಲೀಸ್‌ ಠಾಣೆ ವ್ಯಾಪ್ತಿಯ ನಾಯನಹಳ್ಳಿಯ ನೀಲಗಿರಿ ತೋಪೊಂದರಲ್ಲಿ ನಡೆದ ಮತ್ತೊಂದು ಪ್ರಕರಣದಲ್ಲಿ ಜಿಗಣಿ ಪೊಲೀಸರು, ಅಜಯ್‌ ಅಲಿಯಾಸ್‌ ಮೆಂಟಲ್‌ ಎಂಬ ಆರೋಪಿಗೆ ಗುಂಡು ಹೊಡೆದು ಬಂಧಿಸಿದ್ದಾರೆ.

ಜಿಗಣಿ ಮತ್ತು ಬನ್ನೇರುಘಟ್ಟ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿಕಳೆದ ಕೆಲವು ದಿನಗಳಿಂದ ನಡೆದಿದ್ದ ಅಪಹರಣ ಪ್ರಕರಣಗಳಲ್ಲಿ ಆರೋಪಿ ಭಾಗಿಯಾಗಿದ್ದ.

ಆರೋಪಿಗಳು ನಾಯನಹಳ್ಳಿ ಬಳಿಯ ನೀಲಗಿರಿ ತೋಪೋಂದರಲ್ಲಿ ಅವಿತುಕೊಂಡಿರುವ ಖಚಿತ ಮಾಹಿತಿಯ ಮೇರೆಗೆ ಜಿಗಣಿ ಪೊಲೀಸ್‌ ಇನ್‌ಸ್ಪೆಕ್ಟರ್‌ ಸುದರ್ಶನ್‌ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿತು.

ಗಾಳಿಯಲ್ಲಿ ಎರಡು ಸುತ್ತು ಗುಂಡು ಹಾರಿಸಿ ಆರೋಪಿಗೆ ಶರಣಾಗಲು ಸೂಚಿಸಲಾಯಿತು. ಆರೋಪಿ ಪೊಲೀಸರ ಮೇಲೆ ಹಲ್ಲೆ ನಡೆಸಲು ಮುಂದಾದಾಗ ಕಾಲಿಗೆ ಗುಂಡು ಹಾರಿಸಿ ಆರೋಪಿಯನ್ನು ಬಂಧಿಸಲಾಯಿತು.

ಜಿಗಣಿ ಮತ್ತು ಬನ್ನೇರುಘಟ್ಟ ಸುತ್ತಮುತ್ತ ಹತ್ತು ದಿನಗಳಲ್ಲಿ ನಾಲ್ಕು ಅಪಹರಣ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಕೃಷ್ಣ ಅಲಿಯಾಸ್‌ ಹಾವಳಿ ಕೃಷ್ಣನ ತಂಡದಲ್ಲಿ ಅಜಯ್‌ ಪ್ರಮುಖನಾಗಿದ್ದ. ಉಳಿದ ಆರೋಪಿಗಳಿಗಾಗಿ ಪೊಲೀಸರು ಶೋಧ ನಡೆಸಿದ್ದಾರೆ.

ಘಟನಾ ಸ್ಥಳಕ್ಕೆ ಕೇಂದ್ರ ವಲಯ ಐಜಿಪಿ ಚಂದ್ರಶೇಖರ್‌ ಭೇಟಿ ನೀಡಿ ಪರಿಶೀಲಿಸಿದರು. ಅಪರಾಧ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವವರ ವಿರುದ್ಧ ಯಾವುದೇ ಮುಲಾಜಿಲ್ಲದೇ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಸೂಚನೆ ನೀಡಲಾಗಿದೆ. ಗಾಂಜಾ, ಅಪಹರಣ, ದರೋಡೆ ಪ್ರಕರಣಗಳಲ್ಲಿ ಗುರುತಿಸಿಕೊಂಡಿದ್ದ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಮುಂದಿನ ದಿನಗಳಲ್ಲಿ ಆರೋಪಿಗಳ ಪತ್ತೆಗೆ ಕಾರ್ಯಾಚರಣೆ ಮುಂದುವರೆಸಲಾಗುವುದು ಎಂದರು.

ಬೆಂಗಳೂರು ಗ್ರಾಮಾಂತರ ಪೊಲೀಸ್‌ ಎಸ್‌.ಪಿ ಮಲ್ಲಿಕಾರ್ಜುನ್‌ ಬಾಲದಂಡಿ, ಎಎಸ್‌ಪಿ ಪುರುಷೋತ್ತಮ್‌, ಡಿವೈಎಸ್‌ಪಿ ಲಕ್ಷ್ಮೀನಾರಾಯಣ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT