ಜನಕಲ್ಯಾಣಕ್ಕೆ ಸಹಕಾರಿ ತತ್ವ ಪಾಲಿಸಿ

7
ಹಾರಗದ್ದೆಯಲ್ಲಿ ಸ್ತ್ರೀಶಕ್ತಿ ಗುಂಪುಗಳಿಗೆ ನೀಡುವ ಸಾಲ ಸೌಲಭ್ಯಗಳ ಮಾಹಿತಿ ಕಾರ್ಯಾಗಾರ

ಜನಕಲ್ಯಾಣಕ್ಕೆ ಸಹಕಾರಿ ತತ್ವ ಪಾಲಿಸಿ

Published:
Updated:
Deccan Herald

ಆನೇಕಲ್: ಸ್ತ್ರೀಶಕ್ತಿ ಸಂಘಗಳನ್ನು ಬಲವರ್ಧನೆಗೊಳಿಸಿ ಮಹಿಳೆಯರು ಆರ್ಥಿಕ ಸ್ವಾವಲಂಬಿಗಳಾಗುವಂತೆ ಮಾಡಲು ಬಿಡಿಸಿಸಿ ಬ್ಯಾಂಕ್ ವತಿಯಿಂದ ತಾಲ್ಲೂಕಿನ ಸ್ತ್ರೀಶಕ್ತಿ ಗುಂಪುಗಳಿಗೆ ₹10 ಕೋಟಿ ಸಾಲ ಸೌಲಭ್ಯ ನೀಡಲು ಬ್ಯಾಂಕ್ ತೀರ್ಮಾನಿಸಿದೆ ಎಂದು ಬೆಂಗಳೂರು ಜಿಲ್ಲಾ ಸಹಕಾರಿ ಬ್ಯಾಂಕ್ ನಿರ್ದೇಶಕ ಆರ್.ಕೆ.ರಮೇಶ್ ತಿಳಿಸಿದರು.

ಅವರು ತಾಲ್ಲೂಕಿನ ಹಾರಗದ್ದೆಯಲ್ಲಿ ವ್ಯವಸಾಯ ಸೇವಾ ಸಹಕಾರ ಸಂಘದ ವತಿಯಿಂದ ಆಯೋಜಿಸಿದ್ದ ಸ್ತ್ರೀಶಕ್ತಿ ಗುಂಪುಗಳಿಗೆ ನೀಡುವ ಸಾಲ ಸೌಲಭ್ಯಗಳ ಮಾಹಿತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ಹಾರಗದ್ದೆ ವಿಎಸ್ಎಸ್ಎನ್‌ಗೆ ಬ್ಯಾಂಕ್ ವತಿಯಿಂದ ₹2ಕೋಟಿ ಸಾಲ ನೀಡುತ್ತಿದ್ದು, ಈ ವ್ಯಾಪ್ತಿಯ ಸ್ತ್ರೀಶಕ್ತಿ ಗುಂಪುಗಳಿಗೆ ವಿತರಿಸಲು ನಿರ್ದೇಶನ ನೀಡಲಾಗಿದೆ. ಸಾಲ ಪಡೆದ ಸಂಘಗಳು ಮರುಪಾವತಿ ಮಾಡಬೇಕು. ಸಾಲ ಪಡೆದ ಉದ್ದೇಶಕ್ಕಾಗಿಯೇ ಹಣ ಬಳಕೆ ಮಾಡಬೇಕು. ₹4 ಲಕ್ಷ ಮರುಪಾವತಿ ಮಾಡಿದರೆ ಎರಡನೇ ಕಂತಿನಲ್ಲಿ ₹10 ಲಕ್ಷ ನೀಡಲಾಗುವುದು ಎಂದರು.

ಸಾಲ ಮರುಪಾವತಿ ಮಾಡಲು ಪ್ರತಿಯೊಬ್ಬರು ಬದ್ಧರಾಗಿರಬೇಕು. ಉದ್ಯಮ ಸ್ಥಾಪಿಸುವವರಿಗೆ ₹5 ಲಕ್ಷದವರೆಗೂ ಶೂನ್ಯ ಬಡ್ಡಿ ದರದಲ್ಲಿ ಹಾಗೂ ₹10 ಲಕ್ಷದವರೆಗೂ ಶೇ3ರ ಬಡ್ಡಿ ದರದಲ್ಲಿ ಸಾಲ ನೀಡಲಾಗುತ್ತದೆ. ಸರ್ಕಾರದ ಸೌಲಭ್ಯ ಮಹಿಳೆಯರು ಸದುಪಯೋಗಪಡಿಸಿಕೊಂಡು ಅಭಿವೃದ್ಧಿ ಹೊಂದಬೇಕು. ಮಹಿಳೆಯರು ಆರ್ಥಿಕವಾಗಿ ಸಬಲರಾದರೆ ಆ ಕುಟುಂಬ ಸಬಲವಾದಂತೆ ಎಂದರು.

ಬೆಂಗಳೂರು ಜಿಲ್ಲಾ ಸಹಕಾರಿ ಬ್ಯಾಂಕ್ ಉಪಾಧ್ಯಕ್ಷ ರವೀಶಯ್ಯ ಮಾತನಾಡಿ, ಸಹಕಾರ ಕ್ಷೇತ್ರದಿಂದ ಸಮುದಾಯದ ಅಭಿವೃದ್ಧಿ ಸಾಧ್ಯ. ಸಹಕಾರ ಕ್ಷೇತ್ರದಲ್ಲಿ ರಾಜಕೀಯವಿಲ್ಲದೆ ಜನಕಲ್ಯಾಣಕ್ಕಾಗಿ ಎಲ್ಲರೂ ಒಗ್ಗೂಡಿ ಶ್ರಮಿಸುವುದು ಸಹಕಾರಿ ತತ್ವವಾಗಿದೆ. ಅಲ್ಪಾವಧಿ ಬೆಳೆಸಾಲ ಹಾಗೂ ಮಹಿಳೆಯರಿಗೆ ಕಿರು ಸಾಲ ನೀಡಲಾಗುತ್ತಿದೆ ಎಂದು ತಿಳಿಸಿದರು.

ಹಸು ಕೊಳ್ಳಲು ₹3ಲಕ್ಷ, ಮನೆ ಕಟ್ಟಲು ₹15–20ಲಕ್ಷ, ಕೃಷಿ ಹೊಂಡ ಹಾಗೂ ಶೆಡ್‌ಗಳ ನಿರ್ಮಾಣಕ್ಕೆ ಕಡಿಮೆ ಬಡ್ಡಿ ದರದಲ್ಲಿ ಸಾಲ ಹಾಗೂ ಚಿನ್ನಾಭರಣ ಸಾಲ ನೀಡಲಾಗುತ್ತಿದೆ. ಸಹಕಾರ ಸಂಘಗಳಲ್ಲಿ ನಂಬಿಕೆ ಮುಖ್ಯ. ನಂಬಿಕೆಗೆ ಚ್ಯುತಿ ಬರದಂತೆ ಪ್ರತಿಯೊಬ್ಬ ಸಹಕಾರಿಯು ಕಾರ್ಯನಿರ್ವಹಿಸಬೇಕು ಎಂದರು.

ಹಾರಗದ್ದೆ ವಿಎಸ್ಎಸ್ಎನ್ ಸಂಘದ ವತಿಯಿಂದ ಹಾರಗದ್ದೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಧ್ವನಿವರ್ಧಕ ಕೊಡುಗೆಯಾಗಿ ನೀಡಲಾಯಿತು. ಮುಖಂಡರಾದ ಎಚ್.ಎಸ್.ಬಸವರಾಜು, ಕೆ.ಎಸ್.ನಟರಾಜ್, ಹಾ.ವೇ.ಮಂಜುನಾಥ್, ಸಂಘದ ಉಪಾಧ್ಯಕ್ಷ ವೆಂಕಟಸ್ವಾಮಿ, ನಿರ್ದೇಶಕರಾದ ವೀಣಾ ರವಿಚಂದ್ರ, ರಮೇಶ್‌ರೆಡ್ಡಿ, ಹೇಮಾ, ಹಾರಗದ್ದೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಶ್ರೀನಿವಾಸ್, ಬಿಡಿಸಿಸಿ ಬ್ಯಾಂಕ್ ಆನೇಕಲ್ ಶಾಖೆ ಮ್ಯಾನೇಜರ್ ಪುಟ್ಟಸ್ವಾಮಿ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !