ಶುಕ್ರವಾರ, 4 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ವಿಜಯಪುರ | ಪುರಸಭೆಯ ಚರಂಡಿ ವ್ಯವಸ್ಥೆ ಅಧ್ವಾನ: ರಸ್ತೆಯಲ್ಲೇ ಚರಂಡಿ ನೀರು

Published : 25 ಮಾರ್ಚ್ 2024, 8:20 IST
Last Updated : 25 ಮಾರ್ಚ್ 2024, 8:20 IST
ಫಾಲೋ ಮಾಡಿ
Comments

ವಿಜಯಪುರ(ದೇವನಹಳ್ಳಿ): ಪಟ್ಟಣದ 23 ವಾರ್ಡ್‌ಗಳಲ್ಲಿಯೂ ವ್ಯ‌ವಸ್ಥಿತವಾಗಿ ಚರಂಡಿ ನಿರ್ಮಿಸದೆ ರಸ್ತೆ, ಬೀದಿಗಳಲ್ಲಿಯೇ ಒಳಚರಂಡಿ ಕೊಳಚೆ ನೀರು ಹರಿಯುತ್ತಿರುವುದು ಸ್ಥಳೀಯರು ಹೇಸಿಗೆ ಹುಟ್ಟಿಸಿದೆ.

ಈ ಹಿಂದೆ ಪಟ್ಟಣದಲ್ಲಿದ್ದ 30,000 ಜನಸಂಖ್ಯೆಗೆ ಅನುಗುಣವಾಗಿ ಚರಂಡಿ ವ್ಯವಸ್ಥೆ ರೂಪಿಸಲಾಗಿತ್ತು. ಪಟ್ಟಣ ಬೆಳದಂತೆ ಜನಸಂಖ್ಯೆ 50,000 ದಾಟಿದೆ. ಆದರೆ ಚರಂಡಿ ವ್ಯವಸ್ಥೆ ಮಾತ್ರ ಹಾಗೆ ಇದೆ. ಇದರಿಂದ ಒಳಚರಂಡಿ‌ ಕಾಲುವೆ, ಪೈಪ್‌ಗಳಿಗೆ ಒತ್ತಡ ಜಾಸ್ತಿಯಾಗಿ ಎಲ್ಲಂದರಲ್ಲಿ ಕೊಳಚೆ ನೀರು ಹರಿಯುತ್ತಿದೆ. ಮ್ಯಾನ್‌ಹೋಲ್‌ಗಳು ಉಕ್ಕಿ ಹರಿಯುತ್ತಿವೆ.

ಒಳಚರಂಡಿಯನ್ನು ವೈಜ್ಞಾನಿಕವಾಗಿ ನಿರ್ಮಿಸಿಕೊಡಬೇಕು. ಒಳಚರಂಡಿ ಸಂಸ್ಕರಣಾ ಘಟಕಗಳಿಗೆ ಹೋಗುವಂತೆ ನಿರ್ಮಾಣ ಮಾಡಬೇಕು, ಒಳಚರಂಡಿ ಸಂಸ್ಕರಣಾ ಘಟಕ ಸ್ಥಾಪನೆ ಮಾಡಬೇಕೆಂದು ದಶಕದ ಜನರ ದನಿಗೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಕಿವಿಯಾಗಿಲ್ಲ.

ಪುರಸಭೆ ಆರಂಭ ನಂತರ ಒಳಚರಂಡಿ ನಿರ್ಮಿಸಲಾಗಿದೆ. ಆ ಬಳಿಕ ಅದನ್ನು ಮೇಲ್ದರ್ಜೆಗೇರಿಸುವ ಕೆಲಸಕ್ಕೆ ಪುರಸಭೆ ಕೈ ಹಾಕಿಲ್ಲ. ಪಟ್ಟಣದ ಬಹುತೇಕ ವಾರ್ಡ್‌ಗಳಲ್ಲಿ ಒಳಚರಂಡಿ ವ್ಯವಸ್ಥೆ ಇಲ್ಲ. ಈಗಿರುವ ಒಳಚರಂಡಿಗಳು ಕಿರಿದಾಗಿವೆ. ತ್ಯಾಜ್ಯ ನೀರು ಹರಿಯುವುದಕ್ಕೆ ಸಾಮರ್ಥ್ಯ ಸಾಕಾಗುತ್ತಿಲ್ಲ.

ಈಗಿರುವ ಒಳಚರಂಡಿಯ ಪೈಪ್‌ಲೈನ್‌ಗಳಿಗೆ ಗೃಹಬಳಕೆ ಅಲ್ಲದೆ  ಹೊಟೇಲ್, ಸಾರ್ವಜನಿಕ ಶೌಚಾಲಯ ಮತ್ತು ವಾಣಿಜ್ಯ ಮಳಿಗೆಗಳ ಕೊಳಚೆಯನ್ನು ಹರಿಸಲಾಗುತ್ತಿದೆ. ಇದರಿಂದ ಒತ್ತಡ ಹೆಚ್ಚಾಗಿದೆ. ತ್ಯಾಜ್ಯ ನೀರಿನ ಹರಿಯುವ ಪ್ರಮಾಣ ಜಾಸ್ತಿಯಾದಾಗ ರಸ್ತೆಗಳಲ್ಲಿರುವ ಮ್ಯಾನ್‌ಹೋಲ್‌ಗಳಿಂದ ಕೊಳಚೆನೀರು ಹರಿದು ದುರ್ವಾಸನೆ ಬೀರುತ್ತದೆ. ಇದು ಸಾರ್ವಜನಿಕರ ಆರೋಗ್ಯದ ಮೇಲೆಯೂ ದುಷ್ಪರಿಣಾಮ ಬೀರುತ್ತಿದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.

ಶತಮಾನ ಪೂರೈಸಿರುವ ಪುರಸಭೆಯ ಪಟ್ಟಣಕ್ಕೆ ಸುಸಜ್ಜಿತವಾದ ಒಳಚರಂಡಿ ನಿರ್ಮಿಸುವಲ್ಲಿ ವಿಫಲವಾಗಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು.

ಯೋಜನಾ ವರದಿ ತಯಾರಿ
ಪಟ್ಟಣದ ಸುಮಾರು 63 ಕೀ.ಮಿ.ನಷ್ಟು ಒಳಚರಂಡಿ ಇದೆ. ಆದರೆ ಈಗಿನ ಜನಸಂಖ್ಯೆಗೆ ಅನುಗುಣವಾಗಿಲ್ಲ. ಎಷ್ಟು ಪ್ರಮಾಣದಲ್ಲಿ ನಮಗೆ ಒಳಚರಂಡಿಯ ಅಗತ್ಯವಿದೆ ಎನ್ನುವ ಬಗ್ಗೆ ಪರಿಶೀಲನೆ ನಡೆಸಿ ಅದಕ್ಕೆ ವಿವರವಾದ ಯೋಜನಾ ವರದಿ ತಯಾರಿಸಿ ಸರ್ಕಾರಕ್ಕೆ ಸಲ್ಲಿಕೆ ಮಾಡಲಾಗುತ್ತದೆ. ಒಳಚರಂಡಿ ನೀರು ಸಂಸ್ಕರಣಾ ಘಟಕಗಳ ಸ್ಥಾಪನೆಗೆ ಭೂಮಿಯ ಅಗತ್ಯವಿರುವ ಕಾರಣ ಇದುವರೆಗೂ ಸಾಧ್ಯವಾಗಿಲ್ಲ. ಜಿ.ಆರ್.ಸಂತೋಷ್ ಪುರಸಭೆ ಮುಖ್ಯಾಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT