ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಪೌಷ್ಟಿಕತೆ ದೂರವಾಗಿಸಲು ಪೋಷಣಾ ಅಭಿಯಾನ

ವಿಜಯಪುರ: ವಿವಿಧ ಗ್ರಾಮಗಳ ಗರ್ಭಿಣಿಯರಿಗೆ ಸೀಮಂತ
Last Updated 24 ಸೆಪ್ಟೆಂಬರ್ 2020, 1:57 IST
ಅಕ್ಷರ ಗಾತ್ರ

ವಿಜಯಪುರ: ‘ರಾಜ್ಯದಲ್ಲಿ ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳು, ಮಹಿಳೆಯರು, ಹಿರಿಯ ನಾಗರಿಕರನ್ನು ಆರೋಗ್ಯವಂತರನ್ನಾಗಿ ರೂಪಿಸುವ ಸಲುವಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆಯು ಪೋಷಣೆ ಅಭಿಯಾನ-ಪೌಷ್ಟಿಕ ಕರ್ನಾಟಕ ಯೋಜನೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಮುಂದಾಗಿರುವುದು ಶ್ಲಾಘನೀಯ’ ಎಂದು ಗ್ರಾಮ ಪಂಚಾಯಿತಿ ಸದಸ್ಯೆ ಮಂಜುಳಾವೆಂಕಟೇಶ್ ಹೇಳಿದರು.

ಚನ್ನರಾಯಪಟ್ಟಣ ಹೋಬಳಿಯ ಚನ್ನಹಳ್ಳಿಯಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಹಯೋಗದಲ್ಲಿ ಆಯೋಜಿಸಿದ್ದ ಪೋಷಣಾ ಅಭಿಯಾನ ಕಾರ್ಯಕ್ರಮದಲ್ಲಿ ಚನ್ನಹಳ್ಳಿ, ಯಲಿಯೂರು, ಬೆಟ್ಟಕೋಟೆ ಗ್ರಾಮಗಳ ಗರ್ಭಿಣಿಯರಿಗೆ ಸೀಮಂತ ಮಾಡಿ ಅವರು ಮಾತನಾಡಿದರು.

‘ಗರ್ಭಿಣಿಯರು, ಬಾಣಂತಿಯರು, ಶಿಶುವಿನ ಬೆಳವಣಿಗೆ ಕುಂಠಿತ, ತೂಕ ಕೊರತೆ, ರಕ್ತಹೀನತೆ, ಅಪೌಷ್ಟಿಕತೆ, ಕಡಿಮೆ ತೂಕದ ಶಿಶು ಸೇರಿದಂತೆ ಅಪೌಷ್ಟಿಕತೆ ಸಮಸ್ಯೆಯಿಂದ ಬಳಲುತ್ತಿರುವವರನ್ನು ಅದರಿಂದ ಹೊರಕ್ಕೆ ತರಲು ಪೂರಕವಾಗಿ ಇಲಾಖೆಯು ನಾನಾ ಯೋಜನೆಯನ್ನು ಜಾರಿಗೊಳಿಸಿದೆ. ಹಂತ ಹಂತವಾಗಿ ಅಪೌಷ್ಟಿಕತೆ ಮುಕ್ತ ಕರ್ನಾಟಕ ರೂಪಿಸಲು ಉದ್ದೇಶಿಸಿಲಾಗಿದೆ. ಗರ್ಭಿಣಿಯರು, ಬಾಣಂತಿಯರಲ್ಲಿ ಪೌಷ್ಟಿಕಾಂಶಮಟ್ಟ ವೃದ್ಧಿಗಾಗಿ ಮಾತೃಪೂರ್ಣ, ಸೃಷ್ಟಿ ಹಾಗೂ ಕ್ಷೀರಭಾಗ್ಯ ಯೋಜನೆಯನ್ನೂ ಜಾರಿಗೊಳಿಸಿದ್ದು ಈ ಯೋಜನೆಗಳನ್ನು ಸದುಪಯೋಗ ಮಾಡಿಕೊಳ್ಳಬೇಕು’ ಎಂದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮೇಲ್ವಿಚಾರಕಿ ಶಿಲ್ಪಾ ಮಾತನಾಡಿ, ‘ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಸಮಾಲೋಚನೆ, ಪೋಷಣೆಯ ಸಾಕ್ಷರತೆ, ಪ್ರಾಯ ಪೂರ್ವ ಬಾಲಕಿಯರು ಹಾಗೂ ಗರ್ಭಿಣಿಯರಲ್ಲಿ ರಕ್ತಹೀನತೆಯನ್ನು ಗುರುತಿಸಿ ನಿವಾರಿಸುವ ಕಾರ್ಯದಲ್ಲಿ ಇಲಾಖೆ ತೊಡಗಿಸಿಕೊಂಡಿದೆ. ಸಮಗ್ರ ಶಿಶು ಅಭಿವೃದ್ಧಿ ಯೋಜನೆಯ ಮಧ್ಯಮ ಹಂತದ ಸಿಬ್ಬಂದಿ ಸಾಮರ್ಥ್ಯವನ್ನು ಅಭಿವೃದ್ಧಿಪಡಿಸಲು ಪೌಷ್ಟಿಕ ಮತ್ತು ಆರೋಗ್ಯದ ಬಗ್ಗೆ ಸಮಗ್ರ ತರಬೇತಿ ಮಾದರಿಗಳನ್ನು ರೂಪಿಸಿದೆ. ಮಹಿಳೆಯರು ಉತ್ತಮ ವಿಟಮಿನ್‌ಗಳಿರುವ ಆಹಾರ ಪದಾರ್ಥಗಳನ್ನು ಮನೆಯಲ್ಲಿಯೇ ತಯಾರಿಸಿ ಉಪಯೋಗಿಸುವ ಮೂಲಕ ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಕಾರಣೀಕರ್ತರಾಗಬೇಕು ಎಂದರು.

ಅಂಗನವಾಡಿ ಶಿಕ್ಷಕಿಯೊಬ್ಬರು ಮಾತನಾಡಿ, ‘ಖನಿಜಾಂಶ ಹೊಂದಿರುವ ಸೊಪ್ಪು, ತರಕಾರಿ ಜತೆ ಮೊಳಕೆ ಕಾಳು ಉಪಯೋಗಿಸುವ ಮೂಲಕ ಉತ್ತಮ ಆರೋಗ್ಯ ಹೊಂದಬೇಕು. ತಾಯಿ ಆರೋಗ್ಯವಾಗಿದ್ದಾಗ ಮಾತ್ರ ಆರೋಗ್ಯವಂತ ಶಿಶುವಿಗೆ ಜನ್ಮ ನೀಡಲು ಸಾಧ್ಯವಾಗುತ್ತದೆ. ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳು, ಮಹಿಳೆಯರು, ಹಿರಿಯ ನಾಗರಿಕರನ್ನು ಆರೋಗ್ಯವಂತರನ್ನಾಗಿ ರೂಪಿಸುವ ಸಲುವಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಪೋಷಣೆ ಅಭಿಯಾನ-ಪೌಷ್ಟಿಕ ಕರ್ನಾಟಕ ಯೋಜನೆಯನ್ನು ಪರಿಣಾಮಕಾರಿಯಾಗಿ ಜಾರಿಗೆ ತಂದಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT