ಗುರುವಾರ , ಸೆಪ್ಟೆಂಬರ್ 23, 2021
22 °C
ಜಿಗಣಿ: ವೈದ್ಯರು, ಔಷಧಿ ವ್ಯಾಪಾರಿಗಳ ಸಭೆಯಲ್ಲಿ ಡಿವೈಎಸ್‌ಪಿ ಹೇಳಿಕೆ

ಖಾಸಗಿ ಆಸ್ಪತ್ರೆ; ನೆರವಿಗೆ ಮನವಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಆನೇಕಲ್: ‘ಖಾಸಗಿ ನರ್ಸಿಂಗ್‌ ಹೋಂಗಳು ಸೇವಾ ಮನೋಭಾವದಿಂದ ಕೆಲಸ ಮಾಡುವ ಮೂಲಕ ಕೊರೊನಾ ಸಂದರ್ಭದಲ್ಲಿ ಸ್ಪಂದಿಸಬೇಕು. ಈ ಮೂಲಕ ಸಂಕಷ್ಟದ ಸಂದರ್ಭದಲ್ಲಿ ಸರ್ಕಾರದ ಜೊತೆಗೆ ಕೈಜೋಡಿಸಬೇಕು’ ಎಂದು
ಡಿವೈಎಸ್ಪಿ ಎಚ್‌.ಎಂ.ಮಹದೇವಯ್ಯ ತಿಳಿಸಿದರು.

ಅವರು ತಾಲ್ಲೂಕಿನ ಜಿಗಣಿಯಲ್ಲಿ ವೈದ್ಯರು ಮತ್ತು ಔಷಧಿ ವ್ಯಾಪಾರಿಗಳ ಸಭೆಯಲ್ಲಿ ಮಾತನಾಡಿದರು.

‘ಕೋವಿಡ್‌ ಕೇಂದ್ರಗಳಲ್ಲಿ ಖಾಸಗಿ ಆಸ್ಪತ್ರೆಗಳ ವೈದ್ಯರು ಹಾಗೂ ಸಿಬ್ಬಂದಿ ವಾರಕ್ಕೊಬ್ಬರಂತೆ ಸ್ವಯಂಸೇವೆ ಮಾಡುವ ಮೂಲಕ ಕೋವಿಡ್‌ ಕೇಂದ್ರ ಸುಗಮವಾಗಿ ನಡೆಯಲು ಸಹಕಾರ ನೀಡಬೇಕು. ಖಾಸಗಿ ಆಸ್ಪತ್ರೆಗಳ ವಿರುದ್ಧ ಹಲವಾರು ದೂರುಗಳು ಬರುತ್ತಿವೆ. ದೂರುಗಳು ಬಾರದಂತೆ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು. ಉತ್ತಮ ಸೇವೆ ಮಾಡುವ ಮೂಲಕ ನೆರವಾಗಬೇಕು’ ಎಂದರು.

ಜಿಗಣಿ ಸರ್ಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಲತಾ ಮಾತನಾಡಿ, ‘ಕೊರೊನಾ ಸೋಂಕು ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಿದೆ. ಇವುಗಳನ್ನು ತಡೆಯುವ ನಿಟ್ಟಿನಲ್ಲಿ ಸರ್ಕಾರಿ ಆಸ್ಪತ್ರೆಗಳ ಜೊತೆಗೆ ಖಾಸಗಿ ವೈದ್ಯರು ಮತ್ತು ಸಿಬ್ಬಂದಿ ಒಗ್ಗೂಡಿ ಕೆಲಸ ಮಾಡಬೇಕಾಗಿದೆ. ಚಿಕಿತ್ಸೆಗೆ ಬರುವ ರೋಗಿಗಳಲ್ಲಿ ಕೆಮ್ಮು, ನೆಗಡಿ, ಉಬಸ, ಅತಿಸಾರ, ಎದೆ ಉರಿ ಕಂಡುಬಂದಲ್ಲಿ ಕಡ್ಡಾಯವಾಗಿ ಕೊರೊನಾ ಪರೀಕ್ಷೆ ಮಾಡಿಸಬೇಕು. ವೃದ್ಧರು, ಮಧುಮೇಹ ಮತ್ತು ಡಯಾಲಿಸಿಸ್‌ ಮಾಡಿಸುವ ರೋಗಿಗಳ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು’ ಎಂದರು.

ಜಿಗಣಿ ಪೊಲೀಸ್‌ ವೃತ್ತ ನಿರೀಕ್ಷಕ ಕೆ.ವಿಶ್ವನಾಥ್‌ ಮಾತನಾಡಿ, ‘ನರ್ಸಿಂಗ್‌ ಹೋಂಗಳಲ್ಲಿ ಪ್ರತಿ ರೋಗಿಯ ಮೊಬೈಲ್‌ ಸಂಖ್ಯೆ ಮತ್ತು ಆಧಾರ್‌ ಸಂಖ್ಯೆಯನ್ನು ಕಡ್ಡಾಯವಾಗಿ ಪಡೆಯಬೇಕು. ಕಾರ್ಮಿಕರಾಗಿದ್ದಲ್ಲಿ ಕೈಗಾರಿಕೆಗಳು ನೀಡುವ ಗುರುತಿನ ಚೀಟಿ ಪ್ರತಿ ಪಡೆಯಬೇಕು. ವೈದ್ಯರ ಸೂಚನೆ ಚೀಟಿಯಿಲ್ಲದೇ ಔಷಧಿ ನೀಡಬಾರದು. ಕೆಮ್ಮು, ಜ್ವರಕ್ಕಾಗಿ ಮಾತ್ರೆಗಳನ್ನು ಔಷಧಿ ಅಂಗಡಿಗಳಲ್ಲಿ ಜನರು ಕೇಳಿದರೆ ವೈದ್ಯರ ತಪಾಸಣೆಗೆ ಕಳುಹಿಸಬೇಕು’ ಎಂದರು.

ಜಿಗಣಿ ಪುರಸಭಾ ಮುಖ್ಯಾಧಿಕಾರಿ ಅಮರನಾಥ್‌, ಮುಖಂಡರಾದ ಬಾಬು, ಪ್ರವೀಣ್‌, ಗಿರೀಶ್‌, ಸುರೇಶ್‌ರೆಡ್ಡಿ, ನಾಗರಾಜು, ಮುರಳಿ, ಧರ್ಮೇಂದ್ರ, ರಾಕೇಶ್‌ ಹಾಜರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.